Advertisement
ಈ ಮಧ್ಯೆ ಮತ್ತೊಂದು ನೂತನ ಸುರಂಗ ಮಾರ್ಗದಲ್ಲಿ ಈಗಾಗಲೇ ಆಲ್‌ಸೇಂಟ್ ಚರ್ಚ್‌ನ ಸದಸ್ಯರಿಂದ ವಿರೋಧ ವ್ಯಕ್ತವಾಗಿದ್ದು, ಅದು ಕೂಡ ಕಗ್ಗಂಟಾಗಿದೆ. 18.82 ಕಿ.ಮೀ. ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಮೆಟ್ರೋ ಮಾರ್ಗದಲ್ಲಿ ಒಟ್ಟಾರೆ ಮೂರು ದೇವಸ್ಥಾನಗಳು ಬರುತ್ತವೆ. ಆ ಮೂರೂ ಆಂಜನೇಯ ಸ್ವಾಮಿ ದೇವಸ್ಥಾನಗಳೇ ಆಗಿವೆ. ಈ ಪೈಕಿ ಭಕ್ತರ ಮನವೊಲಿಸಿ ಬೊಮ್ಮನಹಳ್ಳಿಯ ಕಂಬದ ಆಂಜನೇಯ ದೇವಸ್ಥಾನ ತೆರವುಗೊಳಿಸುವಲ್ಲಿ ಬಿಎಂಆರ್‌ಸಿಎಲ್ ಯಶಸ್ವಿಯಾಗಿದೆ.
Related Articles
Advertisement
ಸುಮಾರು 160 ಚದರ ಮೀಟರ್ ಜಾಗವನ್ನು ವಶಪಡಿಸಿಕೊಳ್ಳುತ್ತಿದ್ದು, ಇದಕ್ಕೆ ಬದಲಾಗಿ ಪಕ್ಕದಲ್ಲೇ 175 ಚದರ ಮೀಟರ್ ಜಾಗವನ್ನು ನೀಡಲಾಗುತ್ತಿದೆ. ಜತೆಗೆ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚವನ್ನೂ ಭರಿಸಿಕೊಡಲಾಗುವುದು ಎಂದೂ ಹೇಳಿದೆ. ಸಹಮತ ಸಿಗುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ಮೂರನೇ ಬಾರಿ ಶಿಫ್ಟ್?: “ಈಗಾಗಲೇ ಇದ್ದಂತಹ ಶೆಡ್, ಶೌಚಾಲಯ ತೆರವುಗೊಳಿಸಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಕಡಿಮೆ ಆಗಿದೆ. ರಾಜಕಾರಣಿಗಳೂ ಒತ್ತಡ ಹಾಕುತ್ತಿದ್ದಾರೆ. ರಸ್ತೆ ವಿಸ್ತರಣೆಗಾಗಿ ಈ ಮೊದಲು ಎರಡು ಬಾರಿ ದೇವಸ್ಥಾನ ಸ್ಥಳಾಂತರಗೊಂಡಿದೆ. ಈಗ ಮತ್ತೆ ಮೆಟ್ರೋಗಾಗಿ ಸ್ಥಳಾಂತರಿಸುತ್ತಿದ್ದಾರೆ. ಮತ್ತೆ ಎಲ್ಲಿಗೆ ಹೋಗುವುದು?’ ಎಂದು ರೂಪೇನ ಅಗ್ರಹಾರ ಆಂಜನೇಯ ದೇವಸ್ಥಾನದ ಅರ್ಚಕ ರಾಮಕೃಷ್ಣ ತಿಳಿಸುತ್ತಾರೆ.
ಆಗಲೂ ಬಿಟ್ಟಿಲ್ಲ; ಈಗಲೂ ಬಿಡಲ್ಲ: “1992ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಿಸ್ ರಸ್ತೆ ನಿರ್ಮಿಸಲು ಮುಂದಾದಾಗಲೂ ಹೋರಾಟ ಮಾಡಿ, ಈ ಪುರಾತನ ದೇವಾಲಯವನ್ನು ನಾವು ಉಳಿಸಿಕೊಂಡಿದ್ದೇವೆ. ಈಗಲೂ ಅಗತ್ಯಬಿದ್ದರೆ ಹೋರಾಟದ ಮೂಲಕ ಉಳಿಸಿಕೊಳ್ಳುತ್ತೇವೆ. ದೇವಸ್ಥಾನದ ಹಿಂದೆ ಜಾಗ ತೋರಿಸಿದ್ದಾರೆ. ಆದರೆ, ಸನಾತನ ಧರ್ಮ ಮತ್ತು ವಾಸ್ತು ಪ್ರಕಾರ ದೇವಸ್ಥಾನಗಳು ದಕ್ಷಿಣಕ್ಕೆ ಅಥವಾ ಪಶ್ಚಿಮಕ್ಕೆ ಸ್ಥಳಾಂತರ ಆಗಬಾರದು.
ಈ ಬಗ್ಗೆ ಪ್ರಧಾನಿಯಿಂದ ಹಿಡಿದು ಸಂಸದರವರೆಗೂ ಪತ್ರಗಳನ್ನು ಬರೆದಿದ್ದೇವೆ’ ಎಂದು ದೇವಸ್ಥಾನದ ಅರ್ಚಕ ಬಿ.ಜಿ. ಚನ್ನಕೇಶವ ತಿಳಿಸುತ್ತಾರೆ. ಅಷ್ಟಕ್ಕೂ ಈ ಮೊದಲು ಸ್ವತಃ ಬಿಎಂಆರ್‌ಸಿಎಲ್, ಮೆಟ್ರೋ ಮಾರ್ಗಕ್ಕಾಗಿ ದೇವಸ್ಥಾನ ತೆರವುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈಗ ಏಕಾಏಕಿ ಮತ್ತೆ ತನ್ನ ನಿಲುವು ಬದಲಿಸಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಅದೇ ರೀತಿ, ಗರ್ವೇಬಾವಿಪಾಳ್ಯದ ಆಂಜನೇಯ ದೇವಸ್ಥಾನಕ್ಕಿಂತಲೂ ಎಚ್‌ಎಸ್‌ಆರ್ ಮೆಟ್ರೋ ನಿಲ್ದಾಣದ ಬಳಿ ಇರುವ ರೂಪೇನ ಅಗ್ರಹಾರದ ಆಂಜನೇಯಸ್ವಾಮಿ ದೇವಸ್ಥಾನ ಹಳೆಯದಾಗಿದೆ. ಅಲ್ಲಿನ ಭಕ್ತರು ಕೂಡ ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಪೂರಕ ಸ್ಪಂದನೆಯೂ ಸಿಕ್ಕಿದ್ದು, ಸ್ಥಳಾಂತರ ನಿರ್ಧಾರದಿಂದ ಹಿಂದೆಸರಿಯುವ ಸಾಧ್ಯತೆ ಇದೆ ಎಂದು ಸ್ಥಳೀಯ ಆಂಜನೇಯ ಸ್ವಾಮಿ ಭಕ್ತ ಎಂ.ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಸರ್ವಿಸ್ ರಸ್ತೆಗಾಗಿ ಆಂಜನೇಯಸ್ವಾಮಿ ದೇವಸ್ಥಾನ ತೆರವು ಅನಿವಾರ್ಯವಾಗಿದ್ದು, ಈ ಸಂಬಂಧ ಸ್ಥಳೀಯ ಮುಖಂಡರು ಮತ್ತು ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಮನವೊಲಿಸಿದ ನಂತರವೇ ತೆರವುಗೊಳಿಸಲಾಗುವುದು. ಇದಕ್ಕೆ ಪ್ರತಿಯಾಗಿ ಜಾಗ ಹಾಗೂ ನಿರ್ಮಾಣ ವೆಚ್ಚ ಭರಿಸಲಾಗುವುದು. -ಅಜಯ್ ಸೇಠ್, ಬಿಎಂಆರ್‌ಸಿಎಲ್ ಎಂಡಿ * ವಿಜಯಕುಮಾರ ಚಂದರಗಿ