Advertisement

ಪಾಳುಬಿದ್ದ ಕಟ್ಟಡ್ಡದಲ್ಲಿ ಅಂಗನವಾಡಿ

05:01 PM Dec 28, 2018 | Team Udayavani |

ದೋಟಿಹಾಳ: ಕೇಂದ್ರ, ರಾಜ್ಯ ಸರಕಾರಗಳು ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿವೆ. ಆದರೆ ಈ ಗ್ರಾಮದ ಚಿಕ್ಕಮಕ್ಕಳ ಸಮಸ್ಯೆ ಬಗ್ಗೆ ಯಾವ ಅಧಿಕಾರಿ, ಜನಪ್ರತಿನಿಧಿಗಳೂ ಗಮನ ಹರಿಸದಿರುವುದು ದುರದೃಷ್ಟ ಸಂಗತಿಯಾಗಿದೆ. ಜಿಲ್ಲೆಯ ಗಡಿಭಾಗದಲ್ಲಿರುವ ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಜೂಲಕುಂಟಿ ಗ್ರಾಮದ ಅಂಗವನಾಡಿ ಕೇಂದ್ರದ ಅವ್ಯವಸ್ಥೆ ಕಥೆ ಇದು.

Advertisement

ಜೂಲಕುಂಟಿ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳ ಗೋಳು ಕೇಳುವರ್ಯಾರು ಎಂಬತ್ತಾಗಿದೆ. ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಪಾಳುಬಿದ್ದ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಈ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿದೆ. ಕಟ್ಟಡದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಕಳೆಭಾಗದ ಪಾಟಿಕಲ್ಲುಗಳು ಕಿತ್ತು ಗುಂಡಿಗಳು ನಿರ್ಮಾಣವಾಗಿವೆ. ಈ ಗುಂಡಿಗಳ ಮೂಲಕ ಅನೇಕ ಬಾರಿ ಹಾವು, ಚೇಳು ಬಂದ ಉದಾಹರಣೆಗಳಿವೆ.

ಮೊಟ್ಟೆಗಳ ವಾಸನೆಯಿಂದಾಗಿ ವಿಷಜಂತುಗಳು ಅಂಗನವಾಡಿ ಕೇಂದ್ರದೊಳಗೆ ಬರುತ್ತಿವೆ. ಇದರಿಂದ ಈ ಕಟ್ಟಡದಲ್ಲಿ ಅಂಗನವಾಡಿ ನಡೆಸುವುದು ಕಷ್ಟವಾಗಿದೆ. ಮಕ್ಕಳು ಕುಳಿತುಕೊಳ್ಳಲು ಜಾಗೆಯಿಲ್ಲ. ಆಹಾರ ಧಾನ್ಯ ಸಂಗ್ರಹಿಸಿಡಲು ಹಾಗೂ ದಾಖಲೆಗಳನ್ನು ಇಡಲು ಸೂಕ್ತ ಸ್ಥಳಾವಕಾಶವಿಲ್ಲ. ವಿಷ ಜಂತುಗಳ ಭಯದಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ಬಿಟ್ಟು ಹೊರಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇಂತಹ ಪರಿಸ್ಥಿತಿ ಇರುವುದರಿಂದ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ತಿಳಿಸಿದರು.

ಜೂಲಕುಂಟಿ ಗ್ರಾಮದ ಅಂಗನವಾಡಿ ಕೇಂದ್ರವನ್ನು 10 ವರ್ಷಗಳ ಹಿಂದೆ ಜಮೀನು ಮಾಲೀಕರ ಒಪ್ಪಿಗೆ ಪಡೆಯದೇ ನಿರ್ಮಿಸಲಾಗಿತ್ತು. ಎರಡು ವರ್ಷಗಳ ಹಿಂದೇ ಜಮೀನು ಮಾಲೀಕ ಈ ಕೇಂದ್ರದ ಕಟ್ಟಡ ನಮ್ಮ ಜಮೀನಲ್ಲಿದೆ ಎಂದು ಖಾಲಿ ಮಾಡಿಸಿದರು. ಆಗ ಗ್ರಾಮದಲ್ಲಿ ಕೇಂದ್ರವನ್ನು ನಡೆಸಲು ಬಾಡಿಗೆ ಕಟ್ಟಡ ಸಿಗಲಿಲ್ಲ. ಹೀಗಾಗಿ ಗ್ರಾಮದಲ್ಲಿ ಏಳೆಂಟು ವರ್ಷಗಳಿಂದ ಪಾಳುಬಿದ್ದ ಹಳೇ ಶಾಲೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಆರಂಭಿಸಲಾಗಿದೆ.

ಇದರ ಬಗ್ಗೆ ಕೇಂದ್ರದ ಮೇಲ್ವಿಚಾರಕರಾದ ಶ್ರೀದೇವಿ ಅವರನ್ನು ವಿಚಾರಿಸಿದಾಗ, ನಿಜವಾಗಿ ಅಂಗನವಾಡಿ ಕೇಂದ್ರವನ್ನು ಇಲ್ಲಿ ನಡೆಸುವುದು ತಪ್ಪು. ಗ್ರಾಮದಲ್ಲಿ ಬಾಡಿಗೆ ಮನೆ-ಕಟ್ಟಡ ಸಿಗದ ಕಾರಣ ಅನಿವಾರ್ಯವಾಗಿ ನಡೆಸುತ್ತಿದ್ದೇವೆ. ತಾಪಂ ಇಒ ಅವರು ಅಂಗನವಾಡಿ ಕೇಂದ್ರವನ್ನು ಆರಂಭಿಸಲು ಒಂದು ಕೊಠಡಿ ನೀಡಿ ಎಂದು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಪತ್ರ ಬರೆದಿದ್ದಾರೆ. ಆದರೆ ಶಾಲೆಯ ಮುಖ್ಯೋಪಾಧ್ಯಾಯರು ಕೊಠಡಿ ನೀಡಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಪಾಳುಬಿದ್ದ ಕೊಠಡಿಯಲ್ಲಿ ಅಂಗನವಾಡಿ ನಡೆಸುತ್ತಿದೇವೆ. ಹೀಗೆ ಮುಂದುವರಿದರೆ ಮಕ್ಕಳಿಗೆ ತೊಂದರೆಯಾಗುತ್ತದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು. ದೊಡ್ಡ ಅನಾಹುತವಾಗುವ ಮೊದಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಅಂಗನವಾಡಿ ಕೇಂದ್ರವನ್ನು ಸೂಕ್ತ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆರೋಪಿಸಿದರು.

Advertisement

ಜೂಲಕುಂಟಿ ಗ್ರಾಮದ ಅಂಗನವಾಡಿ ಕೇಂದ್ರದ ಸಮಸ್ಯೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗ್ರಾಮದ ಸರಕಾರಿ ಶಾಲೆ ಹೆಚ್ಚುವರಿ ಕೊಠಡಿಯನ್ನು ನೀಡಲು ಅಧಿಕಾರಿಗಳು ತಿಳಿಸಿದರೂ ಶಾಲಾ ಮುಖ್ಯೋಪಾಧ್ಯಾಯರು ಕೊಠಡಿಯನ್ನು ನೀಡಲಿಲ್ಲ. ಹೀಗಾಗಿ ಸಮಸ್ಯೆಗೆ ಕಾರಣವಾಗಿದೆ. ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತೇನೆ.
ವಿರೇಂದ್ರ ನಾವದಗಿ, ಸಿಡಿಪಿಒ.

ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next