Advertisement
ಊಟವೂ ಬೇಡ, ಸ್ನಾನವೂ ಬೇಡ ವೇತನ ಹೆಚ್ಚಳ ಮಾಡಿ ಎಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಗನವಾಡಿ ಮಹಿಳೆಯರ ಬೇಡಿಕೆ ನ್ಯಾಯಯುತವಾಗಿದೆ. ಹಾಗಾಗಿ ಸರ್ಕಾರ ಕನಿಷ್ಠ 10 ಸಾವಿರ ರೂ. ವೇತನ ಹೆಚ್ಚಳ ಮಾಡಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ವಿಪಕ್ಷ ನಾಯಕರ ಬೇಡಿಕೆ ಕುರಿತಂತೆ ಉತ್ತರ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಲೇ ಬಂದಿದೆ. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿದೆ. ಪ್ರತಿಬಾರಿಯೂ ಅವರ ಗೌರವಧನ ಹೆಚ್ಚಿಸಿದೆ. ನಾನು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆಯನ್ನು ಭೇಟಿ ಮಾಡಿ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಿದ್ದೇನೆ. ಆದರೆ ಅವರು ಏಕಾಏಕಿ ರಾತ್ರಿ ಹೋರಾಟಕ್ಕೆ ಮುಂದಾಗಿದ್ದಾರೆ. ಅವರಿಗೆ ಏನೆಲ್ಲಾ ಮಾಡಬಹುದೋ ಅದನ್ನ್ನೆಲ್ಲಾ ಮಾಡಿದ್ದೇವೆ.ತಾತ್ಕಾಲಿಕ ಶೌಚಾಲಯ ಕಲ್ಪಿಸಲು ಬಿಬಿಎಂಪಿಗೆ ಸೂಚನೆ ನೀಡಿದ್ದೇವೆ.
Related Articles
Advertisement
ನಿಮಗೆ ಮಹಿಳೆಯರ ಬಗ್ಗೆ ಕಾಳಜಿ ಇಲ್ವಾ? ಬಿಜೆಪಿಗೆ ಸಿಎಂಅಂಗನವಾಡಿ ಕಾರ್ಯಕರ್ತೆಯರದ್ದು ಕೇವಲ ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ, ಇದು ಕೇಂದ್ರ ಸರ್ಕಾರದ ಯೋಜನೆ. ಈ ಹಿಂದಿನ ಕೇಂದ್ರ ಸರ್ಕಾರ ಶೇ.90ರಷ್ಟು ಪಾಲು ಕೊಡುತ್ತಿತ್ತು, ರಾಜ್ಯ ಸರ್ಕಾರ ಶೇ.10ರಷ್ಟು ಕೊಡುತ್ತಿತ್ತು. ಆದರೂ ರಾಜ್ಯ ಸರ್ಕಾರ 2013ನೇ ಸಾಲಿನಿಂದ 500 ರೂ. ಗೌರವ ಧನ ಹೆಚ್ಚಳವಾಗಿ ಕೊಡುತ್ತಿದ್ದೇವೆ, ಆದರೆ 2016ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಶೇ.90ರಷ್ಟಿದ್ದ ಪಾಲನ್ನು ಶೇ.60ಕ್ಕೆ ಇಳಿಸಿದ್ದು, ರಾಜ್ಯ ಸರ್ಕಾರ ಶೇ.40ರಷ್ಟು ಪಾಲು ಕೊಡುವಂತಾಗಿತ್ತು. ಆ ನಿಟ್ಟಿನಲ್ಲಿ ಏಪ್ರಿಲ್ 1ರಿಂದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 7 ಸಾವಿರ ರೂ.ಆಗಲಿದೆ ಎಂದರು. ನಿಮಗೆ(ಬಿಜೆಪಿ) ಮಹಿಳೆಯರು, ದೀನರು, ದಲಿತರು, ಹಿಂದುಳಿದವರ ಬಗ್ಗೆ ಕಾಳಜಿ ಇಲ್ವಾ? ನೀವು 5 ವರ್ಷ ಆಡಳಿತ ಮಾಡಿದ್ದೀರಿ ಒಂದೇ, ಒಂದು ರೂಪಾಯಿ ಗೌರವಧನ ಹೆಚ್ಚು ಮಾಡಿದ್ದೀರಾ? ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಪಾಲನ್ನು ಶೇ.90ರಷ್ಟು ಮಾಡಲು ನೀವು(ಬಿಜೆಪಿ) ಒತ್ತಡ ಹಾಕಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಬಿಜೆಪಿ, ಜೆಡಿಎಸ್ ಕೋಲಾಹಲ:
ಸಿಎಂ ಸಿದ್ದರಾಮಯ್ಯನವರು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಸಿಎಂ ಸರಿಯಾದ ಮಾಹಿತಿ ನಿಮ್ಮಲ್ಲಿದ್ದರೆ ಕೊಡಿ ಎಂದು ತಿರುಗೇಟು ನೀಡದರು. ಬಳಿಕ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ತೀವ್ರ ಕೋಲಾಹಲ ನಡೆಸಿದ್ದರಿಂದ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು. 3 ಅಂಗನವಾಡಿ ಕಾರ್ಯಕರ್ತೆಯರು ಅಸ್ವಸ್ಥ:
ಸೋಮವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ತೀವ್ರಗೊಳ್ಳುತ್ತಿದ್ದು, ಏತನ್ಮಧ್ಯೆ ಮಂಗಳವಾರ ಬೆಳಗ್ಗೆ 3 ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋಟಮ್ಮ, ಉಗ್ರಪ್ಪ ಭೇಟಿ:
ಧರಣಿ ನಡೆಸುತ್ತಿದ್ದ ಫ್ರೀಡಂಪಾರ್ಕ್ ಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಮೋಟಮ್ಮ ಹಾಗೂ ವಿಎಸ್ ಉಗ್ರಪ್ಪ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮೋಟಮ್ಮಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೋಟಮ್ಮ, ಇದು ನಮ್ಮ ಯೋಜನೆಯಲ್ಲ, ಕೇಂದ್ರ ಸರ್ಕಾರದ ಯೋಜನೆಯಾಗಿದೆ. ರಾಜ್ಯ ಸರ್ಕಾರ ತನ್ನ ಗೌರವಧನವನ್ನು ಪ್ರತಿಬಾರಿಯೂ ಹೆಚ್ಚಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಿ ಎಂದರು ಹೇಳಿದರು. ಸಿಎಂ ಸಂಧಾನ ಸಭೆ:
ವಿಧಾನಸಭೆ ಕಲಾಪ ಮುಂದೂಡಿಕೆಯಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷಿ ಅವರನ್ನು ಸಂಧಾನ ಮಾತುಕತೆಗೆ ಕರೆಸಿಕೊಂಡಿದ್ದಾರೆ. ಸಭೆಗೆ ನಿಡುಮಾಮಿಡಿ ಶ್ರೀ, ಸಾಹಿತಿ ಮರುಳಸಿದ್ದಪ್ಪ ಸಾಥ್ ನೀಡಿದ್ದಾರೆ.