Advertisement

ತಾಳ್ಮೆ , ಶಿಸ್ತು ಮರೆತರೆ ಅಶಿಸ್ತು ಹೆಚ್ಚಳ

11:48 PM Jan 14, 2021 | Team Udayavani |

 

Advertisement

ಆರು ಬಾರಿ ಶಾಸಕರಾಗಿ ಸಂಪುಟದಲ್ಲಿ ಸ್ಥಾನ ಸಿಗದಿದ್ದರೂ ತಾಳ್ಮೆಯಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತ ರಾಗಿ ಕೆಲಸ ಮಾಡಿದ್ದ ಎಸ್‌. ಅಂಗಾರ ಅವರು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭ ತಮ್ಮ ಕನಸು, ಕರಾವಳಿ ಅಭಿವೃದ್ಧಿಗೆ ಯೋಜನೆಗಳು, ಪಕ್ಷ ಹಾಗೂ ನಾಯಕತ್ವದ ವಿರುದ್ಧ ಮಾತನಾಡುವವರಿಗೆ ತಾಳ್ಮೆಯ ಬಗ್ಗೆ  ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.

ನಿಮ್ಮ ತಾಳ್ಮೆಗೆ ಬೆಲೆ ಸಿಕ್ಕಿದೆ  ಅನಿಸುತ್ತಿದೆಯಾ? :

ತಾಳ್ಮೆ ಅಂತ ಪ್ರಶ್ನೆ ಅಲ್ಲ. ಜೀವನದಲ್ಲಿ ಒಂದಷ್ಟು ಗುಣಗಳನ್ನು  ನಾವಾ ಗಿಯೇ ಬೆಳೆಸಿಕೊಂಡಾಗ ನಮ್ಮ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. ಆ ರೀತಿ ನಡೆದುಕೊಳ್ಳುವುದು ನಮ್ಮ ಧರ್ಮ. ಅಂತೆಯೇ ನಾನು ನಡೆದುಕೊಂಡು ಬಂದಿದ್ದೇನೆ. ಪಕ್ಷದ ಸಂಘಟನೆ, ರಾಜ್ಯ, ರಾಷ್ಟ್ರೀಯ ಅಧ್ಯಕ್ಷರು ಎಲ್ಲರೂ ಸಹಕಾರ ನೀಡಿದ್ದಾರೆ. ಈಗ ಸಂತೋಷವಾಗಿದೆ.

 

Advertisement

ವಲಸಿಗರಿಂದ ಅಶಿಸ್ತು ಹೆಚ್ಚಾಗುತ್ತಿದೆಯಾ? :

ಸಂಘಟನೆ ಅಂದ ಮೇಲೆ ಒಬ್ಬರಿಂದ ಕಟ್ಟಲು ಆಗುವುದಿಲ್ಲ. ಹೆಚ್ಚು ಜನರು ಬಂದಾಗ ಸಂಘಟನೆ ಬಲಗೊಳ್ಳುತ್ತದೆ. ಬಂದವರು ಸಂಘಟನೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ನಿಂದ ಬಂದವರು ಪಕ್ಷದ ಸಿದ್ಧಾಂತ ಅರ್ಥ ಮಾಡಿಕೊಂಡು ಅಧಿಕಾರ ಮಾಡಿದ್ದಾರೆ.

ಕರಾವಳಿ ಅಭಿವೃದ್ಧಿಗೆ ಏನಾದರೂ ಯೋಜನೆ? :

ಕರಾವಳಿ ಅಭಿವೃದ್ಧಿ ಕುರಿತು ಹಿರಿಯರ ಜತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸುವೆ. ನನಗೆ ಸ್ವಲ್ಪ ಮಾಹಿತಿ ಕೊರತೆಯಿದೆ.

 

 ಅತೃಪ್ತರಿಗೆ ತಾಳ್ಮೆ ವಹಿಸುವಂತೆ ಹೇಳುತ್ತೀರಾ? :

ನಮ್ಮ ಸಂಘಟನೆಯಲ್ಲಿ ಕೆಲಸ ಮಾಡಿದವರು ಲಕ್ಷಾಂತರ ಜನರಿದ್ದಾರೆ. ಅವರಲ್ಲಿ ಕೆಲವರಿಗೆ ಮಾತ್ರ ಸ್ಥಾನಮಾನ ಸಿಕ್ಕಿದೆ. ಇತಿಹಾಸವನ್ನು ನೋಡಿದರೂ,  ಸಂಘಟನೆಗಾಗಿ ತ್ಯಾಗ ಬಲಿದಾನ ಮಾಡಿದವರಿಗೆ ಅಧಿಕಾರ ಸಿಗದಿರುವುದು ಕಂಡು ಬರುತ್ತದೆ. ನಮಗೆ ಅಧಿಕಾರ ಸಿಕ್ಕಿದೆ. ನಾವು ಪಕ್ಷದ ಸಂಘಟನೆ, ತ್ಯಾಗದ ಬಗ್ಗೆ ತಿಳಿದುಕೊಂಡು ಮಾತನಾಡಬೇಕು.

 ಪಕ್ಷ ನಿಷ್ಠರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಆರೋಪದ ಬಗ್ಗೆ? :

ನಾನು ಆರು ಬಾರಿ ಶಾಸಕನಾಗಿ ದ್ದೇನೆ. ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಹಾಗೆಂದು ಸಂಘಟನೆಗೆ ಮುಜುಗರ ಉಂಟು ಮಾಡಬಾರದು. ಸಾಮಾನ್ಯ ಜನರು ಆ ರೀತಿಯ ಬೇಡಿಕೆ ಇಡುವುದು ಸಾಮಾನ್ಯ. ಆದರೆ ಜವಾಬ್ದಾರಿ ಇರುವವರು ಹಾಗಾಗದಂತೆ ನಡೆದುಕೊಳ್ಳಬೇಕು.

ಕರಾವಳಿಗೆ ಅನ್ಯಾಯ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಕರಾವಳಿಗೆ ನ್ಯಾಯ ಸಿಕ್ಕಂತಾಯಿತಾ? :

ಕರಾವಳಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲ ಎಂಬ ಕೂಗು ಇತ್ತು. ಈಗ ಅಲ್ಲಿಗೂ ಅವಕಾಶ ಸಿಕ್ಕಿದೆ.

 ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಏನಾದರೂ ಯೋಜನೆ ಹಾಕಿಕೊಂಡಿದ್ದೀರಾ ? :

ಖಂಡಿತವಾಗಿಯೂ. ನನಗೆ ಯಾವ ಖಾತೆ ನೀಡುತ್ತಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಅದನ್ನು ನೋಡಿಕೊಂಡು ಹಿರಿಯರ ಸಲಹೆ ಪಡೆದು ಯೋಜನೆ ರೂಪಿಸುವೆ.

ಯಾವ ಖಾತೆ ನೀಡಿದರೆ ಹೆಚ್ಚು ಅನುಕೂಲ? :

ನನ್ನ ಕ್ಷೇತ್ರ ಕರಾವಳಿ ಭಾಗದಲ್ಲಿದ್ದರೂ ಗುಡ್ಡಗಾಡು ಪ್ರದೇಶ. ಅಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಬಗ್ಗೆ ಆತಂಕ ಹೆಚ್ಚುತ್ತಿದೆ. ಆ ರೀತಿಯ ಕೆಲಸ ಮಾಡಲು ಸಣ್ಣ ನೀರಾವರಿ ಇಲಾಖೆಯಿದೆ. ಅಂತಹ ಇಲಾಖೆ ನೀಡಬೇಕೆಂಬುದು ನನ್ನ  ಅನಿಸಿಕೆ. ಆದರೆ ಅದೇ ಖಾತೆ ಕೊಡಬೇಕೆಂಬ ಒತ್ತಡವಿಲ್ಲ.

ಕರಾವಳಿಯಲ್ಲಿ ಕುಮ್ಕಿ ಜಮೀನು ಸಮಸ್ಯೆ ಹಾಗೂ ಪ್ರತ್ಯೇಕ ಮರಳು ನೀತಿ ಬೇಡಿಕೆ ಇದೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ? :

ಈ ಕುರಿತು ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯ ಶಾಸಕರ ಸಭೆ ಕರೆದು ಕಂದಾಯ ಸಚಿವರಿಗೆ ಸೂಚನೆ ನೀಡಿದ್ದಾರೆ. ಗೊಂದಲ ಪರಿಹರಿಸಲು ಸಂಪುಟಕ್ಕೆ ಪ್ರಸ್ತಾವನೆ ತರುವಂತೆ ಸೂಚಿಸಿದ್ದಾರೆ. ಆದಷ್ಟು ಬೇಗ ಇತ್ಯರ್ಥಕ್ಕೆ ಪ್ರಯತ್ನಿಸುವೆ. ಪ್ರತ್ಯೇಕ ಮರಳು ನೀತಿ ಜಾರಿ ಮಾಡುವ ಬಗ್ಗೆಯೂ ಜಿಲ್ಲಾ ಮುಖಂಡರ ಜತೆ ಸಭೆ ಆಗಿದೆ. ಆದಷ್ಟು ಬೇಗ ಪರಿಹಾರ ದೊರೆಯಲಿದೆ.

ಈಗ ಶಿಸ್ತು ಕಡಿಮೆಯಾಗಿದೆ ಅನಿಸುತ್ತಿದೆಯಾ? :

ಹೌದು. ನಾವು 1989ರಲ್ಲಿ ಪಕ್ಷ ಸಂಘಟನೆ ಮಾಡುವಾಗ ಎಲ್ಲೂ ಗೊಂದಲವಿರಲಿಲ್ಲ. ಈಗ ಅಧಿಕಾರ ಬಂದಿದೆ, ಗೊಂದಲಗಳು ಹೆಚ್ಚಾಗಿವೆ.  ಸರಿಪಡಿಸಿಕೊಳ್ಳುತ್ತೇವೆ.

ಬಿಜೆಪಿಯ ಹಿಂದುತ್ವದ ಅಜೆಂಡಾದಲ್ಲಿ ಈಗ ಬದಲಾವಣೆಗಳಾಗಿವೆಯಾ? :

ಪಕ್ಷದ ಆಡಳಿತದಲ್ಲಿ ಬದಲಾವಣೆಗಳಾಗುತ್ತಿವೆ ಬಿಟ್ಟರೆ, ಹಿಂದುತ್ವದ ವಿಚಾರದಲ್ಲಿ  ಬದಲಾವಣೆ ಆಗಿಲ್ಲ.

ಪಕ್ಷ ಹಾಗೂ ನಾಯಕತ್ವದ ಬಗ್ಗೆ ಮಾತನಾಡು ವವರಿಗೆ ಏನು ಹೇಳುತ್ತೀರಿ? :

ನಾವೇ ಅರ್ಥ ಮಾಡಿಕೊಂಡು ಇರಬೇಕು. ಪಕ್ಷ ಹಾಗೂ ಕಾರ್ಯಕರ್ತರಿಗೆ ಮುಜುಗರ ಆಗುವಂಥದ್ದನ್ನು  ಮಾಡ ಬಾರದು. ನಾನು ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ.

 

-ಶಂಕರ ಪಾಗೋಜಿ

 

Advertisement

Udayavani is now on Telegram. Click here to join our channel and stay updated with the latest news.

Next