ಹೇಳಿದ ಟೈಮ್‌ಗೆ ಸರಿಯಾಗಿ ಕಾಲ್ ಮಾಡ್ಲಿಲ್ಲ ಅಂತ ಗಂಗೆಯನ್ನೂ, ತುಂಗೆಯನ್ನೂ ತಪಸ್ಸಿಲ್ಲದೆ ಭೂಮಿಗೆ ಕರೆಸಿ, ಮಹಾ ಸಾಧ್ವಿಯಂತೆ ನಿಂತಿದ್ದೆ ನೀನು. ಅದೇ ಸಮಯಕ್ಕೆ ಕಾಲ್ ಮಾಡಿದ ನಾನು, ಗುಡುಗು, ಮಿಂಚು, ಜ್ವಾಲಾಮುಖೀಯನ್ನು ಒಟ್ಟೊಟ್ಟಿಗೇ ಕಂಡುಬಿಟ್ಟೆ…
ಒಲವಿನ ಹಾದಿಯ ಎಡಬಲದಲ್ಲಿ ನೀನು ನೆಟ್ಟ ಸಸಿಗಳೆಲ್ಲಾ, ಯಾವಾಗ ಚಿಗುರುತ್ತವೋ, ಎಂಥ ಹೂ ಬಿಡುತ್ತವೋ ಅಂತ ಚಾತಕ ಪಕ್ಷಿಯಂತೆ ಕಾಯುತ್ತಿರುವವ ನಾನು. ಒಮ್ಮೆ ಅದ್ಯಾವುದೋ ಚಿಕ್ಕ ಕೂದಲೆಳೆಯ ಕಾರಣಕ್ಕೆ ಬರೋಬ್ಬರಿ ಹದಿನೈದು ದಿನ ಮಾತು ಬಿಟ್ಟು, ಮೌನ ತಳೆದಿದ್ದ ದೇವಿ ನೀನು. ಆದರೂ ಬೆಂಬಿಡದೆ ನಿನ್ನ ಸುತ್ತ ಗಾಳಿಯಂತೆ ಸುಳಿದಾಡಿದವನು ನಾನು. ‘ಇದು ಚಿಕ್ಕ ವಿಷಯ. ಕೋಪ ಯಾಕೆ?’ ಅಂತ ನಿನಗೇ ಅನ್ನಿಸಿದ್ದು ನಿಜ ತಾನೇ? ಗಾಳಿಯಂತೆ ಸುಳಿದಾಡ್ತಿದ್ದ ನನ್ನನ್ನು ಉಸಿರಾಟದ ಮೂಲಕ ಒಳಗೆಳೆದುಕೊಂಡು ನಿನ್ನ ಹೃದಯದಲ್ಲೂ, ಶ್ವಾಸದಲ್ಲೂ ಕೂಡಿಹಾಕಿಕೊಳ್ಳುವ ಕಾತರತೆ ನಿನಗಿದ್ದುದನ್ನೂ ನಾ ಬಲ್ಲೆ.
ಅವತ್ತು ದವನದ ಎಳೆಯಂತೆ ಘಮ ಘಮಿಸುವ ನಿನ್ನ ಮುಂಗುರುಳನ್ನು, ಬಳ್ಳಿಯಂತೆ ಗಾಳಿಯಲ್ಲಿ ತೇಲಿಸಿ ನನ್ನ ನೆರಳಿನ ಮೂತಿಗೆ ತಿವಿದು ಎದ್ದು ಹೋಗಿಬಿಟ್ಟೆ. ಅಂದು ಹೋದವಳು ಮತ್ತೆ ಯಾವ ಸುಳಿವನ್ನೂ ನೀಡದೆ, ಒಂದು ಮಾತು ಸಹ ಹೇಳದೆ ನನ್ನ ಮನದ ಚಪ್ಪರದೊಳಕ್ಕೆ ವಾಪಸ್ ಬಂದು ಕುಳಿತಾಗ ಆದ ಸಂಭ್ರಮಕ್ಕೆ ಪಾರವಿಲ್ಲ. ನಿನ್ನನ್ನು ಯಾವ ಹೂವಿನಿಂದ ಪೂಜಿಸಲಿ? ಯಾವ ಮಂತ್ರವ ಪಠಿಸಲಿ ಅಂತ ತಿಳಿಯದೆ ಕ್ಷಣಕಾಲ ಸುಮ್ಮನೆ ಕುಳಿತುಬಿಟ್ಟೆ. ಆದರೂ, ಪ್ರೀತಿಯನ್ನು ಮರೆಯಲ್ಲಿಟ್ಟು, ಹದಿನೈದು ದಿನ ಮಾತುಬಿಟ್ಟು ಆ್ಯಂಗ್ರಿ ಬರ್ಡ್ ಥರ ಆಡಿದೆಯಲ್ಲ, ಗ್ರೇಟ್!
ಅವತ್ತು ನನ್ನಿಂದಾದ ತಪ್ಪಾದರೂ ಏನು? ಹೇಳಿದ ಟೈಮ್‌ಗೆ ಸರಿಯಾಗಿ ಕಾಲ್ ಮಾಡ್ಲಿಲ್ಲ ಅಂತ ಗಂಗೆಯನ್ನೂ, ತುಂಗೆಯನ್ನೂ ತಪಸ್ಸಿಲ್ಲದೆ ಭೂಮಿಗೆ ಕರೆಸಿ, ಮಹಾ ಸಾಧ್ವಿಯಂತೆ ನಿಂತಿದ್ದೆ ನೀನು. ಅದೇ ಸಮಯಕ್ಕೆ ಕಾಲ್ ಮಾಡಿದ ನಾನು, ಗುಡುಗು, ಮಿಂಚು, ಜ್ವಾಲಾಮುಖೀಯನ್ನು ಒಟ್ಟೊಟ್ಟಿಗೇ ಕಂಡುಬಿಟ್ಟೆ. ಆ ತಪ್ಪಿಗೆ ಹದಿನೈದು ಉಪವಾಸ ಕೆಡವಿದ್ದು ನನಗಿನ್ನೂ ನೆನಪಿದೆ.
ಈಗಲೂ ಅಂಥದ್ದೇ ತಪ್ಪೊಂದು ಘಟಿಸಿಬಿಟ್ಟಿದೆ. ನಿನ್ನೆ ಸಂಜೆ ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿದ್ದುದನ್ನು ನಾನು ಗಮನಿಸಿಯೇ ಇರಲಿಲ್ಲ. ಎಂದಿನಂತೆ ನಿನ್ನ ಕರೆ ಬರದೇ ಇದ್ದಾಗಲೇ ನಾನು ಕಿಸೆಯಿಂದ ಮೊಬೈಲು ತೆಗೆದು ನೋಡಿದ್ದು. ಆ ಕ್ಷಣದಲ್ಲಿ ನನಗೆ, ಲೈಟಾಗಿ ಹಾರ್ಟ್ ಅಟ್ಯಾಕ್ ಆಗಿದ್ದು ಸುಳ್ಳಲ್ಲ. ನಿನ್ನಿಂದ ಬಂದ ನಾಲ್ಕು ಮಿಸ್ಡ್ ಕಾಲ್ಗಳು ಅಪಾಯದ ಮುನ್ಸೂಚನೆ ನೀಡುತ್ತಿದ್ದವು. ತಕ್ಷಣ ನಿನಗೆ ವಾಪಸ್ ಕರೆ ಮಾಡಿದೆ. ನೀನು ಮಾತಾಡಲು ರೆಡಿ ಇರಲಿಲ್ಲ.
ಮತ್ತೆ ಮತ್ತೆ ಕಾಲ್ ಮಾಡಿದ್ದಕ್ಕೆ, ಸ್ವಿಚ್ ಆಫ್ ಮಾಡಿ ಸೇಡು ತೀರಿಸಿಕೊಳ್ಳುತ್ತಿದ್ದೀಯ. ಲೇಟಾಗಿ ಕಾಲ್ ಮಾಡಿದ್ದಕ್ಕೇ ಹದಿನೈದು ದಿನ ಶಿಕ್ಷೆ ಕೊಟ್ಟಿದ್ದೆ. ಇನ್ನು ಈ ಘನಘೋರ ತಪ್ಪಿಗೆ ಯಾವ ಶಿಕ್ಷೆ ಕೊಡಬೇಕೆಂದು ನಿನ್ನ ಕಾನೂನು ಹೇಳುತ್ತಿದೆ? ದಯಮಾಡಿ, ಈ ಬಡಪಾಯಿಯ ತಪ್ಪನ್ನು ಮನ್ನಿಸು. ಆ್ಯಂಗ್ರಿ ಬರ್ಡ್, ಪ್ಲೀಸ್ ಸಿಟ್ಟು ಮಾಡಿಕೊಳ್ಳದೆ ಇದೊಂದು ಸಲ ನನ್ನನ್ನು ಕ್ಷಮಿಸು…
ಕ್ಷಮಾದಾನದ ನಿರೀಕ್ಷೆಯಲ್ಲಿರುವ
•ಶರಣ್ ಬೂದಿಹಾಳ್