Advertisement

ಅಂಕೋಲಾ : ಅಗಲಿದ ಯೋಧನಿಗೆ ಸಾರ್ವಜನಿಕರಿಂದ ಅಂತಿಮ ವಿದಾಯ

08:13 PM Jan 05, 2023 | Team Udayavani |

ಅಂಕೋಲಾ : ಭಾರತೀಯ ಸೇನೆಯಲ್ಲಿ ಯೋಧನಾಗಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ಅಕಾಲಿಕವಾಗಿ ಮರಣ ಹೊಂದಿದ ಲಕ್ಷ್ಮೇಶ್ವರದ ಯೋಧ ನಾಗರಾಜ ಮುಕುಂದ ಕಳಸ ಇವರ ಪಾರ್ಥಿವ ಶರೀರವನ್ನು ಅಂಡಮಾನ್ ನಿಕೋಬಾರ (ಪೋರ್ಟ ಬ್ಲೇರ್) ನಿಂದ ಹೈದ್ರಾಬಾದ್ – ಗೋವಾ ಮಾರ್ಗವಾಗಿ ಗುರುವಾರ ನಸುಕಿನ ಜಾವ ಹುಟ್ಟೂರಾದ ಅಂಕೋಲಾದ ಲಕ್ಷ್ಮೇಶ್ವರದ ನಿವಾಸಕ್ಕೆ ತರಲಾಯಿತು.

Advertisement

ಬೆಳಿಗ್ಗೆಯಿಂದ ಕೆಲವು ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ತಾಲೂಕಾಡಳಿತದ ಪರವಾಗಿ ತಹಶೀಲ್ದಾರ ಉದಯ ಕುಂಬಾರ, ಸಿಪಿಐ ಸಂತೋಷ ಶೆಟ್ಟಿ, ಪಿ ಎ ಸೈ ಪ್ರವೀಣ ಕುಮಾರ, ನೌಕಾ ಸೇನೆಯ ಅಧಿಕಾರಿಗಳು, ಸ್ಥಳೀಯರಾದ ಆರ್ ಟಿ ಮಿರಾಶಿ, ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ), ಸುಜಾತಾ ಗಾಂವಕರ ಮತ್ತಿತರ ಗಣ್ಯರು ಅಂತಿಮ ನಮನ ಗೌರವ ಸಮರ್ಪಿಸಿದರು. ಭಾರತೀಯ ಸೇನೆಯ ಅಧಿಕಾರಿಗಳೊಂದಿಗೆ ಸ್ಥಳೀಯ ನೌಕಾ ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೂ ಹಾಜರಿದ್ದರು. ಸಾರ್ವಜನಿಕರಿಂದ ಅಂತಿಮ ದರ್ಶನದ ನಂತರ ಶೃಂಗರಿಸಲ್ಪಟ್ಟ ರಕ್ಷಕ ವಾಹನದಲ್ಲಿ ಐಸ್ ಫ್ಯಾಕ್ಟರಿ, ಕೆ.ಸಿ ರಸ್ತೆ , ಜೈ ಹಿಂದ್ ಸರ್ಕಲ್, ಕಣಕಣೇಶ್ವರ ಮಾರ್ಗವಾಗಿ ಮೆರವಣಿಗೆ ಮೂಲಕ ಕೋಡೆವಾಡದ ಮುಕ್ತಿ ಧಾಮಕ್ಕೆ ತಲುಪಿದರು.

ಮೌನದ ಮಧ್ಯೆ ಭಾರತಾಂಬೆಗೆ ಜಯವಾಗಲಿ. ವೀರ ಜವಾನ ಅಮರ್ ರಹೆ ಎಂದು ಸಾರ್ವಜನಿಕರು ಘೋಷಣೆ ಕೂಗುತ್ತಿದ್ದರು. ಶವ ಪೆಟ್ಟಿಗೆಗೆ ಹೊದೆಸಿದ್ದ ತ್ರಿವರ್ಣ ಧ್ವಜ, ಹುತಾತ್ಮನಾದ ಸಿಬ್ಬಂದಿಯ ಸಮವಸ್ತವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ದೇಶ ಸೇವೆಗೆ ಮಗನ ಕಳಿಸಿದ ತಂದೆಗೆ ಗೌರವ ಸಲ್ಲಿಸಲಾಯಿತು.

ಶಿಸ್ತು ಬದ್ಧ ಪಥಸಂಚಲನ, ಪುಷ್ಪ ಚಕ್ರ ಸಮರ್ಪಣೆ, ಮೌನಾಚರಣೆ ನಂತರ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ, ನಂತರ ವಾದ್ಯ ಭಾರಿಸಿ ಅಂತಿಮ ಗೌರವ ಸಮರ್ಪಿಸಿದ ತರುವಾಯ ತಂದೆ ಮುಕುಂದ ಕಳಸ ಚಿತೆಗೆ ಅಗ್ನಿ ಸ್ವರ್ಶ ಮಾಡಿದರು.

ಊರವರು, ಕುಟುಂಬಸ್ತರ ಸಹಕಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Advertisement

ಇದನ್ನೂ ಓದಿ: ಕಾಂಗ್ರೆಸ್‌ಗೆ ಸವಾಲು ಹಾಕದೆ ಬಿಜೆಪಿಯವರೇ ದಲಿತ ಸಿಎಂ ಘೋಷಿಸಲಿ; ಡಾ. ಪರಮೇಶ್ವರ್ ಸವಾಲು

 

Advertisement

Udayavani is now on Telegram. Click here to join our channel and stay updated with the latest news.

Next