ಗಂಗಾವತಿ: ಇತಿಹಾಸ ಪ್ರಸಿದ್ಧ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸಲು ಈ ಹಿಂದಿನ ಬಿಜೆಪಿ ಸರಕಾರ 100 ಕೋಟಿ ರೂ. ಟೆಂಡರ್ ಕರೆದು ಕಾರ್ಯಾದೇಶವನ್ನು ನೀಡಿದ್ದು, ಶಾಸಕ ಗಾಲಿ ಜನಾರ್ದನ ರೆಡ್ಡಿ ಅನುದಾನ ಬಿಡುಗಡೆಯಾಗಿಲ್ಲ ಎಂದು ವಿಧಾನಸಭೆ ಅಧಿ ವೇಶನದಲ್ಲಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಎರಡು ಬಾರಿ ಅಂಜನಾದ್ರಿಗೆ ಆಗಮಿಸಿ ಇಲ್ಲಿ ಮೂಲಸೌಕರ್ಯ ಕಲ್ಪಿಸುವ ಕುರಿತು ಅ ಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ 20 ಕೋಟಿ ನಂತರ ಬೊಮ್ಮಾಯಿಯವರು 100 ಕೋಟಿ ಅನುದಾನ ನೀಡಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರಕಾರ ಬಜೆಟ್‌ನಲ್ಲಿ ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ. ಬಿಡಿಗಾಸನ್ನು ಮೀಸಲಿಟ್ಟಿಲ್ಲ. ಈ ಸರಕಾರವನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಟೀಕಿಸಬೇಕು. ಅದು ಬಿಟ್ಟು ಬಿಜೆಪಿ ಸರಕಾರ ಯಾವುದೇ ಅನುದಾನ ನೀಡಿಲ್ಲ ಎನ್ನುವುದು ಶುದ್ಧ ಸುಳ್ಳಾಗಿದೆ.
600 ವಸತಿ ಗೃಹಗಳ ನಿರ್ಮಾಣಕ್ಕೆ 21.34 ಕೋಟಿ, ಭೋಜನ ಶಾಲೆ ನಿರ್ಮಾಣಕ್ಕೆ 5.32 ಕೋಟಿ, ಸಮುದಾಯ ಭವನಕ್ಕೆ 1.44 ಕೋಟಿ, ಪಾರ್ಕಿಂಗ್ ಜಾಗಕ್ಕೆ 6.46 ಕೋಟಿ, ವಾಣಿಜ್ಯ ಮಳಿಗೆ ಶೌಚಾಲಯಕ್ಕೆ 3.36 ಕೋಟಿ, ದೇವಸ್ಥಾನ ಪ್ರವೇಶದ ಖಾಲಿ ಜಾಗದ ಅಭಿವೃದ್ಧಿಗೆ 4.84 ಕೋಟಿ, ಪ್ರದಕ್ಷಿಣಾ ಪಥಕ್ಕೆ 1.83 ಕೋಟಿ, ಸ್ನಾನ ಘಟ್ಟಕ್ಕೆ 5.79 ಕೋಟಿ, ಅತಿಥಿಗೃಹ ನಿರ್ಮಾಣಕ್ಕೆ 3.04 ಕೋಟಿ, ಸಿಬ್ಬಂದಿ ವಸತಿ ಗೃಹ 20 ಮನೆಗಳ ನಿರ್ಮಾಣಕ್ಕೆ 8.85 ಕೋಟಿ, ವ್ಯಾಖ್ಯಾನ ಕೇಂದ್ರ ನಿರ್ಮಾಣಕ್ಕೆ 34.28 ಕೋಟಿ, 30 ಮೀಟರ್ ರಸ್ತೆ ನಿರ್ಮಾಣಕ್ಕೆ 3.23 ಕೋಟಿ ಒಟ್ಟು 100 ಕೋಟಿ ರೂ. ಕಾಮಗಾರಿಗೆ ಇ ಟೆಂಡರ್ ಕರೆದು ವಿ.ಬಿ. ಪ್ರಸಾದ ರೆಡ್ಡಿ ಎನ್ನುವ ಗುತ್ತಿಗೆದಾರರಿಗೆ ಕಾಮಗಾರಿಯ ಕಾರ್ಯಾದೇಶ ವಿತರಿಸಲಾಗಿದೆ.
ಧಾರ್ಮಿಕ ದತ್ತಿ ಮತ್ತು ಪ್ರವಾಸೋದ್ಯಮ ಇಲಾಖೆಗಳ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುವಂತೆ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ಆದರೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಸದನದಲ್ಲಿ ಅಂಜನಾದ್ರಿ ಅಭಿವೃದ್ಧಿ ವಿಷಯ ಪ್ರಸ್ತಾಪಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಕೃಷಿ ಮಹಾವಿದ್ಯಾಲಯದ ವಿಷಯದಲ್ಲೂ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ. ಈಗಾಗಲೇ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣ ಕಾರ್ಯ ನಡೆದಿದೆ.
ಕೆಕೆಡಿಬಿಯಿಂದ 105 ಕೋಟಿ ರೂ. ಹಣಕಾಸು ಕೇಳಿದ್ದು, ಬಿಜೆಪಿ ಸರಕಾರದ ಅವಧಿ ಯಲ್ಲೇ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆದಿದ್ದವು. ಈಗ ಹೆಚ್ಚುವರಿ ಹಣ ಮಂಜೂರಿ ಮಾಡಿಸುವ ಕಾರ್ಯ ಜನಾರ್ದನ ರೆಡ್ಡಿ ಬೇಕು. ಇದನ್ನು ಬಿಟ್ಟು ಈ ಹಿಂದಿನ ಸರಕಾರ ಏನು ಅನುದಾನ ಕೊಟ್ಟಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಮಾಜಿ ಶಾಸಕ ಮುನವಳ್ಳಿ ತಿಳಿಸಿದ್ದಾರೆ.