Advertisement

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

02:41 PM May 17, 2024 | Team Udayavani |

ದಾವಣಗೆರೆ: ಹುಬ್ಬಳ್ಳಿಯ ಅಂಜಲಿ ಕೊಲೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಚಿಗಟೇರಿ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದು ಬೆಳಕಿಗೆ ಬಂದಿದೆ.

Advertisement

ವಿಶ್ವ ಮಾನವ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹುಬ್ಬಳ್ಳಿಯತ್ತ ತೆರಳುತ್ತಿದ್ದ ವಿಶ್ವ ಅದೇ ರೈಲಿನಲ್ಲಿದ್ದ ಗದಗ ಜಿಲ್ಲೆಯ ಕಲ್ಲುಮುಳಗುಂದ ಗ್ರಾಮದ ಲಕ್ಷ್ಮಿ‌ಎಂಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಚಾಕುವಿನಿಂದ ಚುಚ್ಚಿ‌ ಕೊಲೆಗೂ ಯತ್ನಿಸಿದ್ದ.

ಮಹಿಳೆಯ ಚೀರಾಟದಿಂದ ಎಚ್ಚೆತ್ತ ಪ್ರಯಾಣಿಕರು, ಮಹಿಳೆಯ ಪತಿ ಇತರರು ವಿಶ್ವನನ್ನು ಹಿಡಿದು ಥಳಿಸಿದ್ದರು. ಪೊಲೀಸರಿಗೆ ಹಿಡಿದು ಕೊಡಬಹುದು ಇಲ್ಲವೇ ಸಿಕ್ಕಿ ಬೀಳಬಹುದು ಎಂಬ ಭಯದಿಂದ ಮಾಯಕೊಂಡ ಸಮೀಪ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಹಾರಿದಾಗ ತಲೆಗೆ ತೀವ್ರ ಪೆಟ್ಟು ಬಿದ್ದು ಹಳಿಗಳ ಸಮೀಪವೇ ಬಿದ್ದಿದ್ದನು.

ರೈಲಿನಿಂದ ಜಿಗಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಆರೋಪಿಯನ್ನು ಪೊಲೀಸರು ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರೈಲಿನಿಂದ ಇಳಿಯುವಾಗ ಜಾರಿ ಬಿದ್ದೆ ಎಂಬ ಹೇಳಿಕೆ ನೀಡಿದ್ದಾನೆ.‌ ವಿಶ್ವ ಮಾನವ ಎಕ್ಸ್‌ಪ್ರೆಸ್‌ ರೈಲು ಚಿಕ್ಕಜಾಜೂರು ನಂತರ ದಾವಣಗೆರೆಯಲ್ಲಿ ಮಾತ್ರ ನಿಲುಗಡೆ ಇದೆ.‌ ಅದು ಯಾವಾಗ ರೈಲಿನಿಂದ ಇಳಿಯಲಿಕ್ಕೆ ಹೋಗಿರಬಹುದು ಎಂಬ ಅನುಮಾನ ಪೊಲೀಸರಿಗೆ ಕಾಡಿದೆ.‌

Advertisement

ಮಾಧ್ಯಮಗಳಲ್ಲಿ ಬಿತ್ತರವಾದ ಆರೋಪಿಯ ಫೋಟೋ ನೋಡಿದ್ದರಿಂದಲೂ ಹುಬ್ಬಳ್ಳಿಯ ಕೊಲೆ ಆರೋಪಿ ಏನಾದರೂ ಇರಬಹುದಾ ಎಂಬ ಸಂಶಯವೂ ಬಂದಿದೆ. ಅದೇ ಸಂಶಯದ ಮೇಲೆ ರೈಲ್ವೆ ಪೊಲೀಸರು ಮತ್ತೊಮ್ಮೆ ಆರೋಪಿ ವಿಶ್ವನನ್ನು ದಾಖಲಿಸಿದ್ದ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಬರುವ ವೇಳೆಗೆ ಆರೋಪಿ ಆಗಲೇ ಆಸ್ಪತ್ರೆಯಿಂದ ಹೊರ ಬಂದಿದ್ದನು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ವಿಶ್ವನನ್ನು ವಶಕ್ಕೆ ತೆಗೆದುಕೊಂಡು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಾವಣಗೆರೆಗೆ ಆಗಮಿಸಿದ ಹುಬ್ಬಳ್ಳಿ ಪೊಲೀಸರು ಅಂಜಲಿ ಕೊಲೆ ಆರೋಪಿ ಇವನೇ ಎಂಬುದನ್ನು ಖಚಿತಪಡಿಸಿ ಕೊಂಡು ಬಂಧಿಸಿ, ಹುಬ್ಬಳ್ಳಿಗೆ ಕರೆದೊಯ್ದದಿದ್ದಾರೆ.

ದಾವಣಗೆರೆ ರೈಲ್ವೆ ಪೊಲೀಸರು ತೋರಿದ ಸಮಯಪ್ರಜ್ಞೆಯಿಂದ ಅಂಜಲಿ ಅಂಬಿಗೇರ ಕೊಲೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next