Advertisement

‘ಡಿಕೆಶಿ ಸುಳ್ಯಕ್ಕೆ ಬಂದು ನನಗೆ ಸರ್ಟಿಫಿಕೇಟ್‌ ನೀಡಬೇಕಿಲ್ಲ’

08:35 AM May 04, 2018 | Karthik A |

ಆಲಂಕಾರು: ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಬುಧವಾರ ಸುಳ್ಯದಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ‘ನಾನು ಕ್ಷೇತ್ರದ ಶಾಸಕರ ಮುಖವನ್ನೇ ನೋಡಿಲ್ಲ’ ಎನ್ನುವ ಮೂಲಕ ದುರಹಂಕಾರದ ಮಾತನಾಡಿ ನನ್ನನ್ನು ಅವಮಾನ ಮಾಡಿದ್ದಾರೆ. ಇದು ಅವರು ಕ್ಷೇತ್ರ ಜನತೆಗೆ ಮಾಡಿದ ಅವಮಾನ ಎಂದು ಸುಳ್ಯ ಶಾಸಕ ಎಸ್‌. ಅಂಗಾರ ಅಕ್ರೋಶ ವ್ಯಕ್ತಪಡಿಸಿದರು.

Advertisement

ಅವರು ಗುರುವಾರ ಸಂಜೆ ಆಲಂಕಾರಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 25 ವರ್ಷಗಳಿಂದ ಕ್ಷೇತ್ರ ಶಾಸಕನಾಗಿ ಇಲ್ಲಿನ ಜನರ ವಿಶ್ವಾಸವನ್ನು ಗಳಿಸಿರುವ ನಾನು ಒಬ್ಬ ಹಿಂದುಳಿದ ಸಮುದಾಯದ ನಾಯಕ ಎನ್ನುವ ತಾತ್ಸಾರ ಭಾವನೆಯಲ್ಲಿ ಹಾಗೂ ಅಧಿಕಾರದ ಮದದಿಂದ ಸಚಿವರು ನಾನು ಶಾಸಕರ ಮುಖವೇ ನೋಡಿಲ್ಲ ಎಂದು ಹೇಳಿಕೆ ನೀಡಿ, ಅವಮಾನ ಮಾಡಿದ್ದಾರೆ. ಇದು ಅವರ ಘನತೆಗೆ ತಕ್ಕುದಾದ ಮಾತಲ್ಲ. ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಅವರು ದೊಡ್ಡವರು
ಡಿ.ಕೆ. ಶಿವಕುಮಾರ್‌ ಅವರ ಬಗ್ಗೆ ನಾನು ವೈಯಕ್ತಿವಾಗಿ ಟೀಕೆ ಮಾಡುವುದಿಲ್ಲ. ನನ್ನ ಗುಣ ನಡತೆ ಹಾಗೂ ಡಿಕೆಶಿಯವರ ಗುಣ ನಡತೆಗೆ ಅಜಗಜಾಂತರವಿದೆ. ಅವರು ದೊಡ್ಡವರು, ನಾನು ಚಿಕ್ಕವನು. ನಾನು ಸಚಿವರು ಹೋದಲ್ಲೆಲ್ಲ ಹೋಗುವುದಕ್ಕೆ ಆಗುವುದಿಲ್ಲ. ಅವರು ಎಲ್ಲೆಲ್ಲಿ ಹೋಗುತ್ತಾರೆ ಎನ್ನುವುದು ನನಗೂ ಗೊತ್ತಿಲ್ಲ. ದಿನಾ ಅವರ ಮುಖ ನೋಡಿಕೊಂಡು ಕುಳಿತುಕೊಳ್ಳುವ ಆವಶ್ಯಕತೆಯೂ ನನಗಿಲ್ಲ. ಹಾಗಾಗಿ ಅವರೊಟ್ಟಿಗೆ ನನ್ನ ತುಲನೆ ಮಾಡುವುದು ಸಮಂಜಸವಲ್ಲ, ನನ್ನ ಕ್ಷೇತ್ರದ ಜನತೆ ನನ್ನನ್ನು ಗುರುತಿಸುತ್ತಾರೆ ಹೊರತು, ಡಿಕೆಶಿ ನೋಡುವ ಆವಶ್ಯಕತೆಯಿಲ್ಲ. ನಾನು ಕಳೆದ 25 ವರ್ಷಗಳಿಂದ ಪ್ರಚಾರಕ್ಕಾಗಿ ಯಾವುದೇ ಕೆಲಸವನ್ನೂ ಮಾಡಿಲ್ಲ, ಕ್ಷೇತ್ರದ ಜನತೆಯ ವಿಶ್ವಾಸ ಹಾಗೂ ಅಭಿವೃದ್ಧಿಗೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ. ಎಂತಹ ಸಂದರ್ಭದಲ್ಲೂ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ದುರಹಂಕಾರದಿಂದ ಮೆರೆದಿಲ್ಲ, ಯಾರಿಗೂ ಅನ್ಯಾಯ ಮಾಡಿಲ್ಲ. ಕ್ಷೇತ್ರದ ಜನತೆ ನನ್ನ ಮೇಲೆ ನಿರಂತರ ವಿಶ್ವಾಸವಿಟ್ಟು ಗೆಲ್ಲಿಸುತ್ತಾ ಬರುತ್ತಿದ್ದಾರೆ, ಡಿಕೆಶಿಯವರು ಇಲ್ಲಿ ಬಂದು ನನ್ನ ಬಗ್ಗೆ ಸರ್ಟಿಫಿಕೇಟ್‌ ನೀಡುವ ಆವಶ್ಯಕತೆ ಇಲ್ಲ. ಇದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದರು.

ವಿದ್ಯುತ್‌ ಕೇಳಿದರೆ ಬಂಧನ
ಇಂಧನ ಸಚಿವರಿಗೆ ನನ್ನ ಕ್ಷೇತ್ರದ ಸಾಮಾನ್ಯ ವ್ಯಕ್ತಿಯೊಬ್ಬ ವಿದ್ಯುತ್‌ ಸಮಸ್ಯೆ ಬಗ್ಗೆ ದೂರವಾಣಿ ಕರೆ ಮಾಡಿದರೆ, ಆತನೊಂದಿಗೆ ಅನುಚಿತವಾಗಿ ವರ್ತಿಸಿ, ಬಲಾತ್ಕಾರದಿಂದ ಬಂಧಿಸಿ ಪ್ರಕರಣ ದಾಖಲಿಸುವ ಸಣ್ಣತನ ತೋರಿದ್ದಾರೆ. ವಿದ್ಯುತ್‌ ಕೇಳಿದರೆ ಬಂಧನ ಮಾಡಿಸುವ ಸಚಿವರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು. ನನ್ನ ಕ್ಷೇತ್ರದ ಜನತೆ ಬುದ್ಧಿವಂತರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಚಿವರ ಮಾತಿಗೆ ಇಲ್ಲಿ ಕಿಮ್ಮತ್ತು ದೊರೆಯುವುದಿಲ್ಲ ಎಂದು ಅಂಗಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್‌, ಬಿಜಪಿ ಜಿಲ್ಲಾ ಸಮಿತಿ ಸದಸ್ಯ ರಾಕೇಶ್‌ ರೈ ಕೆಡೆಂಜಿ, ಬೆಳಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಬಿಜೆಪಿ ಮುಖಂಡರಾದ ದಯಾನಂದ ಗೌಡ ಆಲಡ್ಕ, ಪೂವಪ್ಪ ನಾಯ್ಕ, ಪ್ರದೀಪ್‌ ಕುಮಾರ್‌ ರೈ, ಕೇಶವ ಗೌಡ ಆಲಡ್ಕ, ದಲಿತ ಮುಖಂಡರಾದ ಅಣ್ಣಿ ಎಲ್ತಿಮಾರ್‌, ಕೃಷ್ಣ ಗಾಣಂತಿ ಉಪಸ್ಥಿತರಿದ್ದರು.

Advertisement

ಮತ ಮಾರಿಕೊಳ್ಳಲ್ಲ
ಹಣ ಹೆಂಡ ಹಂಚಿ ಚುನಾವಣೆ ಗೆಲ್ಲಬಹುದು ಎಂದು ಕಾಂಗ್ರೆಸ್‌ನವರು ಲೆಕ್ಕಾಚಾರ ಹಾಕಿದ್ದರೆ, ಅದು ಸಾದ್ಯವಿಲ್ಲ. ಕ್ಷೇತ್ರದ ಮತದಾರರು ಪ್ರಜ್ಞಾವಂತರು ಹಾಗೂ ಬುದ್ಧಿವಂತರು. ಆಮಿಷಕ್ಕೆ ಒಳಗಾಗಿ ತಮ್ಮ ಮತವನ್ನು ಮಾರಿಕೊಳ್ಳುವಷ್ಟು ದಡ್ಡರು ಇಲ್ಲಿ ಇಲ್ಲ. ಕ್ಷೇತ್ರದದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಜನತೆ ನನ್ನನ್ನು ಮತ್ತೂಮ್ಮೆ ಆಯ್ಕೆ ಮಾಡುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ಬಿಜೆಪಿ ಪರ ಒಲವು ಹೆಚ್ಚಾಗಿದೆ. ಹೇಗಾದರೂ ಮಾಡಿ ಸುಳ್ಯ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕು ಎನ್ನುವ ಕಾಂಗ್ರೆಸ್‌ ಆಸೆ ಗಗನ ಕುಸುಮವಾಗಲಿದೆ. ಈ ಬಾರಿ ಕನಿಷ್ಠ 25 ಸಾವಿರ ಮತಗಳಿಂದ ಗೆಲವು ಸಾಧಿಸಲಿದ್ದೇನೆ ಎಂದು ಶಾಸಕ ಎಸ್‌. ಅಂಗಾರ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next