ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯಲು ಬಿಬಿಎಂಪಿಯಿಂದ ಪ್ರಾಣಿ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಕಾರ್ಯಾಚರಣೆ ನಡೆಸುತ್ತಿದ್ದು, ಸಮಸ್ಯೆ ಉಂಟಾಗಿ ಕಾರ್ಯಾಚರಣೆ ನಡೆಯದ ಮೂರು ವಲಯಗಳಲ್ಲಿಯೂ ತಿಂಗಳೊಳಗೆ ಕಾರ್ಯಾಚರಣೆ ನಡೆಯಲಿದೆ.
ನಗರದಲ್ಲಿ ಇತ್ತೀಚೆಗೆ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿದ್ದರೂ, ದಕ್ಷಿಣ, ಮಹದೇವಪುರ ಹಾಗೂ ಪಶ್ಚಿಮ ವಲಯಗಳಲ್ಲಿ ಪ್ರಾಣಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವ ಗುತ್ತಿಗೆ ಪಡೆಯಲು ಯಾರು ಮುಂದಾಗಿರಲಿಲ್ಲ. ಇದೀಗ ಮೂರು ವಲಯಗಳಲ್ಲಿ ಕರೆದಿರುವ ಟೆಂಡರ್‌ನಲ್ಲಿ ಗುತ್ತಿಗೆದಾರರು ಭಾಗವಹಿಸಿದ್ದು, ತಿಂಗಳೊಳಗೆ ಎಲ್ಲ ವಲಯಗಳಲ್ಲಿ ಎಬಿಸಿ ನಡೆಯಲಿದೆ.
ಸದ್ಯ ಐದು ವಲಯಗಳಲ್ಲಿ ನಾಯಿಗಳನ್ನು ಹಿಡಿದು ಎಬಿಸಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದ್ದು, ಉಳಿದ ಮೂರು ವಲಯಗಳಲ್ಲಿಯೂ ಹೆಚ್ಚುವರಿಯಾಗಿ ಸಮೀಪದ ವಲಯದ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ಇದೀಗ ಮೂರು ವಲಯಗಳಲ್ಲಿನ ಸಮಸ್ಯೆಗಳು ನಿವಾರಣೆಯಾಗಿದ್ದು, ಕಾರ್ಯಾದೇಶ ನೀಡಲು ಆಯುಕ್ತರ ಒಪ್ಪಿಗೆ ನೀಡುವುದು ಬಾಕಿಯಿದೆ ಎಂದು ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಎಲ್ಲ ವಲಯಗಳಲ್ಲಿ 8,609 ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. 9,911 ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗಿದ್ದು, ಇದಕ್ಕಾಗಿ ಒಟ್ಟು 8.17 ಲಕ್ಷ ವೆಚ್ಚ ಮಾಡಲಾಗಿದೆ.
ಆಗಸ್ಟ್‌ವರೆಗೆ ಪಾಲಿಕೆಯ ಎಂಟು ವಲಯಗಳಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಗಂಡು ಹಾಗೂ ಹೆಣ್ಣು ನಾಯಿಗಳನ್ನು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಯಾವುದೇ ನಾಯಿಗೂ ದಯಾಮರಣ ನೀಡಿಲ್ಲ. ಸಮಸ್ಯೆಯಾಗಿದ್ದ ಮೂರು ವಲಯಗಳಲ್ಲಿ ಎಬಿಸಿ ಕಾರ್ಯಾಚರಣೆಗೆ ಗುತ್ತಿಗೆದಾರರನ್ನು ನಿಯೋಜನೆ ಮಾಡಲಾಗುತ್ತಿದ್ದು, ತಿಂಗಳೊಳಗೆ ಎಲ್ಲ ವಲಯಗಳಲ್ಲಿ ಗುತ್ತಿಗೆದಾರರು ಕಾರ್ಯನಿರ್ವಹಿಸಲಿದ್ದಾರೆ.
-ಜಿ.ಆನಂದ್, ಪಶುಸಂಗೋಪನೆ ಇಲಾಖೆ ಜಂಟಿ ಆಯುಕ್ತ