ಅಂಕೋಲಾ: ಮನೆಯಂಗಳದಲ್ಲಿ ನಿಲ್ಲಿಸಿಟ್ಟ ಸ್ಕೂಟರ್ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ 24 ಗಂಟೆಯೊಳಗೆ ಕಳ್ಳನ ಹೆಡಮುರಿ ಕಟ್ಟಿ ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಂಗಾವಳಿ ನಾಡುಮಾಸ್ಕೇರಿಯ ದರ್ಶನ ಮೋಹನ ಸಾರಂಗ್(18) ಸ್ಕೂಟರ್ ಕಳವು ಮಾಡಿದ ಆರೋಪಿ.
ತಾಲೂಕಿನ ಕೆಳಗಿನ ಮಂಜುಗುಣಿಯ ರಾಜು ತಾಂಡೇಲ್ ಅವರ ಮನೆಯ ಅಂಗಳದಲ್ಲಿದ್ದ ಸ್ಕೂಟರ್ ರಾತ್ರಿ ವೇಳೆ ಕಳ್ಳತನವಾದ ಬಗ್ಗೆ ಜು.10 ರಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ ನಿರ್ದೇಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಬದರೀನಾಥ ಪೊಲೀಸ್ ಉಪ ಅಧೀಕ್ಷಕ ವ್ಯಾಲಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿತ್ತು.
ಅಂಕೋಲಾ ಸಿ.ಪಿ.ಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಪೊಲೀಸ್ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳವು ಮಾಡಿದ ಸ್ಕೂಟರ್ ಕೆಎ30/ಡಬ್ಲ್ಯೂ1651 ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ನಂ. ಕೆಎ47/ವಿ6187 ಸಮೇತ ಕಳ್ಳನನ್ನು ಬಂಧಿಸಲಾಗಿದೆ.
ಇನ್ನೋರ್ವ ಅರೋಪಿಯ ಪತ್ತೆಗಾಗಿ ತಂಡ ರಚಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಪ್ರವೀಣ ಕುಮಾರ ಆರ್., ಸಿಬ್ಬಂದಿಗಳಾದ ಪರಮೇಶ ಎಸ್., ಶ್ರೀಕಾಂತ ಕೆ., ವಿಜಯ ಟಿ. ಭಾಗವಹಿಸಿದ್ದರು.
ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಬದರೀನಾಥ ಅಭಿನಂದಿಸಿದ್ದಾರೆ.