Advertisement

ರಸ್ತೆಗಳು ಕಾಡನ್ನು ದಾಟುತ್ತವೆ!

06:00 AM Nov 11, 2018 | |

    ನಾವು ಇತ್ತೀಚೆಗೆ ಆಗುಂಬೆಯ ಕಾಡಿನಲ್ಲಿ ಒಂದಷ್ಟು ಸುತ್ತಾಡಿ ಮರಳಿ ಮನೆ ದಾರಿ ಹಿಡಿಯುವ ಹೊತ್ತಿಗೆ ಸಂಜೆಯಾಗಿತ್ತು. ಪಶ್ಚಿಮಘಟ್ಟದ ಮಳೆಕಾಡುಗಳಲ್ಲಿ ಕಂಡುಬರುವ ಅಪರೂಪದ ಸಿಂಹ ಬಾಲದ ಸಿಂಗಳೀಕ (Lion taled macaque) ಗಳ ತವರುಮನೆ ಆಗುಂಬೆ. ನಾವು ಯಾವಾಗ ಆಗುಂಬೆ ದಾರಿ ಹಿಡಿದರೂ ಸಿಂಗಳೀಕಗಳು ಘಾಟಿ ರಸ್ತೆಯ ದಂಡೆಯಲ್ಲಿ ಕೂತು ನಮ್ಮನ್ನೇ ಮುಸಿ ಮುಸಿ ನೋಡುತ್ತ, ಯಾರಾದರೂ ತಿಂಡಿ ಹಾಕುತ್ತಾರಾ ಅಂತ ದಾರಿಯಲ್ಲಿ ಸಾಗುವ ಇದ್ದ ಬದ್ದ ವಾಹನಗಳನ್ನು, ಜನರನ್ನೂ ನೋಡುತ್ತ ಕೂರುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗೇ ನಾವು ಬೇಕಾಬಿಟ್ಟಿಯಾಗಿ ಹಾಕುವ ಕುರಕಲು ತಿಂಡಿಗಳಿಂದಲೇ ಅವುಗಳು ರಸ್ತೆಬದಿ ಬಂದು ಅವುಗಳನ್ನು ತಿನ್ನುವ ಅವಸರದಲ್ಲಿ ಮತ್ಯಾವುದೋ ವಾಹನಗಳಿಗೆ ಡಿಕ್ಕಿ ಹೊಡೆದು ಸಾಯುತ್ತವೆ ಎಂದು ಪರಿಸರ ತಜ್ಞರೊಬ್ಬರು ಹೇಳಿದ್ದನ್ನು ಕೇಳಿದ್ದೆ. ಮಂಗಗಳದ್ದೂ ಇದೇ ಕತೆ ಎಂದಿದ್ದರವರು.

Advertisement

ಆವತ್ತೂ ನಾವು ಸಿಂಗಳೀಕಗಳನ್ನೊಮ್ಮೆ ನೋಡುತ್ತ ಅವುಗಳ ಫೋಟೋ ಕ್ಲಿಕ್ಕಿಸುತ್ತಾ, ಆಗುಂಬೆಯ ತಿರುವೊಂದರಲ್ಲಿ ಬಂದು ನಿಂತಾಗ, ಮರಿಮಂಗವೊಂದು ಆಗುಂಬೆ ತಿರುವಿನ ನಡು ರಸ್ತೆಗೆ ಬಿದ್ದು ಅದರ ಜೀವ ಆದಾಗಲೇ ಹಾರಿಹೋಗಿತ್ತು. ರಸ್ತೆ ತುಂಬ ಚೆಲ್ಲಿದ್ದ ಅದರ ರಕ್ತಸಿಕ್ತ ದೇಹವನ್ನು ದಾಟಿ ಅದೆಷ್ಟೋ ವಾಹನಗಳು ಹಾದುಹೋಗಿತ್ತು.

“ಅದ್ಯಾವ ಹಾಳಾದ ಚಾಲಕನೋ, ಮುಗ್ಧ ಮಂಗದ ಜೀವ ಬಲಿ ತೆಗೆದುಕೊಂಡ ದುಷ್ಟ ‘ ಅಂತ ನಾವು ಸಿಟ್ಟಿನಿಂದ ಇದ್ದ ಬದ್ದ ವಾಹನಗಳನ್ನು ನೋಡುತ್ತ ನಿಂತಾಗ, ಅಲ್ಲೇ ಕೂತ ತಾಯಿ ಮಂಗವೊಂದು ಸತ್ತು ಬಿದ್ದ ತನ್ನ ಪುಟ್ಟ ಮಗುವನ್ನು ಎಷ್ಟೊಂದು ಅಳುಮೋರೆಯಿಂದ ನೋಡುತ್ತಿತ್ತೆಂದರೆ, ತಲೆ ಎಲ್ಲ ಆಗುಂಬೆ ತಿರುವಿನ ದಂಡೆಗೆ ಇಳಿಸಿ ಒಂದೇ ಸಮನೆ ಒತ್ತರಿಸಿ ಬರುವ ಮೂಕ ನೋವಿನ ಕಡಲನ್ನು ಆಗುಂಬೆ ಕಾಡಿನ ಮಡಿಲಲ್ಲಿ ಚೆಲ್ಲುತ್ತಿತ್ತು. ತನ್ನನ್ನು ಬಿಡುಬೀಸಾಗಿ ಹಾದುಹೋಗುತ್ತಿರುವ ವಾಹನಗಳ ಸಾಲುಗಳನ್ನು ಒಮ್ಮೆ ಸಿಟ್ಟಿನಿಂದ, ಏನೂ ಮಾಡಲಾಗದ ಅಸಹಾಯಕತೆಯಿಂದ, ಕಣ್ಣಲ್ಲಿ ಮಡುಗಟ್ಟಿದ ಶೋಕದಿಂದ ನೋಡುತ್ತಿತ್ತು.

ಯಾರು ನನ್ನ ಮಗುವನ್ನು ಸಾಯಿಸಿದ್ದು? ಅಂತ ಬಸ್ಸಿನ ಕಿಟಕಿಗಳನ್ನು, ಟಯರುಗಳನ್ನು, ಸಹ್ಯಾದ್ರಿ ನೆತ್ತಿಯನ್ನು , ವಿಚಿತ್ರ ವೇಗದಿಂದ ಹೋಗುತ್ತಿರುವ ಲಾರಿಗಳನ್ನು ಕೇಳುತ್ತಿದ್ದ ಆ ಕಾಡ ಜೀವವನ್ನು ನೋಡುತ್ತ ಮನುಷ್ಯ ಅನ್ನೋ ಸ್ವಾರ್ಥ ಜೀವಿಗೆ ಮೂಕಪ್ರಾಣಿಗಳ ನೋವು ಯಾಕೆ ಅರ್ಥವಾಗುದಿಲ್ಲ ಅಂತ ನಮಗೆ ನೋವಾಯಿತು. ಅಷ್ಟೊತ್ತಿಗೆ ಆ ಬಿದ್ದ ಮರಿಮಂಗವನ್ನು ಎತ್ತಿಕೊಂಡು ನಾಯಿಯೊಂದು ಕಾಡಿನಲ್ಲಿ ಹೋಗಿಬಿಟ್ಟಿತು. ತಾಯಿ ಮಂಗ ಆಕ್ರೋಶಗೊಂಡು ಅದರ ಹಿಂದೆಯೇ ಓಡಿತು. ಎಷ್ಟು ಓಡಿದರೂ ಕರಗಿಹೋದ ಅದರ ಜೀವ ಮರಳಿ ಬರುತ್ತದಾ ಹೇಳಿ?

ಹಸುರು ಹಾವಿನ ಧ್ಯಾನ
ಇನ್ನೊಮ್ಮೆ ಕಾರ್ಕಳ-ಸಂಸೆ-ಕಳಸ ಹೆದ್ದಾರಿಯಲ್ಲಿ ಇಬ್ಬನಿ ಸುರಿದ ಒಂದು ಮುಂಜಾವಿನಲ್ಲಿ ಕಳಸದ ಕಾಡು ಸುತ್ತೋಣವೆಂದು ಬೈಕ್‌ ಏರಿ ಹೊರಟಿದ್ದೆವು. ಆ ಚಳಿಗೆ ಮುದಗೊಂಡು ಬೈಕಿನ ವೇಗ ಏರಿಸುವಷ್ಟರಲ್ಲಿ ಹಿಂಬದಿ ಕೂತಿದ್ದ ಗೆಳೆಯ, “ಬೈಕ್‌ ನಿಲ್ಲಿಸು ಮಾರಾಯ! ಹುಲ್ಲು ಹಾವು ನೋಡಲ್ಲಿ’ ಅಂತ ಆ ಚಳಿಯಲ್ಲಿ ಸಣ್ಣಗೇ ಚೀರಿದಾಗ, ಹಾವೇನಾದರೂ ಬೈಕ್‌ ಚಕ್ರದಡಿ ಬಿದ್ದಿತೋ ಎಂದು ಹಠಾತ್ತನೇ ಗಾಡಿ ನಿಲ್ಲಿಸಿದೆ. ಪುಣ್ಯಕ್ಕೆ ಆ ಹಾವು ನಮ್ಮ ಬೈಕ್‌ ಚಕ್ರದಡಿ ಬೀಳದೇ, ಇಬ್ಬನಿ ಸುರಿದ ಡಾಮರು ರೋಡಿನ ತುದಿಯಲ್ಲಿತ್ತು. ಎಲೆಯಂತೆ ಉದ್ದನೆ ಇದ್ದ ಗ್ರೀನ್‌ ವೈನ್‌ ಸ್ನೇಕ್‌ ಅನ್ನುವ ಹೆಸರಿನ ಪಚ್ಚೆ ಹಾವು, ಅಲ್ಲಿ ಕೂತು ಧ್ಯಾನ ಮಾಡುತ್ತಿತ್ತೋ? ನಿದ್ದೆ ಮಾಡಿದಂತೆ ನಾಟಕವಾಡುತ್ತಿತ್ತೋ ಅಂತೂ ಅದು ಸುಮ್ಮನಿರುವುದನ್ನು ಕಂಡು ಇನ್ನೂ ಹತ್ತಿರ ಹೋಗಿ ನೋಡಿದರೆ, ಮಿರಿ ಮಿರಿ ಮಿನುಗುತ್ತಿದ್ದ ಆ ಹಾವಿನ ಮೈಮೇಲೆ ಯಾವುದೋ ವಾಹನ ಹೋಗಿ ಅದಕ್ಕೆ ಭಾರೀ ಪೆಟ್ಟಾಗಿ ಮುಂದೆ ಹೋಗಲಾಗದೇ ಅಲ್ಲೇ ಏದುಸಿರು ಬಿಡುತ್ತ ನಿಸ್ಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದು ಸ್ಪಷ್ಟವಾಯ್ತು. ಅಲ್ಲೇ ಬಿದ್ದ ಪುಟ್ಟ ಕಡ್ಡಿ ತಗೊಂಡು ರಸ್ತೆ ಪಕ್ಕ ಇರುವ ಹುಲ್ಲು ಹಾಸಿನ ಮೇಲೆ ಹಗುರನೇ ಆ ಹಾವನ್ನು ತೇಲಿಸಿದೆವು. ಚೂರು ಚೂರೇ ಅಲುಗಾಡಿದ ಆ ಹಾವಿನಲ್ಲಿ ಜೀವದ ಸುಳಿವಿದ್ದಂತೆ ಕಾಣಿಸಲಿಲ್ಲ. ಚೂರು ಜೀವವಿದ್ದರೂ ಯಾವುದೋ ವಾಹನ ಮೈಮೇಲೆ ಹರಿದು, ಅರ್ಧ ನಜ್ಜುಗುಜ್ಜಾಗಿದ್ದ ಆ ಹಾವು ಬದುಕೋದು ಕಷ್ಟ ಅನ್ನಿಸಿತು. ನೀರು ಚಿಮುಕಿಸಿದೆವು, ಅದು ಅಲುಗಾಡಲಿಲ್ಲ. ಒಂದೂ ಮನೆಯಿರದ ಆ ಕಾಡುದಾರಿಯಲ್ಲಿ ದಿನಂಪ್ರತಿ ಅದೆಷ್ಟು ಹಾವುಗಳು, ಚಿಟ್ಟೆಗಳು, ಅಪರೂಪದ ಕೀಟಗಳು ಸಾಯುತ್ತಿರುತ್ತವೆ ಎನ್ನುವುದನ್ನು ಆ ಕಾಡಿನ ದಾರಿ ಹೊಕ್ಕಾಗಲೆಲ್ಲ ತುಂಬ ಸಲ ನೋಡಿದ್ದೆವು. ಹಾವಾ? ಕೋತಿಯಾ? ಸತ್ತರೆ ಸಾಯಲಿ ಬಿಡಿ, ಅಂತ ಅದರ ಮೈಮೇಲೆ ಕ್ಯಾರೇ ಇಲ್ಲದೆ ವಾಹನ ಓಡಿಸುವವರನ್ನು ಕಂಡಾಗೆಲ್ಲ ಬೇಸರವಾಗುತ್ತದೆ. 

Advertisement

ಕುದುರೆಮುಖ, ಆಗುಂಬೆ-ಸೋವೇಶ್ವರ, ಬಂಡೀಪುರ, ಚಾರ್ಮಾಡಿ ಕಾಡಂಚಿನ ರಸ್ತೆಗಳಲ್ಲಿ ಹೀಗೇ ದಿನೇ ದಿನೇ ವಾಹನಗಳ ಅಡಿಗೆ ಸಿಲುಕಿ ಒದ್ದಾಡಿ ಸಾಯುವ ಮೂಕಜೀವಿಗಳಾದ ನವಿಲು, ಮಂಗ, ಕಡವೆ, ಜಿಂಕೆ, ಕಾಡುಕೋಣಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಇತ್ತೀಚೆಗೆ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡಿನಲ್ಲಿ ಖಾಸಗಿ ಬಸ್‌ ಢಿಕ್ಕಿಯಾಗಿ, ಸಾವನ್ನಪ್ಪಿದ ಆನೆ ರೌಡಿ ರಂಗನ ಪ್ರಕರಣ ಸ್ಮತಿಪಟಲದಿಂದ ಇನ್ನೂ ಮಾಸಿಲ್ಲ. ಸಣ್ಣಪುಟ್ಟ ಕಾಡುಗಳಲ್ಲಿರುವ ಊರಲ್ಲಿ ಕಾಡುಪ್ರಾಣಿಗಳು ಸಾಯುವುದು ಮಾಮೂಲು ಅಂತ ಸುಮ್ಮನಿದ್ದುಬಿಡುವ ನಾವು, ಆ ಕಾಡುಪ್ರಾಣಿಗಳು ನಮ್ಮ ಗದ್ದೆಯ ಬೆಳೆ ನಾಶ ಮಾಡಿತು ಅಂತ ಅದರ ಮೇಲೆ ಕ್ರೌರ್ಯ ಎಸಗುತ್ತೇವೆ ಬಿಟ್ಟರೆ, ಅವುಗಳು ಯಾಕೆ ನಾಡಿಗೆ ಬಂದಿದೆ? ಎನ್ನುವ ಪ್ರಶ್ನೆ ನಮಗೆ ಹೊಳೆಯುವುದೇ ಇಲ್ಲ. ಆ ಮುಗ್ಧಪ್ರಾಣಿಗಳ ವಾಸಸ್ಥಾನವಾಗಿದ್ದ ನಿಬಿಡ ಕಾಡುಗಳನ್ನು ಕಡಿದು, ಹಸಿರಿನ ಮೂಲಕ್ಕೆ ಕೈಹಾಕಿ, ನಮ್ಮ ಸ್ವಾರ್ಥಕ್ಕೋಸ್ಕರ‌ ನಾವು ಬದುಕಬೇಕು ಎನ್ನುವ ಒಂದೇ ಒಂದು ಕಾರಣಕ್ಕೋಸ್ಕರ ಕಾಡನ್ನು ಹಗುರನೇ ಒತ್ತುವರಿ ಮಾಡಿ, ಅಲ್ಲೊಂದು ಬರೀ ದುಡ್ಡು ಮಾಡುವ ಘನೋದ್ದೇಶದಿಂದ ರೆಸಾರ್ಟ್‌ಗಳನ್ನು ಸ್ಥಾಪಿಸಿ, ಕಾಡಜೀವಿಗಳ ಬದುಕನ್ನೇ ಕಿತ್ತುಕೊಂಡಿದ್ದೇವೆ ನಾವು.

ನೀವು ಹೃದಯವಿದ್ದವರಾದರೆ, ಇನ್ನಾದರೂ ಕಾಡಂಚಿನ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುವಾಗ ರಸ್ತೆ ಮೇಲೆಲ್ಲ  ಗಮನವಿಟ್ಟು ಡ್ರೆçವ್‌ ಮಾಡಿ, ಅಲ್ಲೊಂದು ಕಡವೆಯೋ? ಹಾವೋ? ಕೋತಿಯೋ, ಜಿಂಕೆಯೋ ಓಡಾಡುತ್ತಿರುತ್ತದೆ, ಅವುಗಳೂ ನಮ್ಮಂತೆಯೇ ಜೀವಗಳು ಎನ್ನುವುದು ನಿಮ್ಮ ಪ್ರಜ್ಞೆಯಲ್ಲಿರಲಿ, ನಾವು “ಜುಮ್‌’ ಎಂದು ಬೇಕಾಬಿಟ್ಟಿ ಹೋಗುತ್ತಿರುವ ಆ ಕಾಡಂಚಿನ ರಸ್ತೆಯ ಮೇಲೆ ನಮಗಿಂತಲೂ ಆ ಕಾಡುಪ್ರಾಣಿಗಳಿಗೆ ಜಾಸ್ತಿ ಹಕ್ಕಿದೆ ಎನ್ನುವುದು ನೆನಪಿರಲಿ.

ಪ್ರಸಾದ್‌ ಶೆಣೈ ಆರ್‌. ಕೆ.

Advertisement

Udayavani is now on Telegram. Click here to join our channel and stay updated with the latest news.

Next