Advertisement

ಅನಾಥ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತು ಪಡೆದುಕೊಳ್ಳಲು ಪ್ರಾಣಿ ಪ್ರಿಯರ ಉತ್ಸಾಹ

10:52 AM May 01, 2019 | Hari Prasad |

ಮಂಗಳೂರು: ‘ಪ್ರಾಣಿಯೊಂದನ್ನು ರಕ್ಷಿಸುವುದರಿಂದ ಜಗತ್ತೇನೂ ಬದಲಾಗುವುದಿಲ್ಲ ಆದರೆ ಹಾಗೆ ರಕ್ಷಿಸಲ್ಪಟ್ಟ ಪ್ರಾಣಿಯ ಜಗತ್ತು ಮಾತ್ರ ಖಂಡಿತವಾಗಿಯೂ ಬದಲಾಗುತ್ತದೆ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅನಿಮಲ್‌ ಕೇರ್‌ ಟ್ರಸ್ಟ್‌ (ACT) ಆಪತ್ತಿನಲ್ಲಿರುವ ಬೀಡಾಡಿ ಪ್ರಾಣಿಗಳಿಗೆ ಸುರಕ್ಷಿತ ತಾಣವನ್ನು ಒದಗಿಸುವ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಸಕ್ರಿಯ ಕಾರ್ಯವನ್ನು ನಿರ್ವಹಿಸುತ್ತಿದೆ.

Advertisement

ಈ ಟ್ರಸ್ಟ್‌ನ ಕಾರ್ಯಕರ್ತರು ಒಂದೆಡೆಯಲ್ಲಿ ಗಾಯಗೊಂಡ, ರೋಗಗ್ರಸ್ತ, ಮತ್ತು ತೊರೆಯಲ್ಪಟ್ಟ ಪ್ರಾಣಿಗಳನ್ನು ರಕ್ಷಿಸುವ ಕೆಲಸವನ್ನು ಮಾಡಿದರೆ, ಇನ್ನೊಂದೆಡೆಯಲ್ಲಿ ಹೀಗೆ ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಒಂದು ಉತ್ತಮ ನೆಲೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ನಾಯಿ ಮರಿಗಳ ಹಾಗೂ ಬೆಕ್ಕಿನ ಮರಿಗಳನ್ನು ದತ್ತು ನೀಡುವ ಶಿಬಿರಗಳನ್ನು ನಡೆಸುತ್ತಲೇ ಇದ್ದಾರೆ. ಈ ಮಾದರಿ ಕಾರ್ಯದ ಒಂದು ಭಾಗವಾಗಿ ಅನಿಮಲ್‌ ಕೇರ್‌ ಸಂಸ್ಥೆ ಕಳೆದ ಶನಿವಾರ ಮತ್ತು ಭಾನುವಾರಗಳಂದು ದತ್ತು ನೀಡುವ ಶಿಬಿರಗಳನ್ನು ಹಮ್ಮಿಕೊಂಡಿತ್ತು.


ಎಪ್ರಿಲ್‌ 27ರ ಶನಿವಾರದಂದು ನಗರದ ಕಂಕನಾಡಿ ಬೈಪಾಸ್‌ ರಸ್ತೆಯಲ್ಲಿರುವ ಅನಿರ್ವೇದ – ಮಾನಸಿಕ ಸ್ವಾಸ್ಥ್ಯ ಸಂಪನ್ಮೂಲ ಕೇಂದ್ರದಲ್ಲಿ ಈ ಶಿಬಿರ ನಡೆಯಿತು. ಇದೇ ಶಿಬಿರದಲ್ಲಿ ಪ್ರಾಣಿ ಸಂಬಂಧಿ ಥೆರಪಿ ಕಾರ್ಯಾಗಾರವನ್ನೂ ಸಹ ನಡೆಸಲಾಗಿತ್ತು. ಮುಖ್ಯವಾಗಿ ಭಿನ್ನ ಸಾಮರ್ಥ್ಯದ ಮಕ್ಕಳಲ್ಲಿ ಚಿಕಿತ್ಸಕ ಬದಲಾವಣೆಯನ್ನು ತರುವಲ್ಲಿ ಸಾಕು ಪ್ರಾಣಿಗಳ ಸಂಸರ್ಗವನ್ನು ಮೂಡಿಸುವುದು ಈ ಥೆರಪಿಯ ಉದ್ದೇಶವಾಗಿತ್ತು.

ಎಪ್ರಿಲ್‌ 28ರ ಭಾನುವಾರದಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ಕೊಲ್ಯದಲ್ಲಿರುವ ಶ್ರೀ ಮೂಕಾಂಬಿಕ ಇಂಡಸ್ಟ್ರೀಸ್‌ ಆವರಣದಲ್ಲಿ ದತ್ತು ಶಿಬಿರವನ್ನು ಆಯೋಜಿಸಲಾಗಿತ್ತು. ಮತ್ತು ಈ ಶಿಬಿರದಲ್ಲಿ ನಾಯಿ ಮರಿಗಳು ಹಾಗೂ ಬೆಕ್ಕಿನ ಮರಿಗಳನ್ನು ದತ್ತು ನೀಡುವಿಕೆಗಾಗಿ ಇಡಲಾಗಿತ್ತು.
ಇವುಗಳಲ್ಲಿ ಹೆಣ್ಣು ನಾಯಿಮರಿಗಳ ದತ್ತು ನೀಡುವಿಕೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ನಾಯಿಮರಿಗಳನ್ನು ದತ್ತು ಸ್ವೀಕಾರ ಮಾಡಿಕೊಂಡವರಿಗೆ ಅವುಗಳಿಗೆ ನೀಡಬೇಕಾದ ಆಹಾರಗಳ ಕುರಿತಾಗಿ ಮತ್ತು ಹೆಣ್ಣು ನಾಯಿಮರಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯ ಅಗತ್ಯತೆಯ ಕುರಿತಾಗಿಯೂ ಈ ಶಿಬಿರದಲ್ಲಿ ಮನವರಿಕೆ ಮಾಡಿಕೊಡಲಾಯ್ತು.


ಶಿಬಿರಕ್ಕೆ ಪ್ರಾಣಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಟ್ಟು 9 ನಾಯಿಮರಿಗಳು ಹಾಗೂ 3 ಬೆಕ್ಕಿನ ಮರಿಗಳನ್ನು ಪ್ರಾಣಿಪ್ರಿಯರು ದತ್ತು ಪಡೆದುಕೊಂಡಿದ್ದಾರೆ. 9 ನಾಯಿಮರಗಳಲ್ಲಿ 7 ಹೆಣ್ಣು ನಾಯಿಮರಿಗಳನ್ನು ದತ್ತು ಪಡೆದುಕೊಂಡಿರುವುದು ಆಯೋಜಕರಿಗೆ ಖುಷಿ ನೀಡಿದೆ.

ಮಂಗಳೂರು ಪೂರ್ವ ರೋಟರಿ ಕ್ಲಬ್‌, ರೋಟರಿ ಸಮುದಾಯ ದಳ, ಕೊಲ್ಯ, ಸೋಮೇಶ್ವರ ಮತ್ತು ಯುವ ವಾಹಿನಿ (ರಿ.) ಕೊಲ್ಯ ವಿಭಾಗ ಇವುಗಳ ಸಹಯೋಗದಲ್ಲಿ ಈ ದತ್ತು ನೀಡುವಿಕೆ ಶಿಬಿರ ಯಶಸ್ವಿಗೊಂಡಿತು.

ಅನಿಮಲ್‌ ಕೇರ್‌ ಟ್ರಸ್ಟ್‌ ನೋಂದಾವಣೆಗೊಂಡು ಇದೀಗ ಇಪ್ಪತ್ತು ವರ್ಷಗಳು ಸಂದಿವೆ. ಬೀದಿಬದಿಯಲ್ಲಿ ಅನಾಥವಾಗಿರುವ ಮತ್ತು ಗಾಯಗೊಂಡು ಸಾಯುವ ಸ್ಥಿತಿಯಲ್ಲಿರುವ ಮೂಕಪ್ರಾಣಿಗಳನ್ನು ರಕ್ಷಿಸಿ ಅವುಗಳ ಆರೈಕೆ ಮಾಡಿ ಬಳಿಕ ಅವುಗಳನ್ನು ಪ್ರಾಣಿಪ್ರಿಯರು ಸಾಕಿಕೊಳ್ಳಲು ಅನುಕೂಲವಾಗುವಂತೆ ದತ್ತು ನೀಡುವ ಮೂಲಕ ಮಂಗಳೂರು ನಗರಾದ್ಯಂತ ಪ್ರಶಂಸಾರ್ಹ ಕಾರ್ಯವನ್ನು ಈ ಸಂಸ್ಥೆ ಕಳೆದ ಎರಡು ದಶಕಗಳಿಂದ ಮಾಡುತ್ತಿದೆ.

Advertisement

ಭಾರತೀಯರಾದ ನಾವು ಭಾರತೀಯ ತಳಿಯ ಪ್ರಾಣಿಗಳನ್ನೇ ಸಾಕುವ ಮೂಲಕ ಅವುಗಳ ಪಾಲಿಗೂ ನಮ್ಮ ಪ್ರಾಣಿಪ್ರೀತಿ, ಕಾಳಜಿಯನ್ನು ತೋರಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ACTಯ ಟ್ರಸ್ಟೀಗಳಲ್ಲಿ ಒಬ್ಬರಾಗಿರುವ ಸುಮಾ ಅರ್‌.ನಾಯಕ್‌ ಅವರು ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next