Advertisement
ಅಂಗನವಾಡಿಗಳಿಗೆ ಹವಾನಿಯಂತ್ರಕ ಅಳವಡಿಕೆ ಹಾಗೂ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣ ದ.ಕ. ಜಿಲ್ಲಾ ಪಂಚಾಯತ್ ಸಿಇಒ ಡಾ| ಎಂ.ಆರ್. ರವಿ ಅವರ ಪರಿಕಲ್ಪನೆ. ಖಾಸಗಿ ಸಂಸ್ಥೆಗಳ ನೆರವು ಪಡೆದುಕೊಂಡು ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್ ಸ್ಪರ್ಶ ನೀಡುವ ಕಾರ್ಯಯೋಜನೆ ಸಿದ್ಧಪಡಿಸಲಾಗಿದ್ದು ಅನುಷ್ಠಾನ ಪ್ರಕ್ರಿಯೆ ಆರಂಭಗೊಂಡಿದೆ.
ಪ್ರತಿಯೊಂದು ಅಂಗನವಾಡಿಗೂ 1 ಟನ್ ಸಾಮರ್ಥ್ಯದ ಹವಾನಿಯಂತ್ರಕ ಅಳವಡಿಸಲಾಗುತ್ತಿದೆ. ಇದಕ್ಕೆ ಸಾಧನ ಹಾಗೂ ಇತರ ಅಳವಡಿಕೆ ವೆಚ್ಚ ಸೇರಿ ತಲಾ 35,000 ರೂ. ವೆಚ್ಚ ಅಂದಾಜಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕೊಂದು ಸಿಎಸ್‌ಆರ್ ನಿಧಿಯಲ್ಲಿ ಇದನ್ನು ಭರಿಸಲು ಒಪ್ಪಿಗೆ ನೀಡಿದ್ದು ಸಾಧನಾ ವೆಚ್ಚವಾಗಿ ತಲಾ 32,500 ರೂ.ಗಳಂತೆ 3.25 ಲಕ್ಷ ರೂ. ನೀಡಲಿದೆ. ಉಳಿದ ಹಣವನ್ನು ಅಂಗನವಾಡಿ ವ್ಯಾಪ್ತಿಯಲ್ಲಿ ದಾನಿಗಳಿಂದ ಸಂಗ್ರಹಿಸುವ ಚಿಂತನೆ ನಡೆಸಲಾಗಿದೆ. ಇದೆ ರೀತಿಯಾಗಿ ಹವಾನಿಯಂತ್ರಣ ಅಳವಡಿಕೆಯಿಂದ ಬರುವ ಹೆಚ್ಚುವರಿ ವಿದ್ಯುತ್ ಬಿಲ್ಲನ್ನು ಸ್ಥಳೀಯ ದಾನಿಗಳಿಂದ ಸಂಗ್ರಹಿಸಲು ನಿರ್ಧರಿಸಲಾಗಿದೆ. ಮಾದರಿ ಅಂಗನವಾಡಿ
ಹೈಟೆಕ್ ಸ್ಪರ್ಶದ ಇನ್ನೊಂದು ಪ್ರಕ್ರಿಯೆ ಮಾದರಿ ಅಂಗನವಾಡಿಗಳ ನಿರ್ಮಾಣ. ಈ ಪರಿಕಲ್ಪನೆ ಕೂಡ ರಾಜ್ಯದಲ್ಲೇ ಪ್ರಥಮವಾಗಿದೆ. ದ.ಕ. ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಒಂದೊಂದು ಅಂಗನವಾಡಿಯನ್ನು ಆಯ್ಕೆ ಮಾಡಿ ಅದನ್ನು ಮಾದರಿಯಾಗಿ ರೂಪಿಸುವುದು. ಇದಕ್ಕಾಗಿ ತಲಾ 30 ಲಕ್ಷ ರೂ. ವೆಚ್ಚದಲ್ಲಿ 2.4 ಕೋ.ರೂ. ಮೊತ್ತದ ಅಂದಾಜು ಪಟ್ಟಿ ತಯಾರಿಸಲಾಗಿದ್ದು ಆದನ್ನು ಸಿಎಸ್‌ಆರ್ ನಿಧಿಯಲ್ಲಿ ಭರಿಸುವಂತೆ ಎಂಆರ್‌ಪಿಎಲ್‌ಗೆ ಕೋರಿಕೆ ಸಲ್ಲಿಸಲಾಗಿದ್ದು ಕಂಪೆನಿ ತಾತ್ವಿಕವಾಗಿ ಸಮ್ಮತಿಸಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಹೈಟೆಕ್ ಸ್ಪರ್ಶದ ಉದ್ದೇಶಬಡಮಕ್ಕಳಿಗೂ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಹೈಟೆಕ್ ಸ್ಪರ್ಶದ ಮೂಲ ಉದ್ದೇಶ. ಅಂಗನವಾಡಿಗಳಿಗೆ ಮಕ್ಕಳನ್ನು ಆಕರ್ಷಿಸಿ ಅಲ್ಲಿ ಅವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿ ಮುಂದಕ್ಕೆ ಸರಕಾರಿ ಶಾಲೆಗಳಿಗೆ ಮಕ್ಕಳು ಸೇರುವಂತೆ ಪೋಷಕರಿಗೆ ಪ್ರೇರೇಪಣೆ ನೀಡುವ ಅಂಶ ಒಳಗೊಂಡಿದೆ.
ಪ್ರಸ್ತುತ ದ.ಕ. ಜಿಲ್ಲೆಯಲ್ಲಿ 2,104 ಅಂಗನವಾಡಿಗಳಿದ್ದು 6 ತಿಂಗಳಿನಿಂದ 6 ವರ್ಷದೊಳಗಿನ 1.11 ಲಕ್ಷ ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಕೂಲ್ ಕೂಲ್ ಅಂಗನವಾಡಿಗಳು
ಹವಾನಿಯಂತ್ರಕ ಅಳವಡಿಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸ್ವಂತ ಆರ್‌ಸಿಸಿ ಕಟ್ಟಡ ಮತ್ತು 15ಕ್ಕಿಂತ ಜಾಸ್ತಿ ಮಕ್ಕಳು ಇರುವ ಹಾಗೂ ಕಾಂಪೌಂಡ್ ಹೊಂದಿರುವ ಅಂಗನವಾಡಿಗಳಿಗೆ ಆದ್ಯತೆ ನೀಡಲಾಗಿದೆ. ಮಂಗಳೂರು ತಾಲೂಕು ಕಟೀಲಿನ ಕೆಂಚಗುಡ್ಡೆ, ಸೋಮೇಶ್ವರದ ಕುಂಪಲ, ಬಜೆಪೆ ಗ್ರಾ.ಪಂ.ನ ಶಾಂತಿಗುಡ್ಡೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶಾಲೆ, ಪದವು ಶಕ್ತಿನಗರ, ಬೋಳೂರು, ಬೋಳಾರ ಉಳ್ಳಾಲ ನಗರ ಸಭೆಯ ಕೆರೆಬೈಲು, ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾ.ಪಂ.ನ ಶಂಭೂರು ಶಾಲೆಯ ಅಂಗನವಾಡಿ, ಬಂಟ್ವಾಳ ಪುರಸಭೆಯ ಗೋಳಿನೆಲೆ ಅಂಗನವಾಡಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಹಂತವಾಗಿ ಇತರ ತಾಲೂಕುಗಳ ಅಂಗನವಾಡಿಗಳನ್ನು ಆಯ್ಕೆ ಮಾಡಿಕೊಂಡು ಖಾಸಗಿಯವರ ನೆರವು ಪಡೆದುಕೊಂಡು ಈ ಸೌಲಭ್ಯ ಅಳವಡಿಸಲು ನಿರ್ಧರಿಸಲಾಗಿದೆ. ಮೇ 8ರಿಂದ 22ರ ವರೆಗೆ ಅಂಗನವಾಡಿ ಕೇಂದ್ರಗಳಿಗೆ ರಜೆ ಇದೆ. ಈ ಅವಧಿಯಲ್ಲಿ ಹವಾನಿಯಂತ್ರಣ ಅಳವಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಉಪನಿರ್ದೇಶಕ ಸುಂದರ ಪೂಜಾರಿ ತಿಳಿಸಿದ್ದಾರೆ. ಹೈಟೆಕ್ ಸ್ಪರ್ಶ ನೀಡಿ ಅಂಗನವಾಡಿಗಳತ್ತ ಮಕ್ಕಳನ್ನು ಆಕರ್ಷಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಖಾಸಗಿಯವರ ನೆರವು ಪಡೆದುಕೊಳ್ಳಲಾಗುತ್ತಿದೆ. ಖಾಸಗಿ ಪ್ರಿಸ್ಕೂಲ್‌ನಲ್ಲಿ ಸಿಗುವ ಸೌಲಭ್ಯಗಳು ಅಂಗನವಾಡಿಯ ಮಕ್ಕಳಿಗೂ ಸಿಗಬೇಕು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವೃದ್ಧಿಗೆ ಇದು ಸಹಕಾರಿಯಾಗಬೇಕು ಎಂಬುದು ಇದರ ಹಿಂದಿರುವ ಆಶಯ. – ಡಾ| ಎಂ.ಆರ್. ರವಿ ಸಿಇಒ, ದ.ಕ. ಜಿ.ಪಂ.