ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಪ್ರಾಣಿ ಹಿಂಸೆ ನಡೆಯುತ್ತಿದ್ದರೂ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಪ್ರಾಣಿ ಪ್ರಿಯರ ಕೂಗಿಗೆ ಇದೀಗ ನ್ಯಾಯ ದೊರಕಿದ್ದು, ಪ್ರಾಣಿಗಳ ರಕ್ಷಣೆಗಾಗಿ ಪೊಲೀಸ್ ಅಧಿಕಾರಿಯನ್ನೇ ನೋಡಲ್ ಅಧಿಕಾರಿ ನೇಮಿಸಲಾಗುತ್ತಿದೆ.
ಸುಪ್ರೀಂಕೋರ್ಟ್ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟಲು ಪ್ರತಿವಿಭಾಗಕ್ಕೆ ಒಬ್ಬ ಪೊಲೀಸ್ ಅಧಿಕಾರಿಯನ್ನೇ ನೋಡಲ್ ಅಧಿಕಾರಿ ನೇಮಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಶೇಷ ಅಧಿಕಾರಿ ಗಳನ್ನು ನೇಮಿಸಲಾಗಿದೆ.
ಹಿಂದೆ ಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಹೋದರೆ ಸರಿಯಾದ ಸ್ಪಂದನೆ ಪೊಲೀಸ್ ಠಾಣೆಯಲ್ಲಿ ದೊರಕುತ್ತಿರಲಿಲ್ಲ. ಆದರೆ, ಈಗ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತೊಂದರೆ ಯಲ್ಲಿರುವ ಪ್ರಾಣಿಗಳನ್ನು ಕಾಪಾಡುವ ಹಾಗೂ ಕ್ರೌರ್ಯವನ್ನು ತಡೆಗಟ್ಟುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಪ್ರಸ್ತುತ ಪೊಲೀಸ್ ಆಯುಕ್ತರ ಕಚೇರಿಯ ಕಮಾಂಡ್ ಸೆಂಟರ್ ವಿಭಾಗದಲ್ಲಿ ನಮ್ಮ -112 ಸಹಾಯವಾಣಿಯು ಸಹ ಪ್ರಾಣಿಗಳ ಮೇಲಿನ ನಡೆ ಯುವ ದೌರ್ಜನ್ಯಗಳ ದೂರುಗಳನ್ನು ದಾಖಲಿಸಿ, ಸಂಬಂಧಿಸಿದ ಠಾಣಾಧಿಕಾರಿಗಳಿಗೆ ರವಾನಿಸಲಾಗುತ್ತದೆ.
ಈ ಮಧ್ಯೆ, ಪೊಲೀಸ್ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಪ್ರಾಣಿ ಹಿಂಸೆ ತಡೆ ಕಾಯಿದೆಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ನಡೆಸಲಾಗುತ್ತಿದೆ. ಇಲ್ಲಿ ಪ್ರಾಣಿಗಳು ಮೇಲೆ ದೌರ್ಜನ್ಯ ನಡೆದಾಗ ಯಾವ ರೀತಿಯಾಗಿ ತುರ್ತು ಸ್ಪಂದಿಸಿ, ಯಾವ ರೀತಿ ಯಾದ ಕಾನೂನು ಕ್ರಮ ತೆಗೆದುಕೊಳ್ಳುವ ಕುರಿತು ತಜ್ಞ ರಿಂದ ವಿಶೇಷವಾದ ಕಾರ್ಯಾಗಾರ ನಡೆಯಲಿದೆ.
ನಗರದಲ್ಲಿ ಬೀದಿ ಪ್ರಾಣಿಗಳ ಮೇಲಿನ ಕ್ರೌರ್ಯ ಹಾಗೂ ದೌರ್ಜನ್ಯಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಕಾರಿನ ಚಾಲಕ ನಾಯಿ ಮೇಲೆ ಕಾರು ಚಲಾಯಿಸಿದ್ದು, ಮಹಿಳೆಯೊ ಬ್ಬರು 8 ನಾಯಿ ಮರಿಗಳನ್ನು ಚರಂಡಿಗೆಸದು ಕೊಲೆಗೈದಿರುವ, ಬೀದಿ ನಾಯಿಗಳಿಗೆ ವಿಷವುಣಿಸಿದ ಪ್ರಕರಣ, ಬೈಕಿಗೆ ನಾಯಿಯನ್ನು ಕಟ್ಟಿಕೊಂಡು ಎಳೆದುಕೊಂಡಿರುವ ಪ್ರಕರಣಗಳು ಗಮನ ಸೆಳೆದಿತ್ತು.
ಶಿಕ್ಷೆಗಳೇನು?
ಪ್ರಾಣಿಗಳ ಮೇಲೆ ದೌಜನ್ಯ ಎಸೆಗಿದ್ದರೆ ಅಂತಹವರ ಮೇಲೆ ಪ್ರಕರಣ ದಾಖಲಾಗುತ್ತದೆ. ವ್ಯಕ್ತಿಯು ವೈಯಕ್ತಿವಾಗಿ ದೌರ್ಜನ್ಯ ಎಸಗಿದ್ದರೆ ಅಂತಹವರು 3 ಲಕ್ಷ ರೂ. ಹಾಗೂ ವಾಹನಗಳ ಮೂಲಕ ದೌರ್ಜನ್ಯ ಎಸಗಿದ್ದರೆ 10 ಲಕ್ಷ ರೂ. ಶರತ್ತುಬದ್ಧ ಬಾಂಡ್ ಮೂಲಕ ಹೊರಬರಬೇಕಾಗುತ್ತದೆ. ಒಂದು ವೇಳೆ 10 ತಿಂಗಳೊಳಗೆ ವ್ಯಕ್ತಿಯು ಮತ್ತೆ ಇಂತಹ ಪ್ರಕರಣಗಳಿಗೆ ಮರುಕಳಿಸಿದರೆ ಬಾಂಡ್ ರದ್ದುಗೊಳ್ಳಲಿದ್ದು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸೊಸೈಟಿ ಫಾರ್ ದಿ ಪ್ರಿವೆನ್ಶನ್ ಆಫ್ ಕ್ರೌಲ್ಟಿ ತು ಅನಿಮಲ್ಸ್ ( ಎಸ್‌ಪಿಸಿಎ) ಸದಸ್ಯ ಅರುಣ್ ಪ್ರಸಾದ್ ತಿಳಿಸುತ್ತಾರೆ.
ಸುಪ್ರೀಂ ಕೋರ್ಟ್ ಆದೇಶ ಅನ್ವಯ ಪ್ರಾಣಿಗಳ ರಕ್ಷಣೆಗಾಗಿಯೇ ಪೊಲೀಸ್ ಅಧಿಕಾರಿಯನ್ನೇ ನೋಡಲ್ ಅಧಿಕಾರಿ ನೇಮಿಸಿರುವುದರಿಂದ ಪ್ರಾಣಿಗಳ ಮೇಲಿನ
ದೌರ್ಜನ್ಯ ಕಡಿವಾಣ ಹಾಕಲು ಸಾಧ್ಯವಿದೆ. ದೂರುಗಳಿಗೂ ಸೂಕ್ತವಾದ ನ್ಯಾಯ ಸಿಗಲಿದೆ.
●ಅರುಣ್ ಪ್ರಸಾದ್, ಎಸ್‌ಪಿಸಿಎ ಸದಸ್ಯ
*ತೃಪ್ತಿ ಕುಮ್ರಗೋಡು