ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಈ ವರ್ಷ ತೀವ್ರ ಬರಗಾಲ ಎದುರಾಗಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದ ಯುವಕರ ತಂಡವೊಂದು ಸ್ವಯಂ ಪ್ರೇರಣೆಯಿಂದ ಕಾಡಿನಲ್ಲಿನ ಪ್ರಾಣಿ, ಪಕ್ಷಿಗಳಿಗೆ ನೀರು ಹಾಗೂ ತಿನ್ನಲು ಜೋಳದ ಕಾಳುಗಳನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾಡು ಪ್ರಾಣಿಗಳಿಗೆ ಆಸರೆ: ಮೊನ್ನೆ ಮೊನ್ನೆಯಷ್ಟೇ ಸೆಲ್ಫಿ ಖ್ಯಾತಿಯ ಅವುಲುಬೆಟ್ಟದಲ್ಲಿ ಸ್ವಯಂ ಪ್ರೇರಣೆಯಿಂದ ಸ್ವತ್ಛತಾ ಕಾರ್ಯ ನಡೆಸಿ ಪ್ರವಾಸಿಗರಿಗೆ ಪರಿಸರ ಹಾಗೂ ಸ್ವತ್ಛತೆಯ ಪಾಠ ಮಾಡಿದ್ದ ಯುವಕರು ಇದೀಗ ಕಾಡು ಪ್ರಾಣಿಗಳಿಗೆ ಆಸರೆಯಾಗುವ ಕೆಲಸಕ್ಕೆ ಮುಂದಾಗಿದ್ದು, ಭಾನುವಾರ ನಗರದ ಹೊರ ಹೊಲಯದ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನೀರಿಲ್ಲದೇ ಪರದಾಡುತ್ತಿದ್ದ ಪ್ರಾಣಿ ಪಕ್ಷಿಗಳನ್ನು ಗಮನಿಸಿದ ಯುವಕರು ಅವುಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
ನೀರಿನ ಕ್ಯಾನ್: ಚಿಕ್ಕಬಳ್ಳಾಪುರದ ಯುವಕರಾದ ಮಧು, ಪ್ರದೀಪ್, ರಂಜಿತ್, ಶಿಕ್ಷಕರಾದ ಮಹಾಂತೇಶ್, ಸುನೀಲ್, ಸತೀಶ್, ರವೀಂದ್ರ ಮತ್ತಿತರರು ತಮ್ಮ ಸ್ವಂತ ಖರ್ಚಿನಿಂದ ಹಣ ಹಾಕಿಕೊಂಡು 5, 10 ಲಿ. ನೀರಿನ ಕ್ಯಾನ್‌ಗಳನ್ನು ಖರೀದಿಸಿ ಪಕ್ಷಿಗಳು ಕುಡಿಯಲು ಅನುಕೂಲವಾಗುವಂತೆ ಮರ, ಗಿಡಗಳ ಪೊದೆಗಳಲ್ಲಿ ವಾರಕ್ಕೆ ಆಗುವಷ್ಟು ನೀರು ಸಂಗ್ರಹಿಸಿ ಇಡುವಷ್ಟು ಪ್ಲಾಸ್ಟಿಕ್ ಪಾತ್ರೆಗಳನ್ನು ಮರಕ್ಕೆ ಶಾಶ್ವತವಾಗಿ ನೇತಾಕಿ ಅದರಲ್ಲಿ ನೀರು ಹಾಕಿದರೆ ಮತ್ತೆ ಕೆಲವು ಕಡೆಗಳಲ್ಲಿ ಜೋಳದ ಕಾಳುಗಳನ್ನು ಒದಗಿಸುವ ಮೂಲಕ ಮೂಕ ಕಾಡು ಪ್ರಾಣಿ, ಪಕ್ಷಿಗಳಿಗೆ ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಈ ಬಾರಿ ಬರಗಾಲದ ತೀವ್ರತೆ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಜನ, ಜಾನುವಾರುಗಳೇ ಕುಡಿಯುವ ನೀರಿಗಾಗಿ ಪರಿತಪ್ಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಾಡುಗಳಲ್ಲಿ ಮೂಕ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪಡುತ್ತಿರುವ ಅರಣ್ಯರೋದನ ನೋಡಿ ಚಿಕ್ಕಬಳ್ಳಾಪುರದ ಯುವಕರು ಬೆಟ್ಟಗುಡ್ಡಗಳಿಗೆ ಪ್ರತಿ ಭಾನುವಾರ ತೆರಳಿ ನೀರು ಒದಗಿಸುವ ಮೂಲಕ ರಜೆ ದಿನವನ್ನು ಸಾರ್ಥಕಪಡಿಸಿಕೊಳ್ಳುತ್ತಿದ್ದಾರೆ.
ಚಿಕ್ಕಬಳ್ಳಾಪುರ ಸುತ್ತಮುತ್ತ ಅರಣ್ಯ ಪ್ರದೇಶ ಇದ್ದು ಸಾಕಷ್ಟು ಕಾಡು ಪ್ರಾಣಿ, ಪಕ್ಷಿಗಳು ಇವೆ. ಈ ಬಾರಿ ತೀವ್ರ ಮಳೆ ಕೊರತೆಯಿಂದ ಕೆರೆ, ಕುಂಟೆಗಳಲ್ಲಿ ನೀರು ಸಂಗ್ರಹವಾಗದೇ ಪಕ್ಷಿಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಪ್ರತಿ ಭಾನುವಾರ ಸಮೀಪದ ಕಾಡು ಪ್ರದೇಶಗಳಿಗೆ ಹೋಗಿ ಪಕ್ಷಿಗಳಿಗೆ ಕುಡಿವ ನೀರು ಮಾತ್ರವಲ್ಲದೇ ಜೋಳದ ಕಾಳುಗಳನ್ನು ಸಹ ಒದಗಿಸಿ ಬರುತ್ತಿದ್ದೇವೆ.
-ಮಹಾಂತೇಶ್, ಶಿಕ್ಷಕರು ಚಿಕ್ಕಬಳ್ಳಾಪುರ