ಆಳಂದ: ಕಡಿಮೆ ಸಂಬಳದಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುತಿರುವ ಅಂಗನವಾಡಿ ನೌಕರರು ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು ಎಂದು ಸಿಐಟಿಯು ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶಾಂತಾ ಘಂಟಿ ಕರೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ತಾಲೂಕು ಘಟಕ ಹಮ್ಮಿಕೊಂಡಿದ್ದ 8ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬರುವ ಮುನ್ನ ಎರಡು ಸಾವಿರ ರೂ. ಗೌರವಧನ ಹೆಚ್ಚಿಸುವ ಕುರಿತು ಭರವಸೆ ನೀಡಿದ್ದು, ಈಗ ಅಧಿಕಾರಕ್ಕೆ ಬಂದಿದ್ದಾರೆ.
ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವ ಮೂಲಕ ಬರುವ ಬಜೆಟ್‌ನಲ್ಲಿ ನೌಕರರ ಹಣವನ್ನು ಮೀಸಲಿಟ್ಟು ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ನೌಕರರ ಹಲವು ಬೇಡಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಬೆಂಗಳೂರಿನಲ್ಲಿ ಬರುವ ಫೆಬ್ರವರಿ ತಿಂಗಳಲ್ಲಿ ರಾಜ್ಯಮಟ್ಟದ ಹೋರಾಟ ಕೈಗೊಳ್ಳಲಾಗುತ್ತಿದೆ ಎಂದರು.
ಸಿಐಟಿಯು ಹೋರಾಟದ ಫಲವಾಗಿ ನೌಕರರ ಬೇಡಿಕೆ ಈಡೇರಲು ಸಾಧ್ಯವಾಗಿದೆ. ಅಂಗನವಾಡಿ ಮಹಿಳೆಯರು ಕೇವಲ ಅಂಗನವಾಡಿ ಕೇಂದ್ರ ನಿರ್ವಹಿಸದೆ ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶ್ರಮಿಸುತ್ತಿದ್ದಾರೆ. ಈಗಿರುವ 10 ಸಾವಿರ ರೂ. ಗೌರವಧನ ಬದಲು 12 ಸಾವಿರ ರೂ. ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯುವ ಜಿಲ್ಲಾ ಅಧ್ಯಕ್ಷೆ ಗೌರಮ್ಮ ಪಾಟೀಲ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗನವಾಡಿ ನೌಕರರನ್ನು ಕಡೆಗಣಿಸಿದರೆ ನಿರಂತರ ಹೋರಾಟದ ಮೂಲಕ ಹಕ್ಕು ಪಡೆಯಲು ನೌಕರರು ಸಂಘಟಿತಾಗಿರಬೇಕು ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಕನಿಷ್ಠ 25 ಸಾವಿರ ರೂ. ಗೌರವಧನ ನೀಡಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.