Advertisement

ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ!

01:55 PM Jun 11, 2018 | |

ಬಳ್ಳಾರಿ: “ಈ ಸರ್ಕಾರಿ ಕಾಮಗಾರಿಗಳೇ ಇಷ್ಟೇ, ನಿಗದಿತ ಅವಧಿಯಲ್ಲಿ ಎಂದೂ ಪೂರ್ಣಗೊಳ್ಳಲ್ಲ.. ಗೊಳಿಸುವುದೂ ಇಲ್ಲ…. ಯಾವಾಗಲೂ ಬರೀ ವಿಳಂಬ.. ಸಂಬಂಧಪಟ್ಟ ಅ ಧಿಕಾರಿಗಳದ್ದೂ ಅಷ್ಟೇ ಸದಾ ನಿರ್ಲಕ್ಷ್ಯ ಧೋರಣೆ…’ ಎಂಬ ಸಾರ್ವಜನಿಕರ ಬೇಸರ ಮಾತುಗಳಿಗೆ ಪುಷ್ಠಿ ನೀಡುತ್ತದೆ ತಾಲೂಕಿನ ಕುಂಟನಹಾಳು ಗ್ರಾಮದಲ್ಲಿ ಮೂರು ವರ್ಷಗಳಿಂದ ಪೂರ್ಣಗೊಳ್ಳದ ಅಂಗನವಾಡಿ ಕಟ್ಟಡ ಕಾಮಗಾರಿ.

Advertisement

ಅಂಗನವಾಡಿ ಕಟ್ಟಡ ಎಂದರೆ, ಶಾಲಾ, ಕಾಲೇಜುಗಳಂತೆ ಬೃಹದಾಕಾರವಾಗಿ ನಿರ್ಮಿಸಲ್ಲ. ಕೇವಲ ಬೆರಳೆಣಿಕೆಯಷ್ಟು ಮಕ್ಕಳು ಕೂಡಲು ಅಗತ್ಯವಾದ ಚಿಕ್ಕ ಮತ್ತು ಚೊಕ್ಕದಾದ ಕಟ್ಟಡ. ಇಂಥಹ ಕಟ್ಟಡ ನಿರ್ಮಾಣಕ್ಕೆ ನಿರಂತರವಾಗಿ ಕೆಲಸ ನಡೆದರೆ ಕೇವಲ 5 ಅಥವಾ 6 ತಿಂಗಳ ಕಾಲಾವಧಿ ಸಾಕು. ಆದರೆ, ತಾಲೂಕಿನ ಕುಂಟನಹಾಳ್‌ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ 18×25 ಅಡಿ ಸುತ್ತಳತೆಯ ಅಂಗನವಾಡಿ ಕಟ್ಟಡ ಕಾಮಗಾರಿ ಮೂರು ವರ್ಷಗಳು ಕಳೆದರೂ ಪೂರ್ಣಗೊಳ್ಳುತ್ತಿಲ್ಲ.

 ಈವರೆಗೆ ಕೇವಲ ಸುತ್ತ ನಾಲ್ಕು ಗೋಡೆ ನಿರ್ಮಿಸಿ ಮೇಲ್ಛಾವಣಿ (ಆರ್‌ಸಿಸಿ ರೂಫ್‌) ನಿರ್ಮಿಸಿರುವುದನ್ನು ಹೊರತುಪಡಿಸಿದರೆ, ಇನ್ನುಳಿದಂತೆ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈ ಕುರಿತು ಸ್ಥಳೀಯರನ್ನು ಕೇಳಿದರೆ, ಸುಮಾರು ಮೂರು ವರ್ಷಗಳ ಹಿಂದೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇಲ್ಲಿಗೆ ಮೂರು ವರ್ಷ ಉರುಳಿದ್ದು, ಪೂರ್ಣಗೊಳ್ಳುವ ಭಾಗ್ಯ ಇನ್ನು ಯಾವಾಗ ಬರುತ್ತೋ ಏನೋ? ಅಲ್ಲಿವರೆಗೂ ಅಂಗನವಾಡಿ ಮಕ್ಕಳಿಗೆ ಪಕ್ಕದ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವೇ ಗತಿ ಎಂಬ ಬೇಸರ ವ್ಯಕ್ತಪಡಿಸುತ್ತಾರೆ. 

ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆರಂಭಿಕವಾಗಿ 4.18 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಅನುದಾನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಈ ಕೇಂದ್ರಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಗ್ರಾಮ ಪಂಚಾಯತ್‌ ಸದಸ್ಯರು, ಗ್ರಾಮಸ್ಥರು ಮನವಿ ಮಾಡಿದ್ದಾರೆ. ಹೀಗಾಗಿ, ಅವರಿಬ್ಬರ ನಡುವೆ ಹಗ್ಗಜಗ್ಗಾಟ ಶುರುವಾಗಿ ಇಂದಿಗೆ ಮೂರುವರ್ಷಗಳುಗತಿಸಿವೆ. ಕಟ್ಟಡ ನಿರ್ಮಾಣಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

 ಕಲ್ಲುಗಳಿಂದ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಅತ್ಯಂತ ಕಡಿಮೆ ಸಿಮೆಂಟ್‌, ಮರಳನ್ನು ಬಳಸಿಕೊಂಡು ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಮುಕ್ತಾಯದ ಹಂತಕ್ಕೆ ಕಟ್ಟಡ ನಿರ್ಮಾಣಕಾರ್ಯ ತಲುಪಿದೆ. ಮತ್ತಷ್ಟು ಅನುದಾನ ಬಿಡುಗಡೆಗೆ ಗ್ರಾಮ ಪಂಚಾಯಿತಿಯು ಬೇಡಿಕೆ ಇಟ್ಟಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. 

Advertisement

ಕಟ್ಟಡ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕಿಟಕಿ, ಪ್ರದೇಶದ್ವಾರಕ್ಕೆ ಬಾಗಿಲನ್ನು ಕೂಡಿಸುವುದು. ಸುಣ್ಣ, ಬಣ್ಣ ಬಳಿಯುವುದು ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳು ಬಾಕಿಯಿವೆ. ಅನುದಾನದ ಕೊರತೆಯಿಂದ ಅಭಿವೃದ್ಧಿ
ಕುಂಠಿತವಾಗಿದೆ.

ಕಟ್ಟಡಕ್ಕೆ ಕಾಂಪೌಂಡ್‌ ಇಲ್ಲ. ತರಕಾರಿ ಬೆಳೆಸಲು ಇಂತಿಷ್ಟು ಜಾಗ ನಿಗದಿಪಡಿಸಿರಬೇಕು ಎಂಬ ನಿಯಮವಿದ್ದರೂ, ಅದ್ಯಾವುದು ಇಲ್ಲಿ ಕಾಣುತ್ತಿಲ್ಲ. ಸರ್ಕಾರಿ ಕಟ್ಟಡದ ಕೊನೆಯಂಚಿನಲ್ಲಿ ಈ ಕಟ್ಟಡ ತಲೆಎತ್ತಿದೆ. ಮುಂಭಾಗದಲ್ಲಿ ಗ್ರಾಮಸ್ಥರು ಓಡಾಡುವ ರಸ್ತೆಯಿದೆ. ಆಗಾಗಿ, ಕೇಂದ್ರ ಆವರಣದಲ್ಲಿ ತರಕಾರಿ ಬೆಳೆ, ಕಂಪೌಂಡ್‌ ಕನಸು
ನುಚ್ಚುನೂರಾಗಿದೆ.

ತಾತ್ಕಾಲಿಕ ಕೊಠಡಿ: ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳು ಸದ್ಯ ಪಕ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿದೆ. ಅದೂ ಸಹ ಶಿಥಿಲಾವಸ್ಥೆ ತಲುಪಿದ್ದು, ಮಳೆಬಂದಾಗ, ಚಿಣ್ಣರ ತರಗತಿಗೆ ತೊಂದರೆಯಾಗಲಿದೆ.

ಹೆಚ್ಚುವರಿ ಅನುದಾನಕ್ಕೆ ಜಿಪಂ ಸಿಇಒ ಅಸ್ತು ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಕಾರ್ಯ ಅರೆಬರೆಯಾಗಿದ್ದು, ಹೆಚ್ಚುವರಿ ಅನುದಾನ ಬಿಡುಗಡೆಯ ಪ್ರಸ್ತಾವನೆ ಇಲಾಖೆ ಮುಂದಿದೆ. ಹೀಗಾಗಿ, ಎರಡೂಮೂರು ದಿನಗಳ ಹಿಂದಷ್ಟೇ ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರ ಗಮನ ಸೆಳೆಯಲಾಗಿದೆ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಅವರು ಅಸ್ತು ನೀಡಿದ್ದಾರೆಂದು ಇಲಾಖೆ ಮೂಲಗಳು ತಿಳಿಸುತ್ತವೆಯಾದರೂ, ಕಾಮಗಾರಿ ಪೂರ್ಣಗೊಳ್ಳಲು ಇನ್ನು ಎಷ್ಟು ದಿನಗಳ ಕಾಲ ಬೇಕಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮೂರುವರ್ಷದಿಂದ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕಾರ್ಯ ನಡೆದಿದೆ. ಹೆಚ್ಚುವರಿ ಅನುದಾನ
ನೀಡುವಂತೆ ಗ್ರಾಮ ಪಂಚಾಯತ್‌ನ ಇಲಾಖೆ ಮೇಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದೆ. ಅಗತ್ಯ ಅನುದಾನ ಬಂದರೆ, ಕಟ್ಟಡ ನಿರ್ಮಾಣಕಾರ್ಯ ಬಹುತೇಕ ಪೂರ್ಣಗೊಳ್ಳಲಿದೆ. 
 ರಾಜಶೇಖರ, ದೇವೇಂದ್ರಗೌಡ, ಕುಂಟನಹಾಳು ಗ್ರಾಮಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next