Advertisement

ಮಕ್ಕಳ ಎದುರಲ್ಲಿ ಪ್ರಾಣಿ ವಧೆ ಸರಿಯಲ್ಲ: ಪೇಜಾವರ ಶ್ರೀ

05:06 PM Jan 11, 2023 | Team Udayavani |

ಉಡುಪಿ: ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯ ಇರಬಾರದು. ಮಕ್ಕಳ ದೇಶ, ಸಮಾಜದ ಭವಿಷ್ಯ ಎಂಬುದನ್ನು ಯಾರೂ ಮರೆಯಬಾರದು. ಹೀಗಾಗಿ ಮಕ್ಕಳ ಎದುರಿನಲ್ಲಿ ಪ್ರಾಣಿವಧೆ ಮಾಡುವುದು ಸರಿಯಲ್ಲ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

Advertisement

ಶಿಕ್ಷಣದ ಮೌಲ್ಯವರ್ಧನೆ ಸಹಿತ ವಿವಿಧ ವಿಷಯಗಳ ಕುರಿತು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದಿದ್ದ ಧಾರ್ಮಿಕ ಮುಖಂಡರ ದುಂಡು ಮೇಜಿನ ಸಭೆಯ ಕುರಿತು ಬುಧವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಸಮಾಜ ಬಯಸದ್ದನ್ನು ಮಕ್ಕಳಿಂದ ದೂರ ಇಡಬೇಕು ಎಂದರು.

ಕ್ರೌರ್ಯ ಮಕ್ಕಳ ಕಣ್ಣಿಗೆ ಯಾವತ್ತು ಬೀಳಬಾರದು. ಮಾಂಸಾಹಾರ ಮಾಡುವುದು ತಪ್ಪಲ್ಲ. ಆದರೆ, ಮಕ್ಕಳ ಕಣ್ಮುಂದೆ ಪ್ರಾಣಿ ವಧೆ ಮಾಡುವುದು ಸರಿಯಲ್ಲ. ಪ್ರಾಣಿ ಚೀರಾಡುವುದು, ನರಳಾಡುವುದನ್ನು ಮಕ್ಕಳಿಗೆ ತೋರಿಸಬಾರದು. ಚೀರಾಟ, ದುಃಖ, ಆಕ್ರಂದನ ಮಕ್ಕಳ ಮೇಲೆ ತುಂಬ ದುಷ್ಪರಿಣಾಮ ಬೀರುತ್ತದೆ. ಮಾಂಸದಂಗಡಿ ಇಡುವುದೂ ತಪ್ಪಲ್ಲ, ವ್ಯವಹಾರ ಮಾಡುವುದು ತಪ್ಪಲ್ಲ. ಆದರೆ, ಎಲ್ಲರ ಮುಂದೆ ಮಾಂಸ ನೇತು ಹಾಕುವುದು ಸರಿಯಲ್ಲ. ಮಾಂಸವನ್ನು ನೇತು ಹಾಕದೆ ಒಳಗೆ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಮಕ್ಕಳಿಗೆ ಸಸ್ಯಾಹಾರ ಮತ್ತು ಮಾಂಸಾಹಾರ ಯಾವುದು ಬೇಕಾದರೂ ನೀಡಿ. ಆದರೆ ಅದು ಸಾತ್ವಿಕ ಆಹಾರವಾಗಿದ್ದರೆ ಒಳ್ಳೆಯದು. ಆಹಾರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆಯುರ್ವೇದ ಶಾಸ್ತ್ರ ಇದನ್ನೇ ಹೇಳುತ್ತದೆ. ಮನಸ್ಸು ತಾಮಸ ಆಗುವ ಯಾವುದೇ ಆಹಾರ ಮಕ್ಕಳಿಗೆ ಕೊಡುವುದು ಸರಿಯಲ್ಲ. ಮಕ್ಕಳು ಯಾವ ಆಹಾರವನ್ನು ತಿನ್ನಬೇಕೆಂದು ಹಿರಿಯರು ನಿರ್ಧರಿಸಬೇಕು. ಹಿರಿಯರು ಯಾವ ತೀರ್ಮಾನ ಮಾಡಿದರೂ ಅದಕ್ಕೆ ನಮ್ಮ ವಿರೋಧ ಇಲ್ಲ. ಸಮಾಜದಲ್ಲಿ ಕ್ರೌರ್ಯ, ಹಿಂಸೆ ಬೇಡವಾದರೆ ಅದಕ್ಕೆ ಅನುಗುಣವಾದ ಆಹಾರ ನೀಡಬೇಕು. ಕ್ರೌರ್ಯ ಹಿಂಸೆ ಮಕ್ಕಳ ಮೇಲೆ ಪರಿಣಾಮ ಬೀರದ ಹಾಗೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.

ಶಾಲೆಯಲ್ಲಿ ಪುರಾಣ ಪಾತ್ರಗಳ ಮೂಲಕ ಮಕ್ಕಳಲ್ಲಿ ಮೌಲ್ಯ ತುಂಬಬೇಕು. ಮಕ್ಕಳಲ್ಲಿ ಆದರ್ಶ ತುಂಬುವುದು ಬಹು ಮುಖ್ಯ. ರಾಮಾಯಣ, ಮಹಾಭಾರತದ ಪ್ರಸಂಗಳನ್ನು ಮಕ್ಕಳಿಗೆ ತಿಳಿಸಬೇಕು. ಇವುಗಳನ್ನು ಶಾಲೆಯಲ್ಲಿ ಮಕ್ಕಳಿಗೆ ಕಲಿಸಲು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಸಭೆಯಲ್ಲಿ ಸಲಹೆ ನೀಡಿದ್ದೇವೆ. ಮಕ್ಕಳ ನೈತಿಕ ಮೌಲ್ಯ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಯಾರಲ್ಲೂ ಅಭಿಪ್ರಾಯ ಭೇದ ಬಂದಿಲ್ಲ ಎಂದರು.

Advertisement

ಮುಕ್ತ ಮತ್ತು ಸ್ವತಂತ್ರವಾಗಿ ಅಭಿಪ್ರಾಯಗಳು ಮಂಡನೆ ಆಗಿವೆ. ಧರ್ಮ ಗುರುಗಳು ನೀಡಿದಂತಹ ವಿಚಾರದಲ್ಲಿ ಯಾರೂ ಪ್ರತಿರೋಧ ಮಾಡಿಲ್ಲ. ಮುಸ್ಲಿಂ, ಕ್ರೈಸ್ತ, ಹಿಂದೂ ಸಮಾಜದ ಎಲ್ಲ ಪಂಗಡ, ಸಮಾಜದ ಸಾಧು- ಸಂತರು ಭಾಗವಹಿಸಿದ್ದರು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಎಂಬುದೇ ಎಲ್ಲರ ಒಟ್ಟಾರೆ ಅಭಿಪ್ರಾಯವಾಗಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next