Advertisement

ಅಂಗನವಾಡಿ ನೌಕರರ ಧರಣಿ, ಸದನದಲ್ಲೂ ಪ್ರತಿಧ್ವನಿ

10:14 AM Mar 22, 2017 | Team Udayavani |

ವಿಧಾನ ಮಂಡಲ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನಡೆಸುತ್ತಿರುವ ಅಹೋರಾತ್ರಿ ಧರಣಿ ಮತ್ತು ಪ್ರತಿಭಟನೆ ಉಭಯ ಸದನಗಳಲ್ಲೂ ಮಂಗಳವಾರ ಪ್ರತಿಧ್ವನಿಸಿತು. ಈ ಕುರಿತು ಸರ್ಕಾರದಿಂದ ಸೂಕ್ತ ಉತ್ತರ ದೊರೆಯದ ಕಾರಣ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಧರಣಿ ನಡೆಸಿದ್ದರಿಂದ ಕಲಾಪ ಮುಂದೂಡಿದ ಪ್ರಸಂಗವೂ ನಡೆಯಿತು.

Advertisement

ವಿಧಾನಪರಿಷತ್‌ನಲ್ಲಿ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಚರ್ಚೆಗೆ ಅವಕಾಶ ನೀಡುವಂತೆ ಜೆಡಿಎಸ್‌ನ ಬಸವರಾಜ ಹೊರಟ್ಟಿ
ಒತ್ತಾಯಿಸಿದರು. ಇದಕ್ಕೆ ಒಪ್ಪದ ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ತಾಂತ್ರಿಕ ದೋಷ ಕಾರಣಕ್ಕೆ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಸಮಾಧಾನಗೊಳ್ಳದ ಬಸವರಾಜ ಹೊರಟ್ಟಿ, “ತಾಂತ್ರಿಕ ದೋಷದ ಕಾರಣ ನೀಡಬಹುದು. ಆದರೆ 15000ಕ್ಕೂ ಹೆಚ್ಚು ಮಹಿಳೆಯರು ರಸ್ತೆಯಲ್ಲಿದ್ದು, ಅವರ ಸ್ಥಿತಿಗತಿ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ.ಶಿವಕುಮಾರ್‌, “ಸೋಮವಾರ ಸಚಿವೆ ಉಮಾಶ್ರೀ ಧರಣಿ ನಿರತರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಅವರಿಂದ ಉತ್ತರ ಕೊಡಿಸಲಾಗುವುದು’ ಎಂದು ಸದನಕ್ಕೆ ತಿಳಿಸಿದರು. ಇದಕ್ಕೆ ಬಿಜೆಪಿ, ಜೆಡಿಎಸ್‌ ಸದಸ್ಯರು ಸಮಾಧಾನಗೊಳ್ಳಲಿಲ್ಲ. ಬಳಿಕ ಸಭಾಪತಿಗಳು ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡುವ ಭರವಸೆ ಹಿನ್ನೆಲೆಯಲ್ಲಿ ಸದಸ್ಯರು ಸುಮ್ಮನಾದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ತಾರಾ ಅನುರಾಧ, “ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮಕ್ಕಳೊಂದಿಗೆ ರಸ್ತೆಯಲ್ಲೇ ಮಲಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ
ಸ್ಪಂದಿಸದಿರುವುದು ಸರಿಯಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸಂವೇದನೆಯನ್ನೇ ಕಳೆದುಕೊಂಡಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ’ ಎಂದರು.

ನಮ್ಮ ಅಕ್ಕತಂಗಿಯರಿಗೆ ಈ ಸ್ಥಿತಿ ಬಂದಿದ್ದರೆ!: ಧರಣಿ ನಿರತ ಮಹಿಳೆಯರ ಶೋಚನೀಯ ಸ್ಥಿತಿ ಬಗ್ಗೆ ಸದನದ ಗಮನ ಸೆಳೆದ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ, “ಇಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಕ್ಕೆ ಸರ್ಕಾರ ಜನರ ಕ್ಷಮೆಯಾಚಿಸಬೇಕು. ಬೇಡಿಕೆ
ಈಡೇರಿಸುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಪ್ರತಿಭಟನಾನಿರತರ ಮನಧಿವಿಗೆ ಸ್ಪಂದಿಸಿ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸಬಹುದಿತ್ತು. ಮುಂಜಾನೆ ಸ್ಥಳಕ್ಕೆ ಭೇಟಿ ನೀಡಿದಾಗ ಅವರು ನಿತ್ಯಕರ್ಮಗಳಿಗೆ ಬಯಲನ್ನೇ ಬಳಸುವಂತಾಗಿದ್ದ ಸ್ಥಿತಿ ಕಂಡು ತೀವ್ರ ನೋವಾಯಿತು. ಗೌರವಧನ ಹೆಚ್ಚಳಕ್ಕೆ ಬೇಕಾದ 500 ಕೋಟಿ ರೂ. ಸರ್ಕಾರಕ್ಕೆ ದೊಡ್ಡ ಹೊರೆಯಲ್ಲ. ಕೂಡಲೇ ಮುಖ್ಯಮಂತ್ರಿಗಳು ಸಭೆ ನಡೆಸಿ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು. ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, “ಸರ್ಕಾರ ನೀಡುವ 3,500 ರೂ. ಗೌರವ ಧನದಲ್ಲಿ ಒಂದು ಕುಟುಂಬ ಜೀವನ ನಡೆಸಲು ಸಾಧ್ಯವೇ. ಧರಣಿನಿರತ
ಮಹಿಳೆಯರ ಸ್ಥಿತಿ ನಿಜಕ್ಕೂ ಭೀಕರ. ತಕ್ಷಣವೇ ಸರ್ಕಾರ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಸಹಾನುಭೂತಿ ಇದೆ: ಆಗ ಪ್ರತಿಕ್ರಿಯಿಸಿದ ಸಚಿವ ಡಿ.ಕೆ.ಶಿವಕುಮಾರ್‌, “ಧರಣಿ ನಡೆಸುತ್ತಿರುವ ಮಹಿಳೆಯರ ಬಗ್ಗೆ ಸರ್ಕಾರಕ್ಕೂ ಸಹಾನುಭೂತಿ ಇದೆ. ಸರ್ಕಾರದ ಪ್ರತಿನಿಧಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಚಿವರಿಂದ ಉತ್ತರ ಕೊಡಿಸಲಾಗುವುದು’ ಎಂದರು. ಇದಕ್ಕೆ ಬಿಜೆಪಿ, ಜೆಡಿಎಸ್‌ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಮನುಷ್ಯತ್ವ ಬೇಡವೆ?
ಜೆಡಿಎಸ್‌ನ ಶ್ರೀಕಂಠೇಗೌಡ, “ಅಲ್ಲಿ ಮಹಿಳೆಯರು ಶೌಚಾಲಯ ಸೌಲಭ್ಯವೂ ಇಲ್ಲದ ಸ್ಥಿತಿಯಲ್ಲಿರುವಾಗ ತುರ್ತಾಗಿ ಸ್ಪಂದಿಸದಿದ್ದರೆ ಹೇಗೆ. ನೀವು ನಿರ್ಧಾರ ಕೈಗೊಳ್ಳುವವರೆಗೆ ಅವರು ರಸ್ತೆಯಲ್ಲೇ ಇರಬೇಕೆ’ ಎಂದರು. ಬಳಿಕ ಬಿಜೆಪಿ, ಜೆಡಿಎಸ್‌ ಸದಸ್ಯರು ಪ್ರತಿಭಟನೆ ನಡೆಸಿದರು. ಬಾವಿಗಿಳಿದ ಸದಸ್ಯರು ಘೋಷಣೆ ಕೂಗುತ್ತಿದ್ದಂತೆ ಸಭಾಪತಿ ಕಲಾಪ ಮುಂದೂಡಿದರು.

ವಿಧಾನಸಭೆಯಲ್ಲೂ ಗದ್ದಲ
ವಿಧಾನಸಭೆಯಲ್ಲಿ ಬೆಳಗ್ಗೆಯಿಂದಲೇ ಪ್ರತಿಪಕ್ಷಗಳು ಧರಣಿ ಆರಂಭಿಸಿ ಮಧ್ಯಾಹ್ನದ ನಂತರ ಸರ್ಕಾರದ ಹೇಳಿಕೆ ನಂತರ ವಾಪಸ್‌ ಪಡೆದವು. ಪರಿಷತನಲ್ಲೂ ಬೆಳಗ್ಗೆ ವಿಷಯ ಪ್ರಸ್ತಾಪಗೊಂಡು ಶೂನ್ಯ ವೇಳೆಯಲ್ಲಿ ವ್ಯಾಪಕ ಚರ್ಚೆಯಾಗಿ ಬಿಜೆಪಿ -ಜೆಡಿಎಸ್‌ ಸದಸ್ಯರು ಧರಣಿ ನಡೆಸಿದ್ದರು. ಭೋಜನಾ ವಿರಾಮದ ನಂತರ ಪ್ರತಿಭಟನೆ ವಾಪಸ್‌ ಪಡೆಯಲಾಯಿತು. ಪ್ರತಿಪಕ್ಷ ನಾಯಕರು ಹೋರಾಟಕ್ಕೆ ಬೆಂಬಲ ಸೂಚಿಸಿ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದರೆ, ಆಡಳಿತಾರೂಢ ಕಾಂಗ್ರೆಸ್‌ ನಾಯಕರು ಸರ್ಕಾರ ನಿಮ್ಮ ಬೇಡಿಕೆ ಪರಿಶೀಲಿಸಲಿದ್ದು ಪ್ರತಿಭಟನೆ ಹಿಂಪಡೆಯಿರಿ ಎಂದು ಮನವಿ ಮಾಡಿದರು.ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಅಹೋರಾತ್ರಿ ಧರಣಿ ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಬುಧವಾರ ಸದನ ನಡೆಯಲು ಬಿಡುವುದಿಲ್ಲ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ,  ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

ಬೇಡಿಕೆಯೇನು?
ಅಂಗನವಾಡಿ ಕಾರ್ಯಕರ್ತೆಯರನ್ನು ಅವಧಿ ಮೀರಿ ದುಡಿಸಿಕೊಳ್ಳಲಾಗುತ್ತಿದೆ. ಬೇರೆ ಬೇರೆ ಯೋಜನೆಗಳ ಕಾರ್ಯಕ್ಕೂ ನಿಯೋಜಿಸಲಾಗುತ್ತಿದೆ. ಹೀಗಿದ್ದರೂ, ಅಂಗನವಾಡಿ ಕಾರ್ಯಕರ್ತೆಯರಿಗೆ 10 ಸಾವಿರ ರೂ., ಸಹಾಯಕಿಯರಿಗೆ 7500 ರೂ.ಕೊಡಲು ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಪಾಂಡಿಚೇರಿಯಲ್ಲಿ 10 ಸಾವಿರ, ಪಂಜಾಬ್‌ನಲ್ಲಿ 8500 ರೂ. ಕೊಡುತ್ತಿದ್ದು, ಡಿ ಗ್ರೂಪ್‌ ನೌಕರರೆಂದು ಪರಿಗಣಿಸಲಾಗಿದೆ. ಕೇರಳದಲ್ಲಿ  10 ಸಾವಿರ ರೂ.ವೇತನ ನೀಡಿದ್ದು, ನೌಕರಿ ಕಾಯಂ ಮಾಡಲಾಗಿದೆ. ತೆಲಂಗಾಣ ಮತ್ತು ಆಂಧ್ರ ಪ್ರವೇಶದಲ್ಲಿ ತಲಾ 10 ಸಾವಿರ ರೂ.ವೇತನ ನೀಡಲಾಗುತ್ತಿದೆ. ರಾಜ್ಯದಲ್ಲೂ ಕನಿಷ್ಠ 10 ಸಾವಿರ ರೂ. ನಿಗದಿ ಮಾಡಲೇಬೆಕು.

ಸರ್ಕಾರದ ವಾದವೇನು?
ಇದು ಕೇಂದ್ರ ಸರ್ಕಾರದ ಯೋಜನೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ವೇತನ ಸಂಬಂಧ ಕೇಂದ್ರ ಸರ್ಕಾರ ಮೊದಲು ಶೇ.90 ರಷ್ಟು, ರಾಜ್ಯ ಸರ್ಕಾರ 10 ರಷ್ಟು ಭರಿಸುತ್ತಿತ್ತು. ಕಳೆದ ವರ್ಷದಿಂದ ಕೇಂದ್ರ ಸರ್ಕಾರ ಅನುದಾನ ಕಡಿಮೆ ಮಾಡಿ ಶೇ.40 ಮಾತ್ರ ಭರಿಸುತ್ತಿದ್ದು, ಶೇ.60 ರಾಜ್ಯ ಸರ್ಕಾರ ಕೊಡುತ್ತಿದೆ. ಹೀಗಾಗಿ, ಪ್ರಸ್ತುತ ಕೊಡುತ್ತಿರುವ 6 ಸಾವಿರ ರೂ. ವೇತನದಲ್ಲಿ ಕೇಂದ್ರದ್ದು ಕೇವಲ 2400 ರೂ., ರಾಜ್ಯ ಸರ್ಕಾರದ್ದು 3600 ರೂ.. ಈ ಬಾರಿಯ ಬಜೆಟ್‌ನಲ್ಲಿ ಒಂದು ಸಾವಿರ ರೂ. ಹೆಚ್ಚಿಸಲಾಗಿದೆ. ಆದರೂ ಅವರ ಬೇಡಿಕೆ ವಿಚಾರದಲ್ಲಿ ಮುಕ್ತ ಮನಸ್ಸಿನಿಂದ ಇದ್ದು ಬಜೆಟ್‌ ಅನುಮೋದನೆ ಹಾಗೂ ಉಪ ಚುನಾವಣೆ ನಂತರ ಪರಿಶೀಲಿಸಲಾಗುವುದು. 

ಸಚಿವೆ ಉಮಾಶ್ರೀ ವಿರುದ್ಧ ಆಕ್ರೋಶ
ಎರಡು ದಿನಗಳಿಂದ ಪ್ರತಿಭಟನೆಯಲ್ಲಿ ಕುಳಿತಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀಯವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಕರ್ತರ ಕಷ್ಟ, ಸುಖ ವಿಚಾರಿಸಿಲ್ಲ ಎಂದು ಪ್ರತಿಭಟನಾಕಾರರು ವಾಗ್ಧಾಳಿ ನಡೆಸಿದರು.  

ಇಂದೂ ಕಲಾಪ ಭಂಗ ಸಾಧ್ಯತೆ
ಭೋಜನಾನಂತರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ, ಜೆಡಿಎಸ್‌ ಸದಸ್ಯರು ಧರಣಿ ಮುಂದುವರಿಸಿ, ಸರ್ಕಾರ ತಕ್ಷಣ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾ ನಾಯಕ ಡಾ.ಜಿ.ಪರಮೇಶ್ವರ್‌, “ಈ ಸಂಬಂಧ ಈಗಾಗಲೇ ಏ.19ರಂದು ಸಭೆ ಕರೆದು ಅವರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಅದರಂತೆ ಮುಷ್ಕರ ವಾಪಸ್‌ ಪಡೆಯಲು ಧರಣಿನಿರತರು ಮನಸ್ಸು ಮಾಡಿದ್ದಾರೆ. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿದೆ. ಅವರ ಬೇಡಿಕೆಗಳಿಗೆ ಸ್ಪಂದಿಸಲಿದೆ. ಹಾಗಾಗಿ ಧರಣಿ ವಾಪಸ್‌ ಪಡೆದು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ
ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಹಾಗೂ ಬಸವರಾಜ ಹೊರಟ್ಟಿ, “ಸರ್ಕಾರ ಈಗ ಹೇಳುತ್ತಿರುವ ಮಾತನ್ನು ನಂಬಿ ನಾವು ಧರಣಿ ವಾಪಸ್‌ ಪಡೆಯುತ್ತೇವೆ. ಒಂದೊಮ್ಮೆ ಅಂಗನವಾಡಿ ಕಾರ್ಯಕರ್ತೆಯರು ಧರಣಿ ಮುಂದುವರಿಸಿದರೆ ಬುಧವಾರ ಸದನದಲ್ಲಿ ನಾವು ಸಹ ಧರಣಿ ನಡೆಸಿ ಕಲಾಪ ನಡೆಯಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ತೀವ್ರ ಸ್ವರೂಪ
ನಗರದಲ್ಲಿ ಆರಂಭವಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹೋರಾಟಕ್ಕೆ ರಾಜ್ಯಾವ್ಯಾಪಿ ಬೆಂಬಲ
ವ್ಯಕ್ತವಾಗುತ್ತಿದ್ದು, ಹೋರಾಟ ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಕಂಡುಬರುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂಗನವಾಡಿ
ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಂಡೋಪ ತಂಡವಾಗಿ ಆಗಮಿಸಿ ಹೋರಾಟಕ್ಕೆ ಕೈಜೋಡಿಸುತ್ತಿದ್ದಾರೆ. 

ಸಂಚಾರ ಅಸ್ತವ್ಯಸ್ತ
ಪ್ರತಿಭಟನೆ-ಧರಣಿ ಹಿನ್ನೆಲೆಯಲ್ಲಿ ಮಂಗಳವಾರವೂ ಕೆ.ಆರ್‌.ವೃತ್ತ, ಶೇಷಾದ್ರಿ ರಸ್ತೆ, ಅರಮನೆ ರಸ್ತೆ, ಚಾಲುಕ್ಯ ವೃತ್ತ, ನೃಪತುಂಗ ರಸ್ತೆ, ಅಂಬೇಡ್ಕರ್‌ ರಸ್ತೆಯಲ್ಲಿ ಸ್ವಲ್ಪ ಮಟ್ಟಿಗೆ ಟ್ರಾμಕ್‌ ಜಾಮ್‌ನಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಹರಸಾಹಸಪಟ್ಟು ಪರ್ಯಾಯ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ  ಮಾಡಿಕೊಟ್ಟಿದ್ದರಿಂದ ಸೋಮವಾರದಷ್ಟು ಬಿಸಿ ತಟ್ಟಲಿಲ್ಲ.

ನಿಮಗೆ ಸ್ವಲ್ಪವಾದರೂ ಮಾನವೀಯತೆ ಬೇಡವೆ. ಅಲ್ಲಿ ಮಹಿಳೆಯರು ರಸ್ತೆಯಲ್ಲಿ ಮಲಗಿದ್ದಾರೆ ಎಂದರೆ ನೀವಿನ್ನೂ ಉತ್ತರ
ಕೊಡಿಸುತ್ತೀನಿ ಎನ್ನುತ್ತೀರಲ್ಲಾ. ಈಗಲೇ ಎಲ್ಲರೂ ಪ್ರತಿಭಟನಾ ಸ್ಥಳಕ್ಕೆ ಹೋಗೋಣ ಬನ್ನಿ. 

ಕೆ.ಎಸ್‌.ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ

ಕ್ಷುಲ್ಲಕ ಕಾರಣಗಳಿಗೆ ನೌಕರರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಕೆಲಸಕ್ಕೆ ಸೇರಿಸಿಕೊಳ್ಳಲು ನಿಯಮ ರೂಪಿಸಿರುವ ಸರ್ಕಾರ ಕೆಲಸದಿಂದ ತೆಗೆಯಲು ಸೇವಾ ನಿಯಮ ರೂಪಿಸಬೇಕು. 

ಎಚ್‌.ಎಸ್‌. ಸುನಂದಾ, ಸಂಘದ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next