ನವದೆಹಲಿ/ಪೇಶಾವರ: ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದಬ್ಟಾಳಿಕೆ ಮುಂದುವರಿದಿದೆ. ಅದಕ್ಕೊಂದು ನಿದರ್ಶನ ಎನ್ನುವಂತೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕರಾಕ್ ಜಿಲ್ಲೆಯ ತೆರಿಗ್ರಾಮದಲ್ಲಿ ದೇಗುಲವೊಂದನ್ನು ಧ್ವಂಸಗೊಳಿಸಿ ಬೆಂಕಿಹಚ್ಚಿದ್ದಾರೆ. ಅದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹಲವಾರು ಮಂದಿ ದೇಗುಲವನ್ನು ಏರಿ, ಅದರ ಚಾವಣಿ ಮತ್ತು ಗೋಡೆಯನ್ನು ಒಡೆದು ಹಾಕಿದ್ದಾರೆ. ಅವರ ಕುಕೃತ್ಯದಿಂದ ಉಂಟಾಗಿರುವ ಧೂಳು ಢಾಳೆಂದು ಫೋಟೋ, ವಿಡಿಯೋದಲ್ಲಿ ಎದ್ದು ಕಾಣು ತ್ತಿದೆ. ಪಾಕಿಸ್ತಾನ ಮೂಲದ ಪತ್ರಕರ್ತ ಮುಬಾಶಿರ್ ಝೈದಿ ಟ್ವೀಟ್ ಮಾಡಿ, ದೇಗುಲವನ್ನು ವಿಸ್ತರಿಸುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಪರವಾನಗಿ ಪಡೆದುಕೊಂಡಿದ್ದರೂ, ಧಾರ್ಮಿಕ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಕರಾಕ್ ಜಿಲ್ಲೆಯಲ್ಲಿ ಹಿಂದು ದೇಗುಲ ಧ್ವಂಸಗೊಳಿಸಿದ ಘಟನೆ ಬಗ್ಗೆ ಮಾನವ ಹಕ್ಕು ಕಾರ್ಯಕರ್ತರು ಮತ್ತು ಪಾಕ್ ನ ಮಾನವಹಕ್ಕು ಸಚಿವ ಶಿರೀನ್ ಮಝಾರಿ ಖಂಡಿಸಿದ್ದಾರೆ. ದೇಗುಲ ಒಡೆದು ಹಾಕುವ ಕೃತ್ಯದಲ್ಲಿ ಶಾಮೀಲಾದವರನ್ನು ಬಂಧಿಸಬೇಕೆಂದು ಮಝಾರಿ ಆಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಗುಜರಾತ್ ಮಾದರಿಯಲ್ಲಿ ವಿದ್ಯುತ್ ಉತ್ಪಾದಿಸುವಂತೆ ಸಿಎಂ ಗೆ ಮನವಿ ಮಾಡಿದ ಅನಿರುದ್ಧ
ಅಕ್ಟೋಬರ್‌ನಲ್ಲಿ ಸಿಂಧ್ ಪ್ರಾಂತ್ಯದಲ್ಲಿ ದೇಗುಲವೊಂದನ್ನು ಧ್ವಂಸಗೊಳಿಸಲಾಗಿತ್ತು. ಈ ಬಗ್ಗೆ ದೂರು ಕೂಡ ದಾಖಲಾಗಿತ್ತು. ಕುತೂಹಲಕಾರಿ ವಿಚಾರವೆಂದರೆ, ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನ ಹೊರವಲಯದಲ್ಲಿ ಶ್ರೀಕೃಷ್ಣ ದೇಗುಲ ನಿರ್ಮಿಸಲು ಧಾರ್ಮಿಕ ಸಮಿತಿಯೊಂದು ಇತ್ತೀಚೆಗೆ ಅನುಮತಿ ನೀಡಿತ್ತು.