ಮುಂಬೈ: ಕೊನೆಗೂ ಐಪಿಎಲ್ ರಿಟೆನ್ಶನ್ ಮುಗಿದಿದೆ. ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳಲು ಬಯಸುವ ಆಟಗಾರರ ಪಟ್ಟಿಯನ್ನು ಮಂಗಳವಾರ ಅಧಿಕೃತಗೊಳಿಸಿದೆ. ಪ್ರೀತಿ ಜಿಂಟಾ ಮಾಲಿಕತ್ವದ ಪಂಜಾಬ್ ಕಿಂಗ್ಸ್ ತಂಡವು ಮಯಾಂಕ್ ಅಗರ್ವಾಲ್ ಮತ್ತು ಅರ್ಶ್ ದೀಪ್ ಸಿಂಗ್ ಅವರನ್ನು ರಿಟೈನ್ ಮಾಡಿಕೊಂಡಿದೆ.
ಪಂಜಾಬ್ ಕಿಂಗ್ಸ್ ನ ನಾಯಕ ಕೆ.ಎಲ್.ರಾಹುಲ್ ರನ್ನು ಫ್ರಾಂಚೈಸಿ ಉಳಿಸಿಕೊಂಡಿಲ್ಲ. ಈ ಬಗ್ಗೆ ಮಾತನಾಡಿರುವ ಕೋಚ್ ಅನಿಲ್ ಕುಂಬ್ಳೆ,” ನಾವು ಕೆ.ಎಲ್.ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು. ಅದಕ್ಕಾಗಿಯೇ ಅವರನ್ನು ನಾವು ನಾಯಕರನ್ನಾಗಿ ಮಾಡಿದ್ದೆವು. ಆದರೆ ಅವರು ತಂಡದಲ್ಲಿ ಉಳಿಯಲು ಬಯಸಿಲ್ಲ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ
ಪಂಜಾಬ್ ಕಿಂಗ್ಸ್ ತಂಡವು ಮಯಾಂಕ್ ಅಗರ್ವಾಲ್ ಅವರನ್ನು 12 ಕೋಟಿ ರೂ. ಮತ್ತು ಅರ್ಶದೀಪ್ ಸಿಂಗ್ ಅವರನ್ನು 4 ಕೋಟಿ ರೂ. ಗೆ ತಂಡದಲ್ಲಿ ಉಳಿಸಿಕೊಂಡಿದೆ.
ನೂತನ ತಂಡಗಳಾದ ಅಹಮದಾಬಾದ್ ಮತ್ತು ಲಕ್ನೋ ಫ್ರಾಂಚೈಸಿಗಳು ತಮ್ಮ ಆಯ್ಕೆಯ ತಲಾ ಮೂರು ಆಟಗಾರರನ್ನು ಹೆಸರಿಸಲು ಡಿಸೆಂಬರ್ 25 ರವರೆಗೆ ಸಮಯವಿರುವುದರಿಂದ ಎರಡು ಹೊಸ ತಂಡಗಳಲ್ಲಿ ಒಂದು ಕೆ.ಎಲ್.ರಾಹುಲ್ ಅವರನ್ನು ಆಯ್ಕೆ ಮಾಡಬಹುದು. ಎರಡು ಹೊಸ ತಂಡಗಳು ರಾಹುಲ್ ಅವರನ್ನು ಆಯ್ಕೆ ಮಾಡದಿದ್ದರೆ, ಅವರು ಮೆಗಾ ಹರಾಜಿಗೆ ಹೋಗುತ್ತಾರೆ.