Advertisement

ಆಂಜನೇಯನ ಭಕ್ತ ಧರ್ಮಸಿಂಗ್‌

01:02 PM Jul 28, 2017 | |

ನೆಲೋಗಿ (ಜೇವರ್ಗಿ): “ಅಜಾತಶತ್ರು’ ಎನ್ನಿಸಿಕೊಂಡಿದ್ದ ಎನ್‌. ಧರ್ಮಸಿಂಗ್‌ ಆಂಜನೇಯನ ಪರಮಭಕ್ತ ಎನ್ನುವುದು ಹೊರ ಜಗತ್ತಿಗೆ ತಿಳಿದಂತಿಲ್ಲ. ನೆಲೋಗಿಯ ಪ್ರಸಿದ್ಧ 600 ವರ್ಷಗಳ ಇತಿಹಾಸ ಇರುವ ಬಲಭೀಮ ದೇವಸ್ಥಾನದ ಆಂಜನೇಯನ ಪರಮಭಕ್ತರಾಗಿದ್ದ ಅವರು, ವರ್ಷಕ್ಕೆ ಎರಡು ಬಾರಿ ಅಂದರೆ ಆಷಾಢ ಮಾಸಕ್ಕೆ ಮತ್ತು ಹನುಮ ಜಯಂತಿಗೆ ತಪ್ಪದೇ ಬಂದು ಹೋಗುತ್ತಿದ್ದರು. ಈ ಎರಡೂ ಸಂದರ್ಭದಲ್ಲಿ ಧರ್ಮಸಿಂಗ್‌ ಅವರ ಕುಟುಂಬದಿಂದಲೇ ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತಿತ್ತು. ಹನುಮ ಜಯಂತಿಗೆ ಕುಟುಂಬ ಸಮೇತ ಬಂದರೆ ದೇವಸ್ಥಾನದ ಮುಂದೆ ಕುಳಿತು ಎಲ್ಲರನ್ನು ಮಾತನಾಡಿಸಿದಾಗಲೇ ಅವರಿಗೆ ಆನಂದ ಮತ್ತು ತೃಪ್ತಿ. ನಮ್ಮೂರ ಹನುಮ ದೇವರು ಧರ್ಮಸಿಂಗ್‌ ಏನು ಕೇಳದೆ ಇದ್ದರೂ, ಕರುಣಿಸಿ ರಾಜಕಾರಣದ ಅತ್ಯುನ್ನತ ಸ್ಥಾನಕ್ಕೆ ಏರುವಂತೆ ವರ ನೀಡಿ ಹರಸಿದ್ದಾನೆ.

Advertisement

ಇದರಿಂದಾಗಿ ಧರ್ಮಸಿಂಗ್‌ ಅವರು ರಾಜ್ಯವಷ್ಟೇ ಅಲ್ಲ ದೇಶದ ರಾಜಕೀಯ ಇತಿಹಾಸದಲ್ಲಿ ತಮ್ಮದೊಂದು ಹೆಸರು ದಾಖಲು ಮಾಡಿದ್ದಾರೆ ಎನ್ನುತ್ತಾರೆ ಊರವರು ಹಾಗೂ ವಿರೋಧ ಪಕ್ಷದ ಮುಖಂಡರೂ ಆಗಿರುವ ಸೋಮಶೇಖರ ಹೂಗಾರ. ಧರ್ಮಸಿಂಗ್‌ರೂ ಅಷ್ಟೇ, ಎಷ್ಟೇ ಆರೋಗ್ಯ ಸಮಸ್ಯೆ ಇದ್ದರೂ ಅವರೆಂದು ಹನುಮನ ಕಾರ್ಯಕ್ರಮಗಳಿಂದ ದೂರ ಉಳಿದಿಲ್ಲ ಎನ್ನುವುದು ವಾರಗೀಯ ಅಮೃತರಾವ್‌ ಹೊಸಮನಿ ಮತ್ತು ಸೋಮರಾಯಗೌಡ ಪಾಟೀಲ ಮಾತು. ಕೇವಲ ಹನುಮಭಕ್ತನಷ್ಟೇ ಅಲ್ಲ. ಧರ್ಮಸಿಂಗ್‌ ನಮ್ಮೆಲ್ಲರ ಭಾರಿ ದೋಸ್ತ್ ಕೂಡ ಹೌದು. ಎಷ್ಟೇ ಎತ್ತರಕ್ಕೆ ಏರಿದರೂ ಎಂದಿಗೂ ನಮ್ಮನ್ನು ಮರೆತಿಲ್ಲ. 

ನಮಗೂ ಭಲೇ ಹುಚ್ಚು, ಕಲಬುರಗಿ ಹಿಡದು ಸುತ್ತ ಹತ್ತು ತಾಲೂಕನ್ಯಾಗ ಎಲ್ಯಾರ್‌ ಇರ್ಲಿ.. ನಾವು ಹೋಗಿ ಮುಂದಿನ ಸಾಲಿನ್ಯಾಗ ಕೂಡಬೇಕು. ಅವ(ಧರ್ಮಸಿಂಗ್‌) ನಮಗ ನೋಡಿ.. ನಮ್ಮ ಕಡೆ ಕೈ ಬೀಸಿದರೆ ಸಾಕು. ಅಲ್ಲಿಗೆ ನಮಗೂ ತೃಪ್ತಿ, ಅವನಿಗೂ ತೃಪ್ತಿ. ನಾವೆಂದೂ ರೊಕ್ಕ, ಅಧಿ ಕಾರಕ್ಕಾಗಿ ಆತನ ಬೆನ್ನು ಹತ್ತಿಲ್ಲ. ನಮಗೂ ದೇವರು ಕಡಿಮೆ ಇಟ್ಟಿಲ್ಲ. ಆದರೆ, ನಮ್ಮ ಗೆಳೆಯ ಇವತ್ತು ಇಲ್ಲ. ನಾವಿನ್ನೂ ಇದ್ದೇವೆ ಎನ್ನುವುದೇ ದೊಡ್ಡ ನೋವಾಗಿ ಕಾಡುತ್ತದೆ ಎನ್ನುವುದು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಜೊತೆಯಲ್ಲಿಯೇ ಓದಿದ ಗೆಳೆಯರ ಅಭಿಮತ. 

Advertisement

Udayavani is now on Telegram. Click here to join our channel and stay updated with the latest news.

Next