ಶಹಾಬಾದ: ಬೀದಿ ಬದಿ ವ್ಯಾಪಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ದಿಷ್ಟ ಸ್ಥಳದಲ್ಲಿ ವ್ಯವಸ್ಥಿತವಾಗಿ ವ್ಯಾಪಾರ ಮಾಡಬೇಕು. ನಿರಂತರವಾಗಿ ಸ್ವತ್ಛತೆ ಕಾಪಾಡುವುದರ ಜೊತೆಗೆ ನಗರಸಭೆ ವಾಹನಗಳಲ್ಲಿಯೇ ಕಸ ಹಾಕಬೇಕು ಎಂದು ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಬುಧವಾರ ನಗರಸಭೆಯಲ್ಲಿ ಡೇ-ನಲ್ಮ ಯೋಜನೆಯಡಿ ಬೀದಿ ವ್ಯಾಪಾರಸ್ಥರಿಗೆ ನಿಯಮ ಮತ್ತು ಯೋಜನೆಗಳ ಕುರಿತು ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವು ಬೀದಿ ಬದಿ ವ್ಯಾಪಾರಿಗಳು ರಸ್ತೆ ಮುಂಭಾಗದಲ್ಲಿ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ವ್ಯಾಪಾರಸ್ಥರು ನಿಗದಿತ ಸ್ಥಳದಲ್ಲಿಯೇ ವ್ಯಾಪಾರ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳಿಗೂ ಕೆಲವು ನಿಯಮಗಳಿದ್ದು, ನೀವೂ ಕೂಡ ಆ ನಿಯಮ ಪಾಲಿಸಬೇಕು ಎಂದರು.
ಜಿಲ್ಲಾ ಕೌಶಲ್ಯಭಿವೃದ್ಧಿ ಇಲಾಖೆ ವ್ಯವಸ್ಥಾಪಕ ಸಾತಯ್ಯ ಹಿರೇಮಠ ಮಾತನಾಡಿ, ವ್ಯಾಪಾರ ಮಾಡುವ ಸ್ಥಳ ಸ್ವಚ್ಛತೆಯಿಂದ ಕೂಡಿದ್ದರೆ ಗ್ರಾಹಕರು ಆಕರ್ಷಿತರಾಗುವದರ ಜೊತೆಗೆ ಹೆಚ್ಚಿನ ವ್ಯವಹಾರ ಆಗುತ್ತದೆ. ಬೀದಿ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಬದಲು ಬಟ್ಟೆಚೀಲ ಬಳಸುವುದರಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತದೆ. ವ್ಯಾಪಾರಸ್ಥರು ಗುಣಮಟ್ಟದ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಬೇಕು ಎಂದರು.
ಜಿಲ್ಲಾ ಕೌಶಲ್ಯಭಿವೃದ್ಧಿ ಇಲಾಖೆ ವ್ಯವಸ್ಥಾಪಕ ರಾಜಕುಮಾರ ಗುತ್ತೆದಾರ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ಪಡೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಪಾಲಿಸಿದರೇ ಭವಿಷ್ಯದಲ್ಲಿ 2 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಅಲ್ಲದೇ ಬ್ಯಾಂಕ್ ನಿಂದ ಕ್ಯೂ.ಆರ್ ಕೋಡ್ ಪಡೆದುಕೊಂಡು ವ್ಯಾಪಾರ ಮಾಡಿ ಎಂದು ಹೇಳಿದರು.
ದೀಪಕ್ ಜಿ. ಗಾಲಾ ವಿಶೇಷ ಉಪನ್ಯಾಸ ನೀಡಿದರು. ಪೌರಾಯುಕ್ತ ಕೆ.ಗುರಲಿಂಗಪ್ಪ, ಉಪಾಧ್ಯಕ್ಷೆ ಸಲೀಮಾಬೇಗಂ, ಸಮುದಾಯ ಸಂಘಟಕನಾ ಅಧಿ ಕಾರಿ ರಘುನಾಥ ನರಸಾಳೆ, ಶಾಂತಪ್ಪ ಹಡಪದ, ಶಂಕರ ವಾಗ್ಮೋರೆ ಹಾಗೂ ಬೀದಿ ಬದಿ ವ್ಯಾಪಾರಿಗಳು ಇದ್ದರು.