ಮುಂಬಯಿ: ಉಪನಗರ ಮಲಾಡ್ ಪರಿಸರದ ತುಳು-ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಮಲಾಡ್ ಕನ್ನಡ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಯುವ ನ್ಯಾಯವಾದಿ, ಸಮಾಜ ಸೇವಕ ಸಂಘದ ಸುದೀರ್ಘಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ನ್ಯಾಯವಾದಿ ಜಗದೀಶ್ ಹೆಗ್ಡೆ ಆಯ್ಕೆಯಾಗಿದ್ದು, ಜು. 4ರಂದು ನಡೆದ ಸಂಘದ ವಿಶೇಷ ಸಭೆಯಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನ್ಯಾಯವಾದಿ ಜಗದೀಶ್ ಹೆಗ್ಡೆ ಮಾತನಾಡಿ, ಸಂಘದ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಹತ್ತಿರದಿಂದ ನೋಡಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಮತ್ತು ಮಾರ್ಗದರ್ಶನದಿಂದ ಈ ಸಂಘದ ಸೇವಾಕಾರ್ಯಗಳನ್ನು ಮುನ್ನಡೆಸುತ್ತೇನೆ. ಸಂಘದ ಅಧ್ಯಕ್ಷರಾಗಿದ್ದ ಹರೀಶ್ ಎನ್. ಶೆಟ್ಟಿ, ಗೌರವಾಧ್ಯಕ್ಷರಾದ ಪದ್ಮನಾಭ ಪಯ್ಯಡೆ ಮತ್ತು ಹಿರಿಯರ ಆಶೀರ್ವಾದದಿಂದ ಅಧ್ಯಕ್ಷ ಪದವಿಯನ್ನು ಸ್ವೀಕರಿಸಿದ್ದೇನೆ. ಅಧಿಕಾರದ ಆಕಾಂಕ್ಷಿಯಾಗಿರದೆ ನಿಮ್ಮೆಲ್ಲರ ಮಾತಿಗೆ ಗೌರವ ಕೊಟ್ಟು ಈ ಪದವಿಯನ್ನು ಸ್ವೀಕರಿಸಿದ್ದೇನೆ. ನಾನು ಸಾಮಾನ್ಯ ಸದಸ್ಯನಂತೆ ಸೇವೆ ಮಾಡುತ್ತೇನೆ. ಸಂಘದ ಸೇವಾ ಕರ್ತವ್ಯವೇನು ಎನ್ನುವುದನ್ನು ಸದಸ್ಯರೆಲ್ಲರೂ ಅರಿತು ಕೆಲಸ ಮಾಡಿ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಬೇಕಾಗಿದೆ. ಮುಂದಿನ ದಿನಗಳಲ್ಲಿ ಸಂಘ ನಡೆಸುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಮತ್ತೆ ಪ್ರಾರಂಭಿಸೋಣ. ಕೊರೊನಾ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಂದು ತಿಳಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್ ಡಿ. ಪೂಜಾರಿ ವರದಿ ಮಂಡಿಸಿದರು. ಗೌರವ ಕೋಶಾಧಿಕಾರಿ ಪ್ರಕಾಶ್ ಎಸ್. ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಅನಿಲ್ ಪೂಜಾರಿ, ಜತೆ ಕೋಶಾಧಿಕಾರಿ ಶಂಕರ್ ಆರ್. ಶೆಟ್ಟಿ, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ಸೂರಪ್ಪ ಕುಂದರ್, ಮಹಿಳಾ ವಿಭಾಗದ ಕಾರ್ಯದರ್ಶಿ ಶಾಂಭವಿ ಶೆಟ್ಟಿ, ಸುಧಾಕರ ಎಸ್. ಶೆಟ್ಟಿ, ವಿಶ್ವನಾಥ್ ಭಂಡಾರಿ, ಜಯಪ್ರಕಾಶ್ ಸಾಲ್ಯಾನ್, ಸುಂದರ್ ಪೂಜಾರಿ, ಶಾರದಾ ಪೂಜಾರಿ, ಪ್ರಕಾಶ್ ಶೆಟ್ಟಿ, ಗೋಪಾಲ್ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಕಾರ್ಯದರ್ಶಿ ಶಂಕರ್ ಡಿ. ಪೂಜಾರಿ ವಂದಿಸಿದರು.
ಮಲಾಡ್ ಕನ್ನಡ ಸಂಘ ಕಳೆದ 19 ವರ್ಷಗಳಿಂದ ತುಳು-ಕನ್ನಡಿಗರ ಸೇವಾ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದು, ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಕನ್ನಡಿಗರ ಸಾಂಘಿಕ ಶಕ್ತಿಯಾಗಿ ಬೆಳೆದ ಸಂಘಟನೆ. ಹೊಟೇಲ್ ಉದ್ಯಮಿ ಹರೀಶ್ ಎನ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಘ ಮಲಾಡ್ ಪಶ್ಚಿಮ
ದಲ್ಲಿ ಸ್ವಂತ ಕಾರ್ಯಾಲಯವನ್ನು ಸ್ಥಾಪಿಸಿದೆ. ಅಲ್ಲದೆ ಅವರ ಮಾರ್ಗದರ್ಶನದಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಕನ್ನಡಿಗರಿಗೆ ಮತ್ತವರ ಮಕ್ಕಳಿಗೆ ವಿಶೇಷವಾದ ಕೊಡುಗೆ ನೀಡಿದೆ.