Advertisement

ಕೋಪ ಬಂದರೇ ಸುಮ್ಮನಿರಲ್ಲ…

07:55 PM Aug 18, 2020 | Suhan S |

ಕೋಪ ಬಂದ್ರೆ ಅವನು ದೂರ್ವಾಸ ಮುನಿ. ಬಾಕಿ ಟೈಮ್‌ನಲ್ಲಿ ಅವನಷ್ಟು ಒಳ್ಳೆಯವರೂ ಇರಲ್ಲ. ಕೋಪ ಬಂದಾಗ ಅವನಷ್ಟು ಕೆಟ್ಟವರೂ ಸಿಗಲ್ಲ… – ಕೆಲವು ವ್ಯಕ್ತಿಗಳ ಕುರಿತು ಹೀಗೆಲ್ಲಾ ಹೇಳುವುದನ್ನು ನಾವೆಲ್ಲಾ ಕೇಳಿಯೇ ಇರುತ್ತೇವೆ. ಅದರರ್ಥ ಇಷ್ಟೇ- ಕೋಪ ಬಂದಾಗ ಆತ ತುಂಬಾ ಡೇಂಜರಸ್‌! ಒಬ್ಬ ವ್ಯಕ್ತಿಗೆ ಕೋಪ ಬಂತು ಎಂಬ ಕಾರಣಕ್ಕೆ ಜಗಳಗಳಾಗಿವೆ.

Advertisement

ಹೊಡೆದಾಟಗಳು ನಡೆದಿವೆ. ಎಷ್ಟೋ ಕಡೆ ಕೊಲೆಗಳೂ ಆಗಿಹೋಗಿವೆ. ಕೋಪದಿಂದ ಆಡಿದ ಒಂದೇ ಮಾತಿಗೆ, ದಶಕಗಳ ಗೆಳೆತನ ಮುರಿದು ಬಿದ್ದಿದೆ. ಸಂಬಂಧಗಳು ಹಳಸಿಕೊಂಡಿವೆ. ಹೇಳುತ್ತಾ ಹೋದರೆ, ಅದು ಮುಗಿಯದ ಕಥೆಯೇ ಆಗಬಹುದೇನೋ… ಹಲವು ಅನಾಹುತಗಳಿಗೆ ಕಾರಣವಾಗುವ ಈ ಸಿಟ್ಟು ಯಾಕಾದರೂ ಬರುತ್ತದೆ? ಇದ್ದಕ್ಕಿದ್ದಂತೆಯೇ ಸಿಟ್ಟು ಜೊತೆಯಾಗಲು ಕಾರಣವಾದರೂ ಏನು? ಎಂಬ ಪ್ರಶ್ನೆಗೆ ಉತ್ತರ ಸರಳ. ಯಾರಾದರೂ ನಮ್ಮನ್ನು ಬೈದಾಗ, ನಮ್ಮ ಮಾತಿಗೆ ಬೆಲೆ ಕೊಡದೆ ಹೋದಾಗ, ನಮ್ಮನ್ನು ಟೀಕಿಸಿದಾಗ, ಖಂಡಿಸಿದಾಗ ಅಥವಾ ಹಂಗಿಸಿದಾಗ ನಮಗೆ ಸಿಟ್ಟು ಬರುತ್ತದೆ. ಎದುರಾಳಿಗಳನ್ನು ಖಂಡಿಸುವ ಭರದಲ್ಲಿ ಅವರನ್ನು ಬಯ್ಯುವ, ಅಗತ್ಯ ಬಂದರೆ ನಾಲ್ಕೇಟು ಹಾಕಿಬಿಡುವಂಥ ಸ್ಥಿತಿಗೂ ನಾವು ತಲುಪಿಬಿಡುತ್ತೇವೆ. ಇದಕ್ಕೆ ಕಾರಣವಾಗುವುದು- ಸಿಟ್ಟು ಅರ್ಥಾತ್‌ ಕೋಪ.

ನೆನಪಿರಲಿ: ಪದೇಪದೆ ಸಿಟ್ಟಿಗೇಳುವುದರಿಂದ ತೊಂದರೆಗಳು ಜಾಸ್ತಿ. ನೆರೆಹೊರೆಯವರು, ಬಂಧುಗಳು- ಗೆಳೆಯರು- “ಅವನಿಗೆ ಸಿಟ್ಟು ಜಾಸ್ತಿ ಮಾರಾಯ, ಯಾಕೆ ಬೇಕು ಸಹವಾಸ?’ ಅನ್ನುತ್ತಾ ಅಂತರ ಕಾದುಕೊಳ್ಳಬಹುದು. ಅವಾಯ್ಡ್ ಮಾಡಬಹುದು. ಕೆಟ್ಟ ಅಭಿಪ್ರಾಯ ಹೊಂದಬಹುದು. ಅಷ್ಟೇ ಯಾಕೆ? ಬೇರೆಯವರಿಗೆ ನಮ್ಮ ಕುರಿತು ನೆಗೆಟಿವ್‌ ಮಾತುಗಳನ್ನೇ ಹೇಳಿಬಿಡಬಹುದು. ಹೀಗೆಲ್ಲಾ ಆದಾಗ, ಸಮಾಜದಲ್ಲಿ ನಮ್ಮ ಕುರಿತು ಒಂದು ಕೆಟ್ಟ ಅಭಿಪ್ರಾಯ ತಂತಾನೇ ಹುಟ್ಟಿಕೊಳ್ಳುತ್ತದೆ. ಹೀಗೆ ಆದಾಗ ನಮ್ಮ ಇಮೇಜ್‌ ಹಾಳಾಗುತ್ತದೆ. ಅದಕ್ಕಿಂತ ಮುಖ್ಯವಾಗಿ, ಪದೇಪದೆ ಸಿಟ್ಟಿಗೇಳುವ ಕಾರಣಕ್ಕೆ ರಕ್ತದ ಒತ್ತಡವೂ ಹೆಚ್ಚಿ, ಆರೋಗ್ಯ ಹಾಳಾಗುತ್ತದೆ ಎಂದು ವಿವರಿಸಿ ಹೇಳಬೇಕಿಲ್ಲ ತಾನೇ?

ಸಿಟ್ಟು ಅಥವಾ ಕೋಪ ಬಾರದವರಂತೆ ಉಳಿಯಲು ಸಾಧ್ಯವೇ ಇಲ್ಲ. ಮೂಗಿರುವವರೆಗೆ ನೆಗಡಿ ತಪ್ಪುವುದಿಲ್ಲ ಅನ್ನುವಂತೆ, ಮನುಷ್ಯನೊಬ್ಬ ಬದುಕಿರುವವರೆಗೂ ಅವನಿಗೆ ಕೋಪ ಬಂದೇ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ಬಾಯಿಗೆ ಬಂದಂತೆ ಮಾತಾಡದೇ ಇದ್ದರೆ ಅದೆಷ್ಟೋ ಅನಾಹುತಗಳನ್ನು ತಪ್ಪಿಸಬಹುದು. ಮುಖ್ಯವಾಗಿ, ಸಿಟ್ಟು ಬಂದಾಗ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಆವೇಶದ ಕೈಗೆ ಬುದ್ಧಿ ಕೊಡಬಾರದು. ಗೆಳೆಯರ, ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸಿಟ್ಟು ಬಂದರೆ, ತಕ್ಷಣ ಅಲ್ಲಿಂದ ಎದ್ದು ಯಾವುದಾದರೂ ಒಂದು ಏಕಾಂತದ ಪ್ರದೇಶಕ್ಕೆ ಹೋಗಿಬಿಡಬೇಕು. ಹೀಗೆ ಮಾಡಿದರೆ, ಕೋಪದಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದು. ಅಷ್ಟೇ ಅಲ್ಲ, ಕೋಪ ಬಾರದಂತೆ ನೋಡಿಕೊಳ್ಳಲೂಬಹುದು.­

Advertisement

Udayavani is now on Telegram. Click here to join our channel and stay updated with the latest news.

Next