Advertisement

ರತ್ನಪುರಿಯಲ್ಲಿ ಆಂಜನೇಯಸ್ವಾಮಿ ಜಾತ್ರೆ, ಉರೂಸ್‌

05:34 PM Mar 18, 2022 | Team Udayavani |

ಹುಣಸೂರು: ಹಿಂದೂ-ಮುಸ್ಲಿಮರ ಭಾವೈಕ್ಯತೆ ಸಾರುವ ರತ್ನಪುರಿ(ದರ್ಗಾ)ಯ ಶ್ರೀ ಆಂಜನೇಯಸ್ವಾಮಿಯ ಮಹಾಭಿಷೇಕ, ಪಲ್ಲಕಿ ಉತ್ಸವ ಹಾಗೂ ಜಮಾಲ್‌ ಬೀಬಿ ಮಾಸಾಹೇಬರ ಗಂಧೋತ್ಸವ(ಉರೂಸ್‌) ಶುಕ್ರವಾರ ದಿಂದ ಸೋಮವಾರವರೆಗೂ ನಡೆಯಲಿದೆ. ನೂರಾರು ವರ್ಷಗಳ ಐತಿಹ್ಯವಿರುವ ಈ ಜಾತ್ರೆ- ಉರೂಸ್‌ಗೆ ಜಾನುವಾರುಗಳ ಪರಿಷೆಯೇ ಪ್ರಮುಖ ಆಕರ್ಷಣೆ. ತಾಲೂಕಿನ ಉದ್ದೂರ್‌ಕಾವಲ್‌, ಉಯಿ ಗೊಂಡನಹಳ್ಳಿ, ಧರ್ಮಾಪುರ, ಅಸ್ಪತ್ರೆಕಾವಲ್‌ ಗ್ರಾಪಂ ವ್ಯಾಪ್ತಿಯ 50ಕ್ಕೂ ಹಳ್ಳಿಗರು ಜಾತ್ರಾ ಯಶಸ್ಸಿಗೆ ದುಡಿವರು.

Advertisement

ರಾಜ್ಯದ ವಿವಿಧೆಡೆಯಿಂದ ಭಕ್ತರು ಭಾಗವಹಿಸಲಿರುವ ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದು, ಉಳಿದಂತೆ ಉತ್ಸವ, ಕೊಂಡೋತ್ಸವ, ಗಂಧೋತ್ಸವ ಹಾಗೂ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳದ್ದೇ ಮತ್ತೂಂದು ವಿಶೇಷ, ಆಂಜನೇಯಸ್ವಾಮಿ ದೇವಾಲಯ ಹಾಗೂ ಜಮಾಲ್‌ ಬೀಬಿಮಾಸಾಹೇಬರ ದರ್ಗಾವು ಜಾತ್ರಾಮಾಳದಲ್ಲಿರುವುದು ಭಾವೈಕ್ಯತೆಯ ಪ್ರತೀಕ.

ಆಂಜನೇಯ ಸ್ವಾಮಿಗೆ ಮಹಾಭಿಷೇಕ: ಶ್ರೀಆಂಜನೇಯ ಸ್ವಾಮಿ ದೇಗುಲ ಸಮಿತಿಯಿಂದ ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಕೊಂಡೋತ್ಸವ ನಡೆಯಲಿದೆ. ಉತ್ಸವ ದಂದು ಅನ್ನದಾನ ಆಯೋಜಿಸಲಾಗಿದೆ. ಜಾತ್ರಾಮಾಳ ಪಕ್ಕದಲ್ಲೆ ಇರುವ ಸಂತೆಕೆರೆಯ ದೊಡ್ಡಕೆರೆಯಲ್ಲಿ ಸ್ನಾನ ಮಾಡಿ ಉತ್ಸವದಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಸಾಂಸ್ಕೃತಿಕ ಕಲಾತಂಡಗಳ ವೈಭವ ಇಡೀ ಜಾತ್ರೆಗೆ ಕಳೆಕಟ್ಟಲಿದೆ.

ಭಾನುವಾರ ಗಂಧೋತ್ಸವ: ಜಮಾಲ್‌ಬೀಬಿ ಮಾಸಾಹೇಬರ ದರ್ಗಾಕ್ಕೆ ಮುಸ್ಲಿಮರು ಹುಣಸೂರು, ಕುಡಿನೀರುಮುದ್ದನಹಳ್ಳಿಗಳಿಂದ ಗಂಧವನ್ನು ಮೆರವಣಿಗೆ ಯಲ್ಲಿ ತಂದು ಗೋರಿಗೆ ಪೂಜೆ ಸಲ್ಲಿಸಿ, ಗಂಧೋತ್ಸವ ನೆರವೇರಿಸುವರು.

ಧೂಪ-ದೀಪ: ಹಿಂದೂ-ಮುಸ್ಲಿಂ ಎನ್ನದೆ ಗೋರಿ ಬಳಿ ಧೂಪ ಹಾಕಿ, ತುಪ್ಪದ ದೀಪ ಹಚ್ಚಿ ಹರಕೆ ತೀರಿಸುವುದು ಇಲ್ಲಿನ ವಾಡಿಕೆ, ಜರಬ್‌ ಸಾಹಸ ಪ್ರದರ್ಶನವಿರಲಿದೆ.

Advertisement

ಕಾರ್ಯಕ್ರಮ ವಿವರ: ಶುಕ್ರವಾರ ಮುಂಜಾನೆ 5ರಿಂದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹೋಮ, ಹವನ, ಮಹಾಭಿಷೇಕ. ಶನಿವಾರ ಬೆಳಗ್ಗೆ 6ಕ್ಕೆ ಆಂಜನೇಯಸ್ವಾಮಿಗೆ ಮಹಾಮಂಗಳಾರತಿ, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ವಿವಿಧ ಕಲಾ ತಂಡದೊಂದಿಗೆ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ. ಭಾನುವಾರ ರಾತ್ರಿ 7 ಗಂಟೆಗೆ ಜಮಾಲ್‌ಬಿàಬಿ ಮಾಸಾಹೇಬರ ಗಂಧೋತ್ಸವ ಹಾಗೂ ರಾತ್ರಿ 8ಕ್ಕೆ ನಟ ದಿ.ಪುನೀತ್‌ರಾಜ್‌ಕುಮಾರ್‌ಗೆ ನಮನ-ರಸಮಂಜರಿ. ಸೋಮವಾರ ಉತ್ತಮರಾಸುಗಳಿಗೆ ಎ.ಪಿ.ಎಂ. ಸಿವತಿಯಿಂದ ಬಹುಮಾನ ವಿತರಣೆ ನಡೆಯಲಿದೆ ಎಂದು ಜಾತ್ರಾಸಮಿತಿ ಅಧ್ಯಕ್ಷ ಪ್ರಭಾಕರ್‌ ಮತ್ತು ಕಾರ್ಯದರ್ಶಿ ರಾಜು ತಿಳಿಸಿದ್ದಾರೆ.

ಹಿಂದೂ- ಮುಸ್ಲಿಮರು ಸೇರಿ ಆಚರಿಸುವ ಪಲ್ಲಕ್ಕಿ ಉತ್ಸವ-ಉರೂಸ್‌ ಭಾವೈಕ್ಯದ ಪ್ರತೀಕ, ದರ್ಗಾದಲ್ಲಿ ಎಲ್ಲರೂ ಒಟ್ಟಾಗಿ ಧೂಪ ಹಾಕುವ, ಎಳ್ಳೇಣ್ಣೆ ಬತ್ತಿಯ ದೀಪ ಹಚ್ಚುವುದು ಮತ್ತೂಂದು ವಿಶೇಷ. ಈ ಜಾತ್ರೆಯನ್ನು ಅಕ್ಕ-ಪಕ್ಕದ ಗ್ರಾಮಸ್ಥರು ಸೇರಿ ಒಟ್ಟಾಗಿ ಆಚರಿಸುತ್ತೇವೆ.

  • ನಂದೀಶ್‌, ಗ್ರಾಪಂ ಅಧ್ಯಕ್ಷ, ಉದ್ದೂರು ಕಾವಲ್‌

ರತ್ನಪುರಿ ಗ್ರಾಮದಲ್ಲಿ ಹಲವು ಸಮುದಾಯಗಳು ವಾಸಿಸುತ್ತಿದ್ದು. ನಾವೆಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ. ಎಲ್ಲರೂ ಸಮನ್ವಯತೆಯಿಂದ ಉತ್ಸವ-ಉರೂಸ್‌ ಆಚರಿಸುತ್ತೇವೆ. ಕ್ರೀಡಾ ಮನೋಭಾವದಿಂದ ನಡೆದುಕೊಳ್ಳುತ್ತೇವೆ.

  • ಮನುಕುಮಾರ್‌, ಗ್ರಾಪಂ ಸದಸ್ಯ, ನಂಜಾಪುರ

 

  • ಸಂಪತ್‌ ಕುಮಾರ್‌ ಹುಣಸೂರು
Advertisement

Udayavani is now on Telegram. Click here to join our channel and stay updated with the latest news.

Next