Advertisement

ಅಂಗನವಾಡಿ ನೌಕರರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

10:58 PM Mar 15, 2021 | Team Udayavani |

ಉಡುಪಿ: ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡ ಕೊರೊನಾ ಸಂದರ್ಭದಲ್ಲಿ ಸರಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಷರತ್ತುಗಳಿಲ್ಲದೆ ಕೆಲಸವನ್ನು ನಿರ್ವಹಿಸಿದ್ದಾರೆ. ಆದರೂ ಇದುವರೆಗೆ ಯಾವುದೇ ಸವಲತ್ತು ನೀಡಿಲ್ಲ. ಸರಕಾರ ಈ ಬಾರಿಯ ಬಜೆಟ್‌ ಅನ್ನು ಮಹಿಳಾ ಪರ ಬಜೆಟ್‌ ಎಂದು ಕರೆದರೂ ಅದರಿಂದ ಮಹಿಳೆಯರಿಗೆ ಯಾವುದೇ ಪ್ರಯೋಜನ ಇಲ್ಲವಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ಹೇಳಿದರು.
2021-22ನೇ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಪರಿಶೀಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

Advertisement

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ ಮಾತನಾಡಿ, ಕೊರೊನಾ ಸಾಂಕ್ರಾಮಿಕತೆಯ ಭೀಕರತೆ ಇದ್ದಾಗಲೂ ಮಲೆನಾಡು, ಗುಡ್ಡಗಾಡು, ಕೊಳಚೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಕುಟುಂಬದ ವಾಹನಗಳನ್ನು ಬಳಸಿಕೊಂಡು ಆಹಾರ, ಸಾಮಗ್ರಿಗಳನ್ನು ಮನೆಮನೆಗೆ ಹಂಚಿದ್ದು, ಕ್ವಾರಂಟೈನ್‌ ಆದ ಸ್ಥಳಗಳಿಗೆ ಮಾಸ್ಕ್, ಸ್ಯಾನಿಟೈಸರ್‌, ಮಾತ್ರೆಗಳು ಇಲ್ಲದಿದ್ದರೂ ತಮ್ಮ ಕೈಯಿಂದ ಎಲ್ಲವನ್ನು ಖರ್ಚು ಮಾಡಿಕೊಂಡು ಆಹಾರ ವಿತರಣೆ ಮಾಡಿದ್ದಾರೆ ಆದರೂ ಕೂಡ ಸರಕಾರ ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ ಎಂದರು.

ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕವಿರಾಜ್‌, ಮೋಹನ್‌, ಕಾಪು ತಾಲೂಕು ಅಧ್ಯಕ್ಷೆ ಲೀಲಾ, ಉಡುಪಿ ತಾಲೂಕು ಅಧ್ಯಕ್ಷೆ ಅಂಬಿಕಾ, ಕುಂದಾಪುರ ತಾಲೂಕು ಅಧ್ಯಕ್ಷೆ ಆಶಾಲತಾ, ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಜಯಲಕ್ಷ್ಮೀ ಸಹಿತ ಹಲವಾರು ಮಂದಿ ಅಂಗನ ವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next