Advertisement

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಅಂಜುಮನ್‌ ಮನವಿ

12:51 PM Apr 30, 2020 | Suhan S |

ಹುಬ್ಬಳ್ಳಿ:  ಕೋವಿಡ್ 19 ಸೋಂಕಿತನ ಸಹೋದರ ಆಸ್ಪತ್ರೆಯಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಆತನನ್ನು ಮುಲ್ಲಾ ಓಣಿಯಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ಸ್ವಾಗತ ಮಾಡಿದ್ದಾರೆ ಎನ್ನಲಾದ ಘಟನೆಯನ್ನು ಅಂಜುಮನ್‌ ಇಸ್ಲಾಂ ಸಂಸ್ಥೆ ಖಂಡಿಸಿದೆ.

Advertisement

ಈ ಕುರಿತು ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಅಧ್ಯಕ್ಷ ಮಹ್ಮದ್‌ ಯೂಸೂಫ್‌ ಸವಣೂರು ಹಾಗೂ ಉಪಾಧ್ಯಕ್ಷ ಅಲ್ತಾಫ್‌ ಕಿತ್ತೂರು ಅವರು ಮುಲ್ಲಾ ಓಣಿಯಲ್ಲಿ ನಡೆದಿರುವ ಘಟನೆ ಖಂಡಿಸಿ ತಪ್ಪಿಸ್ಥತರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಕೋವಿಡ್ 19  ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಲ್ಲಾ ಓಣಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ಸೋಂಕಿತನ ಸಹೋದರನನ್ನು ಗುಂಪಾಗಿ ಸೇರಿ ಸ್ವಾಗತ ಕೋರಿರುವುದು ಸರಕಾರದ ನಿಯಮಗಳ ಉಲ್ಲಂಘನೆಯಾಗಿದೆ.  ಮೆರವಣಿಗೆ ಮೂಲಕ ಕರೆದುಕೊಂಡು ಹೋಗುವ ಅಗತ್ಯವಿರಲಿಲ್ಲ. ಮುಲ್ಲಾ ಓಣಿಯಿಂದಲೇ ಕೊರೊನಾ ಸೋಂಕು ಓಡಿಸಿದಂತೆ ಬಿಂಬಿಸಿರುವುದು ಸರಿಯಲ್ಲ. ಸೋಂಕಿತರನ್ನು ರಕ್ಷಿಸಲು ವೈದ್ಯಕೀಯ ಸಿಬ್ಬಂದಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಇನ್ನೂ ಸೋಂಕು ನಿಯಂತ್ರಣಕ್ಕೆ ಪೊಲೀಸ್‌, ಪೌರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ಹೀಗಾಗಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೆ ಜಿಲ್ಲಾಡಳಿತವೇ ನೇರವಾಗಿ ಮನೆಗೆ ತಲುಪಿಸುವ ಕೆಲಸ ಮಾಡುವ ಮೂಲಕ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next