ಶಿವಗಂಗೆಯಿಂದ ನಾಲ್ಕು ಕಿ.ಮೀ ದೂರದಲ್ಲಿ ಶ್ರೀಗಿರಪುರವಿದೆ. ಇಲ್ಲಿ ಪ್ರಸಾದ ಆಂಜನೇಯ ಸ್ವಾಮಿಯ ದೇವಾಲಯವಿದೆ. ರಾಜಸೂಯಯಾಗದ ಸಂದರ್ಭದಲ್ಲಿ ಅರ್ಜುನನು ಈ ದೇವಾಲಯದ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಎಂದು ಹೇಳಲಾಗುತ್ತದೆ…
ಹಿಂದಿನ ಕಾಲದಲ್ಲಿ ಊರಿನವರನ್ನು ರಕ್ಷಣೆಮಾಡಲು ಉರಹೊರಗೆ ಹನುಮಪ್ಪನ ಗುಡಿ ಇರುತ್ತಿತ್ತು. ಹೀಗಾಗಿ ನಮ್ಮ ನಾಡಿನಾದ್ಯಂತ ಅಂಥ ಪೌರಾಣಿಕ ಹಿನ್ನೆಲೆ ಹೊಂದಿದವೂ ಸೇರಿದಂತೆ ಅನೇಕ ಆಂಜನೇಯನ ದೇವಸ್ಥಾನಗಳಿವೆ. ಅವುಗಳಲ್ಲಿ ಒಂದು ದ್ವಾಪರಯುಗದಲ್ಲಿ ಅರ್ಜುನದೇವರಿಂದ ಪ್ರತಿಷ್ಠಾಪಿತವಾದದ್ದು ಎನ್ನಲಾಗುವ ಶ್ರೀಗಿರಿಯ ಪ್ರಸಾದ ಅಂಜನೇಯಸ್ವಾಮಿ.
ತುಮಕೂರಿನ ಶಿವಗಂಗೆಯಿಂದ ನಾಲ್ಕೈದು ಕಿ.ಮೀ ಮುಂದೆ ಬಂದರೆ ನಿಮಗೆ ಸಿಗುವುದೇ ಶ್ರೀಗಿರಿಪುರ. ಇತಿಹಾಸ ಪ್ರಸಿದ್ಧ ಈ ಗ್ರಾಮದಲ್ಲಿ ಅನೇಕ ದೇವಸ್ಥಾನಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಶ್ರೀ ಪ್ರಸಾದ ಆಂಜನೇಯಸ್ವಾಮಿ ದೇವಾಲಯ. ಮಹಾಭಾರತ ಯುದ್ಧವೆಲ್ಲಾ ಮುಗಿದ ಮೇಲೆ ನಡೆದ ರಾಜಸೂಯ ಯಾಗದ ಸಂದರ್ಭದಲ್ಲಿ ಅರ್ಜುನನು ಈ ದೇವಾಲಯ ಪ್ರತಿಷ್ಠಾಪಿಸಿದವರೆಂದೂ, ಆ ನಂತರ ಜನುಮೇಜಯ ರಾಜರ ಕಾಲದಲ್ಲಿ ಈ ದೇವಸ್ಥಾನ ಜೀರ್ಣೋದ್ದಾರವಾಗಿತ್ತು ಎಂದೂ ಹೇಳಲಾಗುತ್ತದೆ.
ಇಲ್ಲಿರುವ ಹನುಮನಮೂರ್ತಿ ಅಜಾನುಬಾಹುಮೂರ್ತಿಯಾಗಿದ್ದು ಸಾಲಿಗ್ರಾಮ ಶಿಲೆಯಿಂದ ಮಾಡಿದ್ದಾಗಿದೆ. ಮೂರ್ತಿ ನೋಡಲು ಭವ್ಯವಾಗಿದ್ದು ಸುಮಾರು ಹತ್ತೂವರೆ ಅಡಿ ಎತ್ತರ ಹಾಗೂ ಆರೂವರೆ ಅಡಿ ಅಗಲವಿದೆ. ಅಭಯಹಸ್ತದಿಂದ ಕೂಡಿರುವ ಹನುಮನ ಮೂರ್ತಿ ನೋಡಲು ಬಹಳ ಸುಂದರವಾಗಿದೆ. ಈ ವಿಗ್ರಹದಲ್ಲಿ ಹನುಮ, ಭೀಮ ಮಧ್ವರ ಅವತಾರಗಳನ್ನು ಕಾಣಬಹುದಾಗಿದೆ. ಶ್ರೀಗಿರಿಪುರದ ಗ್ರಾಮಸ್ಥರಿಗೆ ಈ ಆಂಜನೇಯ ಬೇಡಿಕೆಗಳನ್ನು ಈಡೇರಿಸುವ ಕಲಿಯುಗದ ಕಾಮಧೇನುವಾಗಿದ್ದಾನೆ. ಕಷ್ಟ ಎಂದು ಬಂದ ಯಾರನ್ನೂ, ಯಾವತ್ತೂ ಈ ಹನುಮಪ್ಪ ಕೈಬಿಟ್ಟಿದ್ದಿಲ್ಲ. ಗ್ರಾಮದಲ್ಲಿ ಏನೇ ಶುಭ ಕಾರ್ಯವಾಗಬೇಕಾದರೂ ಈ ಹುನುಮಪ್ಪನ ಹೂವಿನ ಪ್ರಸಾದ ದೊರೆತ ನಂತರವೇ ಮುಂದುವರೆಯುವುದು.
ಗ್ರಾಮಸ್ಥರ ಹಾಗೂ ಭಕ್ತ ಮಹಾಜನಗಳ ಸಹಕಾರದಿಂದ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನೂತನ ಕಲ್ಲಿನ ದೇವಾಲಯವನ್ನು ನಿರ್ಮಿಸಲಾಗಿದ್ದು, ಇದು ಅತ್ಯಾಕರ್ಷಕವಾಗಿದೆ. ಗ್ರಾಮದಲ್ಲಿ ಏನೇ ಶುಭಕಾರ್ಯವಿರಲಿ, ಭಕ್ತರು ದೇವರ ಬಳಿ ಹೂ ಪ್ರಸಾದ ಕೇಳದೆ ಮುಂದುವರೆಯುವುದಿಲ್ಲ. ಮದುವೆಗೆ ಇಲ್ಲಿ ಸಾಲಾವಳಿ ಕೇಳುವುದಿಲ್ಲ. ಹನುಮಪ್ಪ ಹೂ ಪ್ರಸಾದ ಕೊಟ್ಟನೆಂದರೆ ಮುಗಿಯಿತು.
ಹನುಮ ಜಯಂತಿ, ಮಧ್ವನವಮಿಯನ್ನು ಇಲ್ಲಿ ಬಹಳ ವಿಜೃಂಬಣೆಯಿಂದ ಆಚರಿಸುತ್ತಾರೆ. ಶಿವಗಂಗೆಯ ತಪ್ಪಲಿನಲ್ಲಿರುವ ಈ ಪ್ರಸಾದ ಆಂಜನೇಯಸ್ವಾಮಿ ದೇವಸ್ಥಾನದ ಪ್ರಶಾಂತ ವಾತಾವರಣ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.
ಮಾರ್ಗ-
ಬೆಂಗಳೂರಿಂದ ತುಮಕೂರಿಗೆ ಹೋಗುವಾಗ ದಾಬಸ್ ಪೇಟೆಯ ಮೇಲುಸೇತುವೆಯ ಬಳಿಯ ಹೆದ್ದಾರಿಯಲ್ಲಿ ಎಡಕ್ಕೆ ತಿರುಗಿ ಶಿವಗಂಗೆ ಬೆಟ್ಟ ತಲುಪಬಹುದು. ಶಿವಗಂಗೆಯಿಂದ ನಾಲ್ಕು ಕಿಮೀ ಹೋದರೆ ಶ್ರೀಗಿರಿಪುರ ಸಿಗುತ್ತದೆ.
ಪ್ರಕಾಶ್ ಕೆ ನಾಡಿಗ್ ತುಮಕೂರು