ಮುಂಬಯಿ: ಕುಸಿದ ಮನೆಯಲ್ಲಿ ಪರೀಕ್ಷೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಲಿ, ಮನೆಯೇ ಇಲ್ಲದ ನಾನು ಓದುವುದಾದರೂ ಹೇಗೆ ಎಂದು ತನ್ನ ಅಳಲನ್ನು ಪುತ್ತೂರು ತಾಲೂಕಿನ ಬನ್ನೂರು ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಚಿಕ್ಕಮುಟ್ನೂರು ಗ್ರಾಮದ ಗೋಪಾಲ ಶೆಟ್ಟಿ ಅವರ ಪುತ್ರಿ ಹತ್ತನೇ ತರಗತಿ ವಿದ್ಯಾರ್ಥಿನಿ ದೀಕ್ಷಾ ಹೇಳಿದ ಮಾತು ಉದಯವಾಣಿ ಪತ್ರಿಕೆಯಲ್ಲಿ ವರದಿಯಾಗಿತ್ತು.
ಈ ವರದಿಯನ್ನು ನೋಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಾಜಿ ಕೋಶಾಧಿಕಾರಿ ಬಾಲಕೃಷ್ಣ ರೈ ಅವರ ಮೂಲಕ ಸಾಲೆತ್ತೂರು ಬಂಟರ ಸಂಘ ವನ್ನು ಸಂಪರ್ಕಿಸಿ ಗೋಪಾಲ ಶೆಟ್ಟಿಯವರ ಮನೆಗೆ ಹೋಗಿ ವಾಸ್ತವಾಂಶಗಳನ್ನು ಪರಿಶೀಲಿಸಿ ವರದಿ ನೀಡಲು ತಿಳಿಸಿದ್ದರು.
ಐಕಳ ಹರೀಶ್ ಶೆಟ್ಟಿಯವರ ನಿರ್ದೇಶನದಂತೆ ಪರಿಶೀಲನ ತಂಡವಾಗಿ ಸ್ಥಳಕ್ಕೆ ತೆರಳಿದ್ದ ಸಾಲೆತ್ತೂರು ಬಂಟರ ಸಂಘದ ಪದಾಧಿಕಾರಿಗಳು ಮಣ್ಣಿನ ಗೋಡೆ ಹಾಗೂ ಮಾಡಿಗೆ ಟರ್ಪಾಲು ಹಾಕಿರುವ ಬಿದಿರಿನ ಮಾಡಿನ ಶಿಥಿಲವಾದ
ಪುಟ್ಟ ಮನೆಯ ಒಂದು ಬದಿ ಕುಸಿದು, ಕುಟುಂಬವು ವಾಸ ಮಾಡಲು ಸಾಧ್ಯವೇ ಇಲ್ಲದೆ ನೆಲೆಯನ್ನು ಕಳೆದುಕೊಂಡಿರುವ ಬಗ್ಗೆ ಹಾಗೂ ಕುಟುಂಬದ ಯಜಮಾನ ಅಸೌಖ್ಯ ದಿಂದಿದ್ದು, ತಾಯಿ ಬೀಡಿ ಹಾಗೂ ಕೂಲಿ ಕೆಲಸ ಮಾಡಿ ಕೊಂಡು ಕುಟುಂಬವನ್ನು ಹಾಗೂ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನಿಭಾಯಿ ಸುತ್ತಿರುವ ಬಗ್ಗೆ ವರದಿಯನ್ನು ಒಕ್ಕೂಟದ ಅಧ್ಯಕ್ಷರಿಗೆ ನೀಡಿದ್ದರು.
ಈ ಬಗ್ಗೆ ತತ್‌ಕ್ಷಣ ಸ್ಪಂದಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ದೀಕ್ಷಾಳ ಮತ್ತು ಸಹೋದರನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯಹಸ್ತ ನೀಡುವುದಾಗಿ ತಿಳಿಸಿರುವುದು ಮಾತ್ರವಲ್ಲದೆ ಅದರಂತೆ ತಾತ್ಕಾಲಿಕ ಪರಿಹಾರಧನ ಸಹಾಯದ ಚೆಕ್ಕನ್ನು ಸಾಲೆತ್ತೂರು ಬಂಟರ ಸಂಘದ ಅಧ್ಯಕ್ಷ ದೇವಪ್ಪ ಶೇಖ, ಪೀಲ್ಯಡ್ಕ ಅವರು ಗೋಪಾಲ ಶೆಟ್ಟಿಯವರ ಮನೆಗೆ ತೆರಳಿ ವಿತರಿಸಿದರು.
ಈ ಸಂದರ್ಭ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಾಜಿ ಕೋಶಾಧಿಕಾರಿ ಬಾಲಕೃಷ್ಣ ರೈ ಕೊÇÉಾಡಿ, ಜತೆ ಕಾರ್ಯದರ್ಶಿ ಅಮರೇಶ್ ಶೆಟ್ಟಿ ತಿರುವಾಜೆ, ಅರವಿಂದ ರೈ ಮೂರ್ಜೆಬೆಟ್ಟು, ವಿಜಯಾ ಶೆಟ್ಟಿ ಸಾಲೆತ್ತೂರು, ಮಹಿಳಾ ಸಮಿತಿ ಅಧ್ಯಕ್ಷೆ, ಬನ್ನೂರು ಗ್ರಾ.ಪಂ. ಅಧ್ಯಕ್ಷೆ ಜಯಾ ರಮೇಶ್ ಉಪಸ್ಥಿತರಿದ್ದರು.