ಗಂಗಾವತಿ: ರಾಜ್ಯದ ಅತಿ ಹೆಚ್ಚು ಪ್ರವಾಸಿಗರು ಆಗಮಿಸುವ ಸ್ಥಳ ಕಿಷ್ಕಿಂದಾ ಅಂಜನಾದ್ರಿ ಭಾಗದ ಆನೆಗೊಂದಿ ಪಂಪಾ ಸರೋವರ ಋಷ್ಯ ಮುಖ ಪರ್ವತ ಪ್ರದೇಶವಾಗಿದೆ. ಆದರೆ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಆನೆಗೊಂದಿ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಆನೆಗೊಂದಿ ಭಾಗಕ್ಕೆ ಬರುವ ಪ್ರವಾಸಿಗರ ವಸತಿಗಾಗಿ ಹೊಸಪೇಟೆ ಭಾಗದಲ್ಲಿ ತ್ರಿಸ್ಟಾರ್ ಹೋಟೆಲ್ 30 ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ಆನೆಗೊಂದಿ ಗ್ರಾಪಂ ಮಾಜಿ ಉಪಾಧ್ಯಕ್ಷ ಎನ್.ನರಸಿಂಹಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಕಳೆದ ವರ್ಷ ಡಿಸೆಂಬರ್ ನಲ್ಲಿ ಕುಂಟುನೆಪದಲ್ಲಿ ಆನೆಗೊಂದಿ ಭಾಗದಲ್ಲಿದ್ದ ಹೋಟೆಲ್, ರೆಸಾರ್ಟ್ ಗಳನ್ನು ಕೊಪ್ಪಳ ಜಿಲ್ಲಾಡಳಿತ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸೀಜ್ ಮಾಡಿದ್ದು ಹಂಪಿ ಭಾಗದಲ್ಲಿ ಅನಧಿಕೃತವಾಗಿರುವ 86 ಹೆಚ್ಚು ಹೋಟೆಲ್ ರೆಸಾರ್ಟ್ ಗಳು ರಾಜಾರೋಷವಾಗಿ ವ್ಯವಹಾರ ನಡೆಸುತ್ತಿವೆ.
ಪ್ರವಾಸೋದ್ಯಮ ಸಚಿವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಸಹ ಆನೆಗೊಂದಿ ಭಾಗದಲ್ಲಿ ಹೋಟೆಲುಗಳೆಲ್ಲ ಬಂದ್ ಮಾಡಲಾಗಿದೆ. ಹೊಸಪೇಟೆ ಭಾಗದಲ್ಲಿ ಹೋಟೆಲ್ ಗಳು ರಾಜಾರೋಷ ನಡೆಯುತ್ತಿರುವುದು ಮಲತಾಯಿ ಧೋರಣೆಯಾಗಿದ್ದು ಕೂಡಲೇ ತ್ರೀಸ್ಟಾರ್ ಹೋಟೆಲ್ ನ ಹೊಸಪೇಟೆ ಭಾಗದಲ್ಲಿ ನಿರ್ಮಾಣ ಮಾಡದೆ ಆನೆಗೊಂದಿ ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಬೇಕು. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಪ್ರವಾಸಿಗರು ಆಗಮಿಸುವುದರಿಂದ ಅವರಿಗೆ ಉಳಿದುಕೊಳ್ಳಲು ಅನುಕೂಲವಾಗುತ್ತದೆ.
ತ್ರಿಸ್ಟಾರ್ ಹೋಟೆಲ್ ನಿರ್ಮಾಣದ ಉದ್ದೇಶ ಆನೆಗೊಂದಿ ಪಂಪಾ ಸರೋವರ ಅಂಜನಾದ್ರಿ ಕಿಷ್ಕಿಂಧಾ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ತ್ರಿಸ್ಟಾರ್ ಹೋಟೆಲ್ ಅವಶ್ಯಕತೆಯಿದೆ. ಆದ್ದರಿಂದ ಹೊಸಪೇಟೆಯಲ್ಲಿ ಹಂಪಿಯ ಹತ್ತಿರ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುತ್ತದೆ ಎಂದು ಸ್ವತಃ ಪ್ರವಾಸೋದ್ಯಮ ಸಚಿವರು ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದ್ದಾರೆ.
ಈಗಾಗಲೇ ಹಲವಾರು ಹೋಟೆಲ್ ಉದ್ಯಮಗಳು ಪ್ರವಾಸೋದ್ಯಮ ಇಲಾಖೆಯ ಮ್ಯೂಸಿಯಂಗಳು ಸೇರಿದಂತೆ ಅನೇಕ ಸರ್ಕಾರಿ ಕಟ್ಟಡಗಳು ಹಂಪಿ ಭಾಗದಲ್ಲಿದ್ದು, ಆನೆಗೊಂದಿ ಭಾಗದಲ್ಲಿ ಪ್ರವಾಸಿಗರು ಆಗಮಿಸಿ ಉಳಿದುಕೊಳ್ಳಲು ಯಾವುದೇ ಸೂಕ್ತ ಕಟ್ಟಡವಿಲ್ಲ. ಆದ್ದರಿಂದ ಆನೆಗೊಂದಿ ಭಾಗದಲ್ಲಿ ಕೂಡಲೇ ಸರ್ಕಾರ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಬೇಕು.
ಆನೆಗೊಂದಿ ಭಾಗದ ಬಹುತೇಕ ಗ್ರಾಮಗಳು ಮತ್ತು ಜನರು ಪ್ರವಾಸಿಗರ ಮೇಲೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದು, ಸಣ್ಣಪುಟ್ಟ ಹೋಟೆಲ್ ಗಳನ್ನು ಆರಂಭ ಮಾಡಿ ವ್ಯವಹಾರ ನಡೆಸುವ ಮೂಲಕ ಜೀವನ ನಡೆಸುತ್ತಿದ್ದರು.
ಹೊಸಪೇಟೆ ಭಾಗದ ಊಟ ಲಾಬಿಗೆ ಮಣಿದಿರುವ ಪ್ರವಾಸೋದ್ಯಮ ಸಚಿವರು ಹಂಪಿ ಭಾಗದಲ್ಲಿ ಹೋಟೆಲ್ ಗಳ ವ್ಯವಹಾರಕ್ಕೆ ಕದ್ದುಮುಚ್ಚಿ ಅವಕಾಶ ಮಾಡಿಕೊಟ್ಟಿದ್ದು ಆನೆಗೊಂದಿ ಭಾಗದಲ್ಲಿ ಕಳೆದ 6 ತಿಂಗಳಿಂದ ಹೋಟೆಲನ್ನು ಸಂಪೂರ್ಣವಾಗಿ ಬಂದ್ ಮಾಡಿಸಲಾಗಿದೆ.
ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ ಆನೆಗೊಂದಿ ಭಾಗದ ಗ್ರಾಮಸ್ಥರು ಮತ್ತು ವರ್ತಕರ ಜೊತೆಗೆ ಶಾಸಕ ಪರಣ್ಣ, ಮುನವಳ್ಳಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಭೇಟಿ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಾಜಕಾರಣಿಗಳು ಭರವಸೆಯನ್ನು ಕೊಟ್ಟು ಮಾತ್ರ ಗಳಿಸಿದ್ದು ಯಾವುದೇ ಅನುಕೂಲ ಮಾಡಿಕೊಡಲು ಕೊಟ್ಟಿಲ್ಲ ಮುಂದಿನ ಚುನಾವಣೆಯಲ್ಲಿ ಆನೆಗೊಂದಿ ಭಾಗದ ಜನರು ಸರಿಯಾದ ಬುದ್ಧಿ ಕಲಿಸಲಿದ್ದಾರೆ. ಚುನಾವಣೆ ಗಿಮಿಕ್ ಗಾಗಿ ಅಂಜನಾದ್ರಿ ಹೆಸರನ್ನು ಬಳಸುವ ರಾಜಕೀಯ ಮುಖಂಡರುಗಳು ಆ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.