ಉಸ್ಮಾನಾಬಾದ್: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ರಾಜ್ಯದ ಮಾಜಿ ಸಚಿವ ಪದಮ್‌ಸಿನ್ಹ ಪಾಟೀಲ್ ವಿರುದ್ಧ ಸಲ್ಲಿಸಿದ್ದ ಹತ್ಯೆ ಸಂಚಿನ ದೂರಿನ ಕುರಿತು ಮಹಾರಾಷ್ಟ್ರ ಸಿಐಡಿ 9 ವರ್ಷಗಳ ಬಳಿಕ ಈಗಲೂ ತನಿಖೆ ನಡೆಸುತ್ತಿದೆಯೆಂದು ಆರ್‌ಟಿಐ ಪ್ರಶ್ನೆಗೆ ನೀಡಲಾದ
ಉತ್ತರದಲ್ಲಿ ತಿಳಿಸಲಾಗಿದೆ.
ತನ್ನನ್ನು ಕೊಲ್ಲಲು ಪರಸ್‌ಮಾಲ್ ಜೈನ್ ಎಂಬಾತನಿಗೆ ಪಾಟೀಲ್ ಹಾಗೂ ಇತರ ನಾಲ್ವರು ಸುಪಾರಿ ನೀಡಿದ್ದಾರೆಂದು ಹಜಾರೆ 2009ರ ಸೆಪ್ಟಂಬರ್‌ನಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪಾಟೀಲ್ ಅವರನ್ನು ಬಂಧಿಸಲಾಗಿತ್ತು . ಆದರೆ ಅನಂತರ ಕೋರ್ಟೊಂದು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಅಹ್ಮದ್‌ನಗರ್ ಜಿಲ್ಲೆಯ ಪಾರ್ನೆರ್ ಪೊಲೀಸ್ ಠಾಣೆಯಿಂದ ಅನಂತರ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದ ಸಿಐಡಿ, ಇನ್ನೂ ಪ್ರಕರಣದಲ್ಲಿ ಆರೋಪಪಟ್ಟಿಯನ್ನು ದಾಖಲಿಸಿಲ್ಲವೆಂದು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿ ಕೇಳಲಾದ ಪ್ರಶ್ನೆಗೆ ನೀಡಲಾದ ಉತ್ತರದಲ್ಲಿ ತಿಳಿಸಲಾಗಿದೆ.
ಪದಮ್‌ಸಿನ್ಹ ಪಾಟೀಲ್ ಅವರು ರಾಜಕೀಯ ವೈಷಮ್ಯದಿಂದ ಕಾಂಗ್ರೆಸ್ ನಾಯಕ ಪವನ್‌ರಾಜೆ ನಿಂಬಾಳ್ಕರ್ ಅವರನ್ನು ನವೀ ಮುಂಬಯಿಯ ಕಲಂಬೋಲಿಯಲ್ಲಿ ಹತ್ಯೆಗೈಯುವುದಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಈಗಾಗಲೇ ವಿಚಾರಣೆ ಎದುರಿಸುತ್ತಿದ್ದಾರೆ. ಪವನ್‌ರಾಜೆ ನಿಂಬಾಳ್ಕರ್ ಮೇಲೆ ಗುಂಡು ಹಾರಿಸಿದ ಆರೋಪಕ್ಕೊಳಗಾಗಿದ್ದ ಪರಸ್‌ಮಾಲ್ ಜೈನ್ ಈ ಹಿಂದೆ ಮ್ಯಾಜಿಸ್ಟ್ರೇಟ್ ಓರ್ವರಿಗೆ ನೀಡಿದ ಹೇಳಿಕೆಯಲ್ಲಿ ನಿಂಬಾಳ್ಕರ್ ಮತ್ತು ಹಜಾರೆ ಅವರನ್ನು ಹತ್ಯೆಗೈಯುವುದಕ್ಕೆ ಪಾಟೀಲ್ ಅವರು ತನಗೆ 30 ಲಕ್ಷ ರೂ.ಗಳನ್ನು ನೀಡಿದ್ದಾಗಿ ಹೇಳಿದ್ದ. ಆದರೆ ಹಜಾರೆ ಅವರನ್ನು ಕೊಲ್ಲುವುದಕ್ಕೆ ಹಣ ತೆಗೆದುಕೊಳ್ಳಲು ತಾನು ನಿರಾಕರಿಸಿದ್ದಾಗಿ ಕೂಡ ಜೈನ್ ತಿಳಿಸಿದ್ದ.
ಹಜಾರೆ ಅವರು ದಾಖಲಿಸಿದ ದೂರಿನ ಸ್ಥಿತಿಗತಿ ತಿಳಿಯುವುದಕ್ಕಾಗಿ ನಿಂಬಾಳ್ಕರ್ ಅವರ ಪುತ್ರ ಜೈರಾಜೆ ನಿಂಬಾಳ್ಕರ್ ಅವರು ಈಚೆಗೆ ಆರ್‌ಟಿಐ ಮೂಲಕ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಔರಂಗಾಬಾದ್‌ನ ಸಿಐಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಜೆ.ಕಾಂಬ್ಳೆ ಅವರು ಜೂ. 8ರಂದು ನೀಡಿದ ಉತ್ತರದಲ್ಲಿ ತನಿಖೆ ಈಗಲೂ ಸಾಗಿದೆ ಮತ್ತು ಈತನಕ ಆರೋಪಪಟ್ಟಿಯನ್ನು ದಾಖಲಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಮುನ್ನ ಪವನ್‌ರಾಜೆ ನಿಂಬಾಳ್ಕರ್ ಅವರ ಪತ್ನಿ ಆನಂದಿದೇವಿ ಅವರು ತನ್ನ ಪತಿಯ ಹತ್ಯೆಗೆ ಸಂಬಂಧಿಸಿ ಹಜಾರೆ ಅವರನ್ನು ಪ್ರಾಸಿಕ್ಯೂಶನ್ ಸಾಕ್ಷಿಯಾಗಿ ವಿಚಾರಣೆ ನಡೆಸುವುದಕ್ಕೆ ಸಿಬಿಐಗೆ ಅನುಮತಿ ನಿರಾಕರಿಸಿದ ಸೆಷನ್ಸ್ ಕೋರ್ಟು ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟು ಈ ಅರ್ಜಿಯ ವಿಚಾರಣೆಯನ್ನು ಜೂ. 27ಕ್ಕೆ ನಿಗದಿಗೊಳಿಸಿತ್ತು ಮತ್ತು ಆರೋಪಿಗಳ ಅಂತಿಮ ಹೇಳಿಕೆಗಳನ್ನು ದಾಖಲಿಸುವುದನ್ನು ಅಲ್ಲಿಯ ತನಕ ಮುಂದೂಡುವಂತೆ ವಿಚಾರಣಾ ಕೋರ್ಟಿಗೆ ಆದೇಶಿಸಿತ್ತು.