ಬೆಂಗಳೂರು: ಲಾಕ್‌ಡೌನ್‌ನಿಂದ ಅಗತ್ಯಸೇವೆಗಳಡಿ ಮನುಷ್ಯರಿಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ಔಷಧ ವಿತರಣೆ ಆಗುತ್ತಿದೆ. ಆದರೆ ಈ ವಿಚಾರದಲ್ಲಿ ಪ್ರಾಣಿಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ನಗರದ ಹೊರವಲಯದಲ್ಲಿರುವ ಪ್ರಾಣಿಗಳಿಗೆ ಇದರ ಬಿಸಿ ತುಸು ಜೋರಾಗಿ ತಟ್ಟಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಎಮು ಕೋಳಿ, ಪಾರಿವಾಳ, ಆಮೆ, ಕುರಿ, ನಾಯಿ, ಬೆಕ್ಕುಗಳು ಸೇರಿದಂತೆ ನಾನಾ ಸಾಕು ಪ್ರಾಣಿಗಳಿಗೆ ಚಿಕಿತ್ಸೆಗಾಗಿ ನಿತ್ಯ ಹೆಬ್ಟಾಳದ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಹತ್ತಾರು ಕರೆಗಳು ಬರುತ್ತಿವೆ. ಕೆಲವರು ವೀಡಿಯೊ ಅಥವಾ ಫೋಟೋಗಳನ್ನು ಪಶುವೈದ್ಯರಿಗೆ ಕಳುಹಿಸಿ, ಚಿಕಿತೆಗೆ ಮೊರೆ ಇಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಫೋನ್ ಮೂಲಕವೇ ವೈದ್ಯರು ಸಲಹೆಗಳನ್ನೂ ನೀಡುತ್ತಿದ್ದಾರೆ.
ಆದರೆ, ಆ ಔಷಧಗಳ ಖರೀದಿಯೇ ಸವಾಲಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ, ಪೊಲೀಸರು ತರಾಟೆಗೆ ತೆಗೆದುಕೊಳ್ಳುತ್ತಾರೆ. ಪ್ರಾಣಿಗಳಿಗೆ ಔಷಧಿ ಖರೀದಿ ಅವಶ್ಯಕತೆ ಇದೆ ಎಂದು ಹೇಳಿದರೂ ಕೇಳುವುದಿಲ್ಲ. ಪಾಸಿಗಾಗಿ ಆನ್‌ಲೈನ್‌ನಲ್ಲಿ ಮನವಿ ಮಾಡಿದರೆ, “ಎಮರ್ಜನ್ಸಿ ಕೇಸು ಅಲ್ಲ’ ಎಂಬ ಉತ್ತರ ಬರುತ್ತದೆ ಎಂದು ಸಾಕುಪ್ರಾಣಿ ಪ್ರಿಯರು ದೂರುತ್ತಾರೆ. ಆನ್‌ಲೈನ್ ಮೂಲಕ ಬುಕಿಂಗ್ ಮಾಡಬೇಕೆಂದರೆ, ಕನಕಪುರ, ಹೊಸಕೋಟೆ, ಆನೇಕಲ್, ಜಿಗಣಿಯಂತಹ ಪ್ರದೇಶಗಳಿಗೆ ಡೆಲಿವರಿ ಬಾಯ್‌ಗಳು ಬರುವುದಿಲ್ಲ. ಇದು ತಲೆನೋವಾಗಿ ಪರಿಣಮಿಸಿದೆ. ಆಮೆಯಿಂದ ಆನೆವರೆಗೂ 5 ಗ್ರಾಂನಿಂದ 5 ಟನ್‌ವರೆಗಿನ ಪ್ರಾಣಿಗಳಿಗೆ ನಾನಾ ಭಾಗಗಳಿಂದ ಕರೆಗಳು ಬರುತ್ತಿವೆ. ಪ್ರಾಣಿಗಳ ಔಷಧ ಅಂಗಡಿಗಳು ತೆರೆದಿವೆ. ಪಶುವೈದ್ಯರ ಸಲಹೆಗಳೂ ದೊರೆಯುತ್ತಿವೆ. ಆದರೆ, ಔಷಧ ಖರೀದಿಗೆ ಸಂಪರ್ಕ ಕೊಂಡಿ ಇಲ್ಲವಾಗಿದೆ.
ನಗರದಲ್ಲಿ ಕೆಲ ವೃದ್ಧ ದಂಪತಿಗಳು ನಾಯಿ ಅಥವಾ ಬೆಕ್ಕು ಸಾಕಿದ್ದಾರೆ. ಅವುಗಳ ಆರೋಗ್ಯದಲ್ಲಿ ಏರುಪೇರಾದಾಗ ಕರೆ ಮಾಡಿ, ಸಲಹೆ ಪಡೆಯುತ್ತಾರೆ. ಔಷಧಗಳನ್ನು ಸೂಚಿಸಿದಾಗ, ಮಾರುಕಟ್ಟೆಯಿಂದ ತರಲು ಎದುರಾಗುತ್ತಿರುವ ಸಮಸ್ಯೆ ಮುಂದಿಡುತ್ತಾರೆ ಎಂದು ಹೆಬ್ಟಾಳದ ಕರ್ನಾಟಕ ಪಶುವೈದ್ಯಕೀಯ, ಹೈನು ಮತ್ತು ಮೀನುಗಾರಿಕೆಗಳ ವಿಜ್ಞಾನಗಳ ಮಹಾವಿದ್ಯಾಲಯದ ಸಹಾಯ ಪ್ರಾಧ್ಯಾಪಕ ಹಾಗೂ ವನ್ಯಜೀವಿ ತಜ್ಞ ಡಾ.ಎಚ್.ಎಸ್. ಪ್ರಯಾಗ್ ತಿಳಿಸಿದರು.
ವಿದೇಶಗಳಲ್ಲಿ ಪ್ರಾಣಿಗಳ ಮೇಲೂ ಕೋವಿಡ್ 19 ವೈರಸ್ ದಾಳಿ ಮಾಡಿದ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಾಣಿ ಪ್ರಿಯರು ಮತ್ತಷ್ಟು ಸೂಕ್ಷ್ಮವಾಗಿ ಸಾಕುಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ಸ್ವಲ್ಪ ವ್ಯತ್ಯಾಸ ಕಂಡುಬಂದರೂ ಸಾಕು, ಕರೆ ಮಾಡಿ ಸಲಹೆ ಪಡೆಯುತ್ತಾರೆ. ಡೆಂಝೋ, ಸ್ವಿಗ್ಗಿ ಸೇರಿದಂತೆ ಹಲವು ಕಂಪನಿಗಳಿಂದ ಬುಕಿಂಗ್ ಮಾಡಿ, ಔಷಧ ತರಿಸಿಕೊಳ್ಳಲು ಅವಕಾಶ ಇದೆ. ಆದರೆ, ಹೊರವಲಯದಲ್ಲಿರುವವರಿಗೆ ಆ್ಯಪ್ ಇರುವುದು ಗೊತ್ತಿಲ್ಲ. ಇದ್ದರೂ ಅಲ್ಲಿಯವರೆಗೆ ಬರಲು ಕೆಲವರು ಹಿಂದೇಟು ಹಾಕುತ್ತಾರೆ ಎಂದೂ ಹೇಳುತ್ತಿರುವುದು ಕಂಡುಬಂದಿದೆ ಎಂದು ಡಾ.ಪ್ರಯಾಗ್ ಹೇಳಿದರು.
ಮುಂಜಾಗ್ರತೆ ಮುಖ್ಯ : ಕರ್ನಾಟಕ ಸೇರಿದಂತೆ ದೇಶದ ಯಾವುದೇ ಯಾವುದೇ ಭಾಗದಲ್ಲಿ ಜಾನುವಾರಿಗೆ ಕೋವಿಡ್ 19 ವೈರಸ್ ಸೋಂಕು ಬಂದಿರುವ ಬಗ್ಗೆ ದೂರು ದಾಖಲಾಗಿಲ್ಲ. ಈ ವೈರಸ್ ಸೋಂಕಿತ ವ್ಯಕ್ತಿ ಪ್ರಾಣಿಯನ್ನು ಉಪಚರಿಸಿದಾಗ ಬರುವ ಸಾಧ್ಯತೆ ಇದೆಯೇ ಹೊರತು, ಬೇರೆ ಕಾರಣಗಳಿಗೆ ಸಾಕು ಪ್ರಾಣಿಗಳಲ್ಲಿ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಜನರು ಅಗತ್ಯ ಮುಂಜಾಗೃತೆ ವಹಿಸಿದರೆ ಸಾಕು, ಭಯಪಡುವ ಅಗತ್ಯವಿಲ್ಲ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ನಿರ್ದೇಶಕ ಡಾ.ಮಂಜುನಾಥ್ ಎಂ.ಟಿ. ಮಾಹಿತಿ ನೀಡಿದರು.