ಮುಂಬಯಿ: ಪಶ್ಚಿಮದ ನದಿಗಳ ನೀರನ್ನು ಕಾಲುವೆಗಳ ಮೂಲಕ ಪೂರ್ವಕ್ಕೆ ತಿರುಗಿಸುವಂತಹ ಜಲಸಂಪನ್ಮೂಲ ಇಲಾಖೆ ಕೈಗೊಂಡ ಪ್ರಮುಖ ಯೋಜನೆಗಳನ್ನು ಅವಧಿಯಲ್ಲಿ ಪೂರ್ಣಗೊಳಿಸಲು ಕಾಮಗಾರಿಯನ್ನು ಚುರುಕುಗೊಳಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಜಲಸಂಪನ್ಮೂಲ ಇಲಾಖೆಯ ವಿವಿಧ ಯೋಜನೆಗಳಿಗೆ ಸಂಬಂಧಿ ಸಿದಂತೆ ಸಿಎಂ ನಿವಾಸ ವರ್ಷಾದಲ್ಲಿ ಸಭೆ ಶನಿವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಅವರು, ಯೋಜನೆಯನ್ನು ಪೂರ್ಣಗೊಳಿಸಲು ಅಂತರ ರಾಜ್ಯ ಮಟ್ಟದಲ್ಲಿ ಯಾವುದೇ ಅಡೆತಡೆಗಳು ಎದುರಾದರೆ, ನಾನು ವೈಯಕ್ತಿಕವಾಗಿ ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಹೇಳಿದರು. ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸರಿಯಾದ ಸಮೀಕ್ಷೆ ನಡೆಸಬೇಕು. ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಗೊಳಿಸಲು ಮತ್ತು ಅದರಿಂದ ಲಾಭ ಪಡೆಯಲು ಯೋಜನೆಗಳನ್ನು ವೇಗಗೊಳಿಸಲು ಇಲಾಖೆ ಗಮನ ಹರಿಸಬೇಕು ಎಂದರು.
ಇಲಾಖೆ ಕೈಗೊಳ್ಳುತ್ತಿರುವ ಯೋಜನೆಗಳ ಬಗ್ಗೆ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ವಿವರವಾದ ಮಾಹಿತಿ ನೀಡಿ, ಮುಂದಿನ ಎರಡು ವರ್ಷಗಳಲ್ಲಿ ಇಂತಹ 104 ಯೋಜನೆಗಳನ್ನು ಪೂರ್ಣಗೊಳಿಸಲು ಇಲಾಖೆ ಯೋಜಿಸಿದೆ ಎಂದರು. ಕಾಲುವೆಗಳನ್ನು ಪೂರ್ವಕ್ಕೆ ತಿರುಗಿಸುವ ಯೋಜನೆಯ ಅನುಷ್ಠಾನ, ಹೆಚ್ಚುವರಿ ನೀರು ಲಭ್ಯವಿರುವ ಪ್ರದೇಶ ಮತ್ತು ನೀರಿನ ಕೊರತೆಯಿರುವ ಪ್ರದೇಶದ ಬಗ್ಗೆ ಮಾಹಿತಿ ನೀಡಿದರು.
ಪೂರ್ವ ವಿದರ್ಭ ವೈನ್‌ಗಂಗಾ ಕಣಿವೆ, ನಾರ್‌ಪಾರ್-ದಮನ್‌ಗಂಗಾ, ವೈತಾರ್ಣ, ಉಲ್ಲಾಸ್ ನದಿ ಕಾಲುವೆ, ಪಿಂಜಲ…, ಉಲ್ಲಾಸ್ ಕಾಲುವೆಯ ನೀರನ್ನು ಪೂರ್ವದ ಕಡೆಗೆ ತಿರುಗುವುದರ ಜತೆಗೆ ನೀರಿನ ಕೊರತೆಯ ಪ್ರದೇಶಕ್ಕೆ ಸರಬರಾಜು ಮಾಡುವ ಬಗ್ಗೆ ಈ ಯೋಜನೆಗಳನ್ನು ಮಿಷನ್ ಮೋಡ್ ಎಂದು ಕೈಗೊಳ್ಳಲಾಗುತ್ತಿದೆ ಎಂದು ಪಾಟೀಲ್ ಹೇಳಿದ್ದಾರೆ.
ಈ ವೇಳೆ ಲೋಕೋಪಯೋಗಿ ಸಚಿವ ಅಶೋಕ್ ಚವಾಣ್, ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ…, ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ, ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು) ಮನೋಜ್ ಸೌನಿಕ್, ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಶಿಶ್ ಕುಮಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ ವಿಕಾಸ್ ಖರ್ಗೆ ಉಪಸ್ಥಿತರಿದ್ದರು.