ನಿರ್ದೇಶಕ ಜನಾರ್ದನ್ “ಗುಳ್ಟು’ ಚಿತ್ರದ ನಂತರ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿತ್ತು. ಸ್ವತಃ ಜನಾರ್ದನ್ ಅವರಿಗೇ ಮುಂದೆ ಯಾವ ಸಿನಿಮಾ ಮಾಡಬೇಕು ಎಂಬ ಕುರಿತು ಒಂದಷ್ಟು ಗೊಂದಲವೂ ಇತ್ತು. ಆ ಬಳಿಕ ಜನಾರ್ದನ್ ಅವರು, ಕಾದಂಬರಿ ಆಧರಿತ ಚಿತ್ರ ಮಾಡಲಿದ್ದಾರೆ ಎಂದು ಸುದ್ದಿಯಾಯಿತು.
ಅವರು ರವಿಬೆಳಗೆರೆ ಅವರ “ಒಮರ್ಟಾ’ ಕಾದಂಬರಿ ಇಟ್ಟುಕೊಂಡು ಚಿತ್ರ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಹೊರಬಿತ್ತು. ಅದೊಂದು ಅಂಡರ್‌ವರ್ಲ್ಡ್ ಕುರಿತಾದ ಸಬ್ಜೆಕ್ಟ್ ಆಗಿರುವುದರಿಂದ ಆಗ ಚಿತ್ರಕ್ಕೆ ಹೀರೋ ಯಾರು ಎಂಬುದು ಪಕ್ಕಾ ಆಗಿರಲಿಲ್ಲ.
ಮೊದಲು ಸ್ಕ್ರಿಪ್ಟ್ ಮುಗಿಸಿ, ಆ ಬಳಿಕ ಹೀರೋ ಸೇರಿದಂತೆ ಇತರೆ ಪಾತ್ರಗಳ ಆಯ್ಕೆ ಮಾಡಿಕೊಳ್ಳುವುದಾಗಿ ನಿರ್ದೇಶಕರು ಹೇಳಿದ್ದರು. ಈಗ “ಒಮರ್ಟಾ’ ಕಾದಂಬರಿ ಆಧರಿತ ಚಿತ್ರಕ್ಕೆ ಹೀರೋ ಸಿಕ್ಕಾಗಿದೆ. ಅದು ಬೇರಾರೂ ಅಲ್ಲ, ಅನೀಶ್ ತೇಜೇಶ್ವರ್. ಹೌದು, ಅನೀಶ್ ತೇಜೇಶ್ವರ್ ಈ ಚಿತ್ರದ ನಾಯಕರಾಗಿ ಆಯ್ಕೆಯಾಗಿದ್ದಾರೆ.
“ಒಮರ್ಟಾ’ ಒಂದು ಭೂಗತ ಲೋಕದ ಹಿನ್ನೆಲೆ ಇರುವ ಕಾದಂಬರಿ. ಅದನ್ನು ಸಿನಿಮಾಗೆ ಅಳವಡಿಸಬೇಕು ಎಂಬ ಕಾರಣಕ್ಕೆ, ಅದಕ್ಕೆ ತಕ್ಕಂತೆ ಸ್ಕ್ರಿಪ್ಟ್ ನಡೆಯುತ್ತಿದ್ದು, ಈಗ ಕ್ಲೈಮ್ಯಾಕ್ಸ್ ಭಾಗದ ಬರವಣಿಗೆ ಕೆಲಸ ನಡೆಯುತ್ತಿದೆ . ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ನಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಸದ್ಯಕ್ಕಿನ್ನೂ ಚಿತ್ರಕ್ಕೆ ಶೀರ್ಷಿಕೆ ಇಟ್ಟಿಲ್ಲ.
ಈ ಹಿಂದೆ “ಗುಳ್ಟು’ ನಿರ್ಮಿಸಿದ್ದ ಪ್ರಶಾಂತ್‌ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ಜೊತೆಗೆ ಚೇತನ್ ಹಾಗು ಪ್ರಿಯದರ್ಶಿನಿ ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ಒಟ್ಟು 60 ದಿನಳ ಕಾಲ ಚಿತ್ರೀಕರಣ ನಡೆಸುವ ಯೋಚನೆ ನಿರ್ದೇಶಕರದ್ದು. ಚಿತ್ರಕ್ಕೆ ಈಗಷ್ಟೇ ತಂತ್ರಜ್ಞರ ಆಯ್ಕೆ ನಡೆಯಬೇಕಿದೆ.