ಮುಂಬೈ: ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ನಿಷೇಧ ಶಿಕ್ಷೆ ಅನುಭವಿಸುತ್ತಿರುವ ಸ್ಪಿನ್ನರ್ ಅಂಕಿತ್ ಚವಾನ್ ರ ನಿಷೇಧವನ್ನು ಬಿಸಿಸಿಐ ತೆರವುಮಾಡಿದೆ ಎಂದು ವರದಿ ತಿಳಿಸಿದೆ. ಇದರೊಂದಿಗೆ ಮುಂಬೈ ಮೂಲದ ಸ್ಪಿನ್ನರ್ ಗೆ ವೃತ್ತಿಪರ ಕ್ರಿಕೆಟ್ ಆಡಲು ಅನುಮತಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.
2013ರಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುತ್ತಿದ್ದ ಅಂಕಿತ್ ಚವಾನ್ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಂಧಿಸಲಾಗಿತ್ತು. ವೇಗಿ ಶ್ರೀಶಾಂತ್ ಮತ್ತು ಅಜಿತ್ ಚಂಡಿಲಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
2013 ಸಪ್ಟೆಂಬರ್ ನಲ್ಲಿ ಶ್ರೀಶಾಂತ್ ಮತ್ತು ಅಂಕಿತ್ ಚವಾನ್ ರನ್ನು ಬಿಸಿಸಿಐ ಅಜೀವ ನಿಷೇಧ ಶಿಕ್ಷೆಗೆ ಗುರಿಮಾಡಿತ್ತು.
ಆದರೆ 2015ರಲ್ಲಿ ದೆಹಲಿ ಕೋರ್ಟ್ ಇವರಿಗೆ ಪ್ರಕರಣದಿಂದ ಕ್ಲೀನ್ ಚಿಟ್ ನೀಡಿತ್ತು. ಎಲ್ಲಾ ಸ್ಪಾಟ್ ಫಿಕ್ಸಿಂಗ್ ಆರೋಪಗಳಿಂದ ಮುಕ್ತಗೊಳಿಸಿತ್ತು.
ಕಳೆದ ವರ್ಷ ಶ್ರೀಶಾಂತ್ ಅವರ ನಿಷೇಧವನ್ನು ತೆರವು ಮಾಡಲಾಗಿತ್ತು. ಬಳಿಕ ಶ್ರೀಶಾಂತ್ ವೃತ್ತಿಪರ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿದ್ದು, ಕಳೆದ ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ರಾಜ್ಯ ತಂಡದ ಪರ ಆಡಿದ್ದರು