Advertisement

ಅನ್ನಬ್ರಹ್ಮನ ನಾಡಿನಲ್ಲಿ ಅನ್ನವೇ ಬ್ರಹ್ಮ

07:25 PM Nov 01, 2019 | Lakshmi GovindaRaju |

ಉಡುಪಿಯ ಶ್ರೀಕೃಷ್ಣಮಠ, ಕರ್ನಾಟಕ ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರದ ಜತೆ ವೇದಾಂತ ತತ್ತ್ವಜ್ಞಾನಾಚಾರ್ಯರಲ್ಲಿ ಒಬ್ಬರಾದ ಶ್ರೀಮಧ್ವಾಚಾರ್ಯರ ವೈಚಾರಿಕ ತಾಣ. ಮಧ್ವರು ಆರಂಭಿಸಿದ ಎಂಟು ಮಠಗಳ ಪೀಠಾಧೀಶರು ಒಂದಾದ ಮೇಲೆ ಇನ್ನೊಂದು ಸರದಿಯಂತೆ ಶ್ರೀಕೃಷ್ಣಮಠದ ಪೂಜೆ, ಆಚರಣೆಗಳನ್ನು ನಡೆಸಿಕೊಂಡು ಬರುವ ಹೊಣೆ ಹೊತ್ತಿರುತ್ತಾರೆ. ತಿರುಪತಿಯ ಶ್ರೀನಿವಾಸ “ಕಾಂಚನ ಬ್ರಹ್ಮ’, ಪಂಢರಾಪುರದ ವಿಟ್ಠಲ “ನಾದಬ್ರಹ್ಮ’, ಉಡುಪಿ ಶ್ರೀಕೃಷ್ಣ “ಅನ್ನಬ್ರಹ್ಮ’ನೆಂಬ ಪ್ರತೀತಿ ಇದೆ. ಇಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ನಿರಂತರ ಅನ್ನಸಂತರ್ಪಣೆ ನಡೆಯುವುದು ವಿಶೇಷ.

Advertisement

ಸಾಮಾನ್ಯ ದಿನಗಳಲ್ಲಿ 7,000 ಜನರು ಭೋಜನ ಪ್ರಸಾದ ಸ್ವೀಕರಿಸಿದರೆ, ಶನಿವಾರ, ರವಿವಾರ ಈ ಸಂಖ್ಯೆ 12,000 ಮೇಲ್ಪಟ್ಟಿರುತ್ತದೆ. ಚೂರ್ಣೋತ್ಸವ, ಮಕರಸಂಕ್ರಾಂತಿ, ವಿಟ್ಲಪಿಂಡಿ, ಸುಬ್ರಹ್ಮಣ್ಯ ಷಷ್ಠಿ, ನವರಾತ್ರಿ ಕೊನೆಯ ಮೂರು ದಿನ ಮೊದಲಾದ ಪರ್ವ ದಿನಗಳಲ್ಲಿ ಮತ್ತು ಡಿಸೆಂಬರ್‌ನಲ್ಲಿ ಅಯ್ಯಪ್ಪ ಸೀಸನ್‌ನಲ್ಲಿ 20,000 ಭಕ್ತರು, ಪರ್ಯಾಯೋತ್ಸವದ ವೇಳೆ 40,000 ಭಕ್ತರು ಭೋಜನ ಸ್ವೀಕರಿಸುತ್ತಾರೆ.

ಭಕ್ಷ್ಯ ಸಮಾಚಾರ
– ನಿತ್ಯ ಅನ್ನ, ತಿಳಿಸಾರು, ಸಾಂಬಾರು, ಪಾಯಸ, ಒಂದು ಸಿಹಿತಿಂಡಿ, ಮಜ್ಜಿಗೆ.
– ವಿಶೇಷ ದಿನಗಳಲ್ಲಿ ಹೆಚ್ಚುವರಿಯಾಗಿ ಪಲ್ಯ, ಕೋಸಂಬರಿ, ಚಟ್ನಿ, ಗಸಿ, 2- 3 ಬಗೆಯ ಸಿಹಿತಿಂಡಿ.
– ಬಾಳೆಎಲೆ ಮತ್ತು ಬಟ್ಟಲು ಊಟದ ವ್ಯವಸ್ಥೆ.
– ಕುಂಬಳಕಾಯಿ, ಚೀನಿ ಕುಂಬಳಕಾಯಿ, ಸೌತೆ ಕಾಯಿ- ಹೆಚ್ಚು ಬಳಸುವ ತರಕಾರಿ.
– ಟೊಮೇಟೊ, ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್‌, ಬೀಟ್‌ರೂಟ್‌, ಮೂಲಂಗಿ, ಹೂಕೋಸು ಇತ್ಯಾದಿ ವಿದೇಶಿ ಮೂಲದ ತರಕಾರಿ ಬಳಕೆ ಇಲ್ಲ.
– ಏಕಾದಶಿಯಂದು ಊಟವಿಲ್ಲ.

ಊಟದ ಸಮಯ
– ಮ.12ರಿಂದ 3 ಗಂಟೆ
– ರಾತ್ರಿ 8ರಿಂದ 10 ಗಂಟೆ

ಊಟವೂ ಒಂದು ಹರಕೆ: ಶ್ರೀಕೃಷ್ಣ ಮಠದಲ್ಲಿ ಕೃಷ್ಣ, ಮುಖ್ಯಪ್ರಾಣ, ಗರುಡ ದೇವರು ಪ್ರಧಾನವಾಗಿ ಪೂಜೆಗೊಳ್ಳುತ್ತಾರೆ. ಭೋಜನ ನಡೆಯುವ ಭೋಜನಶಾಲೆಯ ಕೆಳಗೂ ಮುಖ್ಯಪ್ರಾಣ ದೇವರ ಸನ್ನಿಧಿಯಿದೆ. ಇದು ಕಂಬದಲ್ಲಿ ಉದ್ಭವಿಸಿದ ವಿಗ್ರಹ ಎಂಬ ನಂಬಿಕೆ ಇದೆ. ಭೋಜನಶಾಲೆಯಲ್ಲಿ ತಯಾರಾದ ಎಲ್ಲ ಅಡುಗೆಯೂ ಈ ಮುಖ್ಯಪ್ರಾಣನಿಗೆ ಸಮರ್ಪಣೆಗೊಳ್ಳುತ್ತದೆ. ಭೋಜನಶಾಲೆಯಲ್ಲಿ ನೆಲವನ್ನು ಶುಚಿಗೊಳಿಸಿ, ಅದರ ಮೇಲೆ (ಎಲೆ, ಬಟ್ಟಲು ಇಲ್ಲದೆ) ಊಟ ಮಾಡುವ ವಿಶಿಷ್ಟ ಹರಕೆ ಇದೆ.

Advertisement

8 ಸ್ಟೀಮ್‌ ಬಾಯ್ಲರ್‌ಗಳು: ಅನ್ನ ಸಿದ್ಧಪಡಿಸಲು ಕಟ್ಟಿಗೆ ಒಲೆಯ ಸ್ಟೀಮ್‌ ಮತ್ತು ಅನಿಲ ಸಿಲಿಂಡರ್‌ ಸ್ಟೀಮ್‌ ಬಾಯ್ಲರ್‌ಗಳಿದೆ. ತಲಾ 2,000 ಲೀ. ಬೇಯಿಸುವ ನಾಲ್ಕು, ತಲಾ 1,000 ಲೀ. ಬೇಯಿಸುವ 4 ದೊಡ್ಡ ಬಾಯ್ಲರ್‌ಗಳಲ್ಲಿ ಅನ್ನ, ಪಾಯಸ, ಸಾರು, ಸಾಂಬಾರು ತಯಾರಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಕಟ್ಟಿಗೆ ಬೆಂಕಿಯಲ್ಲಿ ಅಡುಗೆ ತಯಾರಿಸಲಾಗುತ್ತದೆ.

ರಾಮ-ಲಕ್ಷ್ಮಣ ಕೊಪ್ಪರಿಗೆ: ಪರ್ಯಾಯೋತ್ಸವ, ಚೂರ್ಣೋತ್ಸವ ಮೊದಲಾದ ಪರ್ವದಿನಗಳಲ್ಲಿ ರಾಮ- ಲಕ್ಷ್ಮಣ ಎಂಬ ಜೋಡಿ ತಾಮ್ರದ ಕೊಪ್ಪರಿಗೆಯಲ್ಲಿ ಅನ್ನ, ಸಾರು, ಸಾಂಬಾರುಗಳನ್ನು ತಯಾರಿಸಲಾಗುತ್ತದೆ. ಆಗ ಭೋಜನಶಾಲೆ ಹೊರಗೆ ಇರುವ ಸ್ಥಳದಲ್ಲಿ ಕೊಪ್ಪರಿಗೆಯನ್ನಿಟ್ಟು, ಅಡುಗೆ ತಯಾರಿಸಲಾಗುತ್ತದೆ. ಈ ಅನ್ನಕ್ಕೆ ವಿಶೇಷ ದಿನಗಳಲ್ಲಿ ಪೂಜೆ (ಪಲ್ಲಪೂಜೆ) ನಡೆಸಿದ ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ.

ಸಂಖ್ಯಾ ಸೋಜಿಗ
7- ಕ್ವಿಂಟಲ್‌ ಅಕ್ಕಿ ನಿತ್ಯ ಬಳಕೆ
3- ಬಾಣಸಿಗರಿಂದ ಅಡುಗೆ ತಯಾರಿ
400- ತೆಂಗಿನಕಾಯಿ ಬಳಕೆ
1500- ವಿದ್ಯಾರ್ಥಿಗಳಿಗೆ ಭೋಜನ
5000- ಲೀಟರ್‌ ತಿಳಿಸಾರು
7000- ಮಂದಿಗೆ ನಿತ್ಯ ಅನ್ನಸಂತರ್ಪಣೆ
40,00,000- ಭಕ್ತರಿಂದ ಕಳೆದವರ್ಷ ಭೋಜನ ಸ್ವೀಕಾರ

ಕಳೆದ ಐದು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಅನ್ನದಾನವು, ದೇವರ ಸೇವೆ ಎಂದು ಭಾವಿಸಿ ಇಲ್ಲಿ ಕೆಲಸ ಮಾಡುವುದರಿಂದ ಮನಸ್ಸಿಗೆ ಸಂತೋಷವಿದೆ.
-ಗಣೇಶ, ಮುಖ್ಯ ಬಾಣಸಿಗ

ಶ್ರೀಕೃಷ್ಣಮಠಕ್ಕೆ ಎಷ್ಟೇ ಭಕ್ತರು ಆಗಮಿಸಿದರೂ, ಅವರಿಗೆ ಊಟ ಇಲ್ಲ ಎನ್ನುವುದಿಲ್ಲ. ಆಹಾರವನ್ನು ವ್ಯರ್ಥ ಮಾಡುವುದಿಲ್ಲ. ಇದು ಸ್ವಾಮೀಜಿಯವರ ಆಶಯ.
-ಪ್ರಹ್ಲಾದ ರಾವ್‌, ಆಡಳಿತಾಧಿಕಾರಿ
-ಹರಿಪ್ರಸಾದ ಭಟ್‌, ಕೊಠಾರಿ, ಪರ್ಯಾಯ ಶ್ರೀಪಲಿಮಾರು ಮಠ

* ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next