ಬೀದರ: ಮಕ್ಕಳ ಪಾಲನೆ-ಪೋಷಣೆಯ ಮಹತ್ವದ ಜವಾಬ್ದಾರಿ ಸ್ಥಾನದಲ್ಲಿರುವ ಅಂಗನವಾಡಿ ನೌಕರರನ್ನು ಪ್ರತಿಯೊಂದು ಕಾರ್ಯಕ್ರಮಕ್ಕೆ ನಿಯೋಜಿಸುವುದು ತಪ್ಪಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗನವಾಡಿ ನೌಕರರು ಬೇರೆ ಕಾರ್ಯಕ್ರಮಕ್ಕೆ ಹೋಗಿರುವ ದಿನ, ಅಂಗನವಾಡಿಗಳಲ್ಲಿನ ಮಕ್ಕಳಿಗೆ ಆಹಾರ ಸೇರಿದಂತೆ ಅಗತ್ಯ ಸೌಕರ್ಯ ಸಿಗದೇ ಮಕ್ಕಳ ಸೇವೆಯಲ್ಲಿ ಅಡೆತಡೆ ಉಂಟಾಗುವುದು ಕಂಡು ಬರುತ್ತಿದೆ. ಹೀಗಾಗಿ ಅಂಗನವಾಡಿ ನೌಕರರ ಬದಲಾಗಿ ಸ್ವಸಹಾಯ ಸಂಘದ ಸದಸ್ಯರಿಗೆ, ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಕಾರ್ಯಕ್ರಮಕ್ಕೆ ಕರೆಯಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮತದಾರರ ದಿನ: ಪ್ರತಿ ವರ್ಷ ಜನವರಿ 25ರಂದು ಆಚರಿಸುವ ರಾಷ್ಟ್ರೀಯ ಮತದಾರರ ದಿನವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕು. ದಿನಾಚರಣೆಯು ಜಿಲ್ಲಾ, ತಾಲೂಕು ಮತ್ತು ಮತಗಟ್ಟೆ ಮಟ್ಟದಲ್ಲಿ ಕೂಡ ಅಚ್ಚುಕಟ್ಟಾಗಿ ನಡೆಯುವಂತಾಗಬೇಕು. ಈ ಸಂದರ್ಭದಲ್ಲಿ ಹೊಸದಾಗಿ ನೋಂದಣಿಯಾಗಿರುವ ಮತದಾರರನ್ನು ಸನ್ಮಾನಿಸಬೇಕು. ‘ಪ್ರೌಡ್ ಟು ಬಿ ಓಟರ್ ರೆಡಿ ಟು ವೋಟ್’ ಎನ್ನುವ ಘೋಷಣೆ ಚುನಾವಣಾ ಆಯೋಗದ ಲೋಗೊ ಇರುವ ಬ್ಯಾಡ್ಜ್ ಮತ್ತು ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಗುತ್ತದೆ.
ಮತದಾರರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಿರ್ಮಿಸಿರುವ ಇವಿಎಂ ಹಾಗೂ ವಿವಿಪ್ಯಾಟ್, ನೋಂದಣಿ ಸೇರ್ಪಡೆ ಬಗ್ಗೆ ವಿಡಿಯೋಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮತದಾರರ ಪಟ್ಟಿಯಲ್ಲಿ ಮಹಿಳಾ ಮತದಾರರ ಹೆಸರು ನೋಂದಣಿ ಪ್ರಮಾಣ ಜಿಲ್ಲೆಯಲ್ಲಿ ಇನ್ನೂ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ದಿನಾಚರಣೆ ವೇಳೆಯಲ್ಲಿ ಹೆಚ್ಚು ಮಹಿಳೆಯರು ಸೇರುವಂತೆ ನೋಡಿಕೊಳ್ಳಬೇಕು. ಸ್ವಸಹಾಯ ಸಂಘದ ಸದಸ್ಯರನ್ನು ಹೆಚ್ಚು ಸಂಖ್ಯೆಯಲ್ಲಿ ಸೇರಿಸಲು ಮೊದಲ ಆದ್ಯತೆ ಕೊಡಬೇಕು ಎಂದರು. ಈ ನಿಟ್ಟಿನಲ್ಲಿ ಬೃಹತ್ ಜನಜಾಗೃತಿ ರ್ಯಾಲಿ ನಡೆಸುವಂತಾಗಬೇಕು ಎಂದು ತಿಳಿಸಿದರು.
ಸ್ವೀಪ್ ಸಮಿತಿಯ ಸಮನ್ವಯಾಧಿಕಾರಿ ಗೌತಮ ಅರಳಿ ಮಾತನಾಡಿಮ ಶಾಲಾ-ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ಗ ಆಯಾ ಶಾಲೆಯ ಪ್ರಾಂಶುಪಾಲರು ಮುಖ್ಯಸ್ಥರಾಗಿರುತ್ತಾರೆ. ಈ ಕ್ಲಬ್‌ಗ ಉತ್ತಮ ಸಂಪನ್ಮೂಲ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮತದಾರರ ಹೆಸರು ನೋಂದಣಿ ಹಾಗೂ ಮತದಾನ ಜಾಗೃತಿಯಂತಹ ವಿಷಯಗಳನ್ನು ಮಕ್ಕಳಿಗೆ ತಿಳಿಸುತ್ತ ಹೋಗಬೇಕು. ಈ ವಿಷಯದಲ್ಲಿ ಉತ್ತಮ ಪ್ರಗತಿ ಸಾಧಿಸಿದವರಿಗೆ ಸನ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಚುನಾವಣಾ ಸಾಕ್ಷರತಾ ಕ್ಲಬ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ತಿಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.