ಅಬ್ಟಾ ! ಏನು ಮಳೆ! ಹೀಗೆ ಮಳೆ ಬಂದರೆ ಏನೂ ಉಳಿಯಲಿಕ್ಕಿಲ್ಲ. ಕೃಷಿ ಸರ್ವನಾಶ ಖಂಡಿತ. ಬರುವ ವರ್ಷ ಊಟ ಮಾಡಲಿಕ್ಕೆ ಇಲ್ಲ’ ಇದು ಕರಾವಳಿ ಹಾಗೂ ಮಲೆನಾಡ ರೈತರ ಒಕ್ಕೊರಲ ಮಾತು. ಹೌದು, ಇದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಮಳೆ ರೈತರ ಮೇಲೆ ಮುನಿಸಿಕೊಂಡಿದೆ. ಮೇ ತಿಂಗಳಿನಲ್ಲಿ ಆರಂಭವಾದ ಮಳೆ ವಿಶ್ರಾಂತಿ ಪಡೆದುಕೊಂಡಿಲ್ಲ. ಒನಕೆ ಗಾತ್ರದ ಧಾರೆಯ ಮಳೆ ಒಂದೇ ಸವನೆ ಸುರಿಯುತ್ತಿದೆ. ಮುಂಗಾರಿನ ಅಭಿಷೇಕಕ್ಕೆ ಅಂಗಳ, ತೋಟ, ಗದ್ದೆ, ಬಯಲು ಇಡೀ ಊರಿಗೆ ಊರೇ ಮುಳುಗಿದೆ. “ಮಳೆಯಿದ್ದರೇ ಇಳೆ; ಮಳೆಯಿಂದಲೇ ಬೆಳೆ’ ಎಂದು ಮಳೆಯ ಮಹಿಮೆಯ ಬಗ್ಗೆ ಹೇಳುತ್ತಾರೆ. ಆದರೆ ಯಾವುದೂ ಅತಿಯಾಗಬಾರದು. “ಅತಿಯಾದರೆ ಅಮೃತವೂ ವಿಷ’ ಎಂಬಂತೆ ಹದತಪ್ಪಿ ಸುರಿದ ಮಳೆ ಬದುಕಿನ ಹದವನ್ನೂ ತಪ್ಪಿಸಿದೆ. ಪ್ರಕೃತಿ ವಿಕೋಪ ರೈತನನ್ನು ಸುಖದಿಂದ ಇರಲು ಬಿಡುವುದಿಲ್ಲ. ವರುಣನ ಆರ್ಭಟಕ್ಕೆ ಕೃಷಿಕ ಹೈರಾಣಾಗಿ¨ªಾನೆ. ಕರಾವಳಿ, ಮಲೆನಾಡಿನ ರೈತರ ಪ್ರಧಾನ ಬೆಳೆ ಅಡಿಕೆ. ಮಕ್ಕಳ ವಿದ್ಯಾಭ್ಯಾಸ, ಮುಂಜಿ, ಮದುವೆ ಎಲ್ಲದಕ್ಕೂ ಅವರು ನಂಬಿರುವುದು ಅಡಿಕೆಯನ್ನೇ. ಅಡಿಕೆ ಅವರ ಜೀವನಾಡಿ. ಮಳೆಗಾಲದಲ್ಲಿ ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸದೆ ಇದ್ದರೆ ಕೊಳೆರೋಗ ಬಂದು ಅಡಿಕೆಯೆಲ್ಲ ಉದುರಿ ಮರದ ಬುಡದಲ್ಲಿರುತ್ತದೆ. ಜೋರು ಮಳೆ ಬರುವ ಸಮಯದಲ್ಲಿ ತೋಟಕ್ಕೆ ಔಷಧಿ ಸಿಂಪಡಿಸುವುದು ಕಷ್ಟ. ಅದೊಂದು ದೊಡ್ಡ ಯಜ್ಞ ಮಾಡಿದಂತೆ. ಈ ಸಮಯದಲ್ಲಿ ಮರದಲ್ಲಿ ಹಾವಸೆ ಬೆಳೆದು ಮರಕ್ಕೆ ಹತ್ತಲಾಗುವುದಿಲ್ಲ. ಔಷಧಿ ಸಿಂಪಡಿಸಬೇಕಾದರೆ ಮರ ಮಾತ್ರವಲ್ಲ ಗೊನೆಯೂ ಒಣಗಿ ಸಿಕ್ಕಬೇಕು. ಅಂದು ಸಿದ್ಧಪಡಿಸಿದ ಔಷಧಿಯನ್ನು ಅಂದೇ ಬಿಟ್ಟು ಮುಗಿಸಬೇಕು. ಉಳಿದರೆ ಅದು ಹುಳಿ ಬಂದು ಹಾಳಾಗುತ್ತದೆ. ನಾಳೆಗೆ ಮತ್ತೆ ಹೊಸತಾಗಿ ತಯಾರಿಸಬೇಕು. ಔಷಧಿ ಸಿಂಪಡಿಸಿದ ಮೇಲೆಯೂ ಒಂದೆರಡು ಗಂಟೆ ಮಳೆ ಬರಬಾರದು. ಬಂದರೆ ಬಿಟ್ಟ ಔಷಧಿಯೆಲ್ಲ ತೊಳೆದು ಹೋಗುತ್ತದೆ. ಮಳೆ ಬಿಟ್ಟು ಸಿಗುವ ಹೊತ್ತನ್ನು ರೈತರು ಕಾಯಬೇಕು. ಔಷಧಿ ಸಿಂಪಡಣೆ ಒಬ್ಬನಿಂದ ಆಗುವ ಕೆಲಸ ಅಲ್ಲ. ಪಂಪ್‌ನಿಂದ ಗಾಳಿ ಹಾಕಲು ಒಬ್ಬ, ಡ್ರಮ್‌ನಲ್ಲಿ ಮಾಡಿಟ್ಟ ಮದ್ದು ಹೊರಲು ಇನ್ನೊಬ್ಬ, ಮರ ಏರಿ ಔಷಧಿ ಬಿಡಲು ಮತ್ತೂಬ್ಬ ಬೇಕಾಗುತ್ತದೆ. ಮರ ಏರಲು ಎಲ್ಲರಿಗೂ ಆಗುವುದಿಲ್ಲ. ಮರ ಹತ್ತುವವನು ಅದರಲ್ಲಿ ವಿಶೇಷ ಪರಿಣತಿ ಪಡೆದಿರಬೇಕು. ಸಾಮಾನ್ಯವಾಗಿ ಅವನು ಆ ಕೆಲಸ ಮಾತ್ರ ಮಾಡುತ್ತಾನೆ. ಅವನಿಗೆ ಸಂಬಳವೂ ಸಾವಿರಕ್ಕಿಂತ ಮೇಲೆ ಇರುತ್ತದೆ.
Advertisement
ಎಡೆಬಿಡದೆ ಮಳೆ ಸುರಿದರೆ ಅಡಿಕೆ ಬೆಳೆಗಾರರ ಪರಿಸ್ಥಿತಿ ಶೋಚನೀಯ. ನಮ್ಮದೇ ಉದಾಹರಣೆ ತೆಗೆದುಕೊಂಡರೆ ನಾವು ಅಡಿಕೆ ತೋಟಕ್ಕೆ ಮದ್ದು ಬಿಡಲು ಹೊರಡುವುದು ತಿಂಗಳ ಮೇಲಾಯಿತು. ಮಳೆ ಬಿಡುವುದೇ ಇಲ್ಲ. ಕೊಳೆರೋಗ ಬಂದು ಎಳೆಅಡಿಕೆ ಹರಡಿದಂತೆ ಬಿದ್ದಿದೆ. ಮರ ಬೋಳಾಗಿದೆ. ಗಂಡ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. “ಹೀಗಾದರೆ ಮುಂದೆ ತೋಟದ ಕೆಲಸ ಹೇಗೆ ಮಾಡಿಸುವುದು? ಕೂಲಿಯವರಿಗೆ ಸಂಬಳ ಎಲ್ಲಿಂದ ಕೊಡು ವುದು?’ ಎಂದು ಕೇಳುತ್ತಾರೆ. ಮೊನ್ನೆ ಸ್ವಲ್ಪ ಮಳೆ ಬಿಟ್ಟಿತ್ತು. ಔಷಧಿ ಸಿಂಪಡಣೆ ಮಾಡುವವನು ಬಂದ. ಒಂದು ಕೊಡ ಮದ್ದು ಮುಗಿದಿದೆಯೋ ಇಲ್ಲವೋ ಕತ್ತಲು ಕಟ್ಟಿ ಮಳೆ ಬರಲು ಶುರುವಾಯ್ತು. “ಇನ್ನು ಇದು ಇಂದು ಆಗುವ ಕೆಲಸವಲ್ಲ. ನಾಳೆ ಬರುತ್ತೇನೆ. ನನಗೆ ಅರ್ಜೆಂಟ್ 2000 ರೂಪಾಯಿ ಬೇಕಿತ್ತು’ ಎಂದ. ಕೊಡದಿದ್ದರೆ ನಾಳೆ ಅವನು ಬರಬೇಕಲ್ಲ ಎಂದು ಕೊಟ್ಟೆವು. ಮಾಡಿದ ಒಂದು ಡ್ರಮ್ ಮದ್ದು ನೀರಲ್ಲಿ ಇಟ್ಟ ಹೋಮದ ಹಾಗೆ ಆಯಿತು. ಸಾಲದ್ದಕ್ಕೆ ದುಡ್ಡು ಪಡಕೊಂಡು ಹೋದವನು ತಿರುಗಿ ಬರಲಿಲ್ಲ. ಕೇಳಿದರೆ ತಲೆನೋವು, ಹೆಂಡತಿಗೆ ಹುಷಾರಿಲ್ಲ, ಪೇಟೆಯಲ್ಲಿ ಕೆಲಸ- ಹೀಗೆ ದಿನಕ್ಕೊಂದು ಕಾರಣ. ಮಳೆಯ ಕಾರಣ ಹೇಗೂ ಇದ್ದೇ ಇದೆಯಲ್ಲ. ಅಂತೂ ಈ ವರ್ಷ ನಮಗೆ ಇಂದಿನವರೆಗೆ ಔಷಧಿ ಬಿಡಲು ಸಾಧ್ಯವಾಗಿಲ್ಲ. ಇದು ಎಲ್ಲ ಅಡಿಕೆ ಕೃಷಿಕರ ವ್ಯಥೆ.
Related Articles
Advertisement
ಮಳೆ ಮತ್ತೆ ಹೊಯ್ಯುತ್ತಿದೆ. ಒಂದರ ಹಿಂದೆ ಇನ್ನೊಂದು. ಇನ್ನೊಂದರ ಹಿಂದೆ ಮಗದೊಂದು. ಮಳೆ ತನ್ನೊಳಗೆ ತಾನು ಯಾರು ಹೆಚ್ಚು ಸುರಿಯು ವುದು ಎಂದು ಸ್ಪರ್ಧೆ ಏರ್ಪಡಿಸಿದಂತೆ ತೋರುತ್ತದೆ. ಟೀವಿ ಸೀರಿಯಲ್‌ನಂತೆ ಸದ್ಯ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಲೋಕವನ್ನು ಪೊರೆಯ ಬೇಕಾದ ಮಳೆ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ. ಇದು ಮಳೆಯಲ್ಲ. ಜಲಪ್ರಳಯ. “ಮುನಿಸು ತರವೆ ಮಳೆಯೆ, ಹಿತವಾಗಿ ಸುರಿಯಲು ಬಾರದೇ?’ ಎಂದು ಮಳೆದೇವಗೆ ಈ ಹೊತ್ತಿನಲ್ಲಿ ಪ್ರಾರ್ಥನೆ ಮಾಡುವುದಲ್ಲದೆ ನಮಗೆ ಬೇರೆ ದಾರಿ ಉಳಿದಿಲ್ಲ.
ಸಹನಾ ಕಾಂತಬೈಲು