ರಾಯಚೂರು: ದೇಶದ ಶೇ.50ರಷ್ಟು ಮಹಿಳೆಯರು ರಕ್ತ ಹೀನತೆ ಕೊರತೆಯಿಂದ ಬಳಲುತ್ತಿದ್ದಾರೆ. ಮಕ್ಕಳು, ಕಿಶೋರಿಯರು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಶೇ. 80ರಷ್ಟು ಜನರು ಅದಕ್ಕೆ ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯ ಕುಲಸಚಿವ ಗುತ್ತಿ ಜಂಬೂನಾಥ ಹೇಳಿದರು.
ನಗರದ ಕೃಷಿ ವಿವಿ ವಿಜ್ಞಾನ ಕೇಂದ್ರದಲ್ಲಿ ಬೆಳಗಾವಿ ಸೇವಕ್ ಸಂಸ್ಥೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ ಸಹಯೋಗದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಪೌಷ್ಟಿಕಾಂಶ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಕೌಟುಂಬಿಕ ಬಡತನದಿಂದ ಪೌಷ್ಟಿಕ ಮತ್ತು ಸಂತುಲಿತ ಆಹಾರ ಸೇವನೆಕೊರತೆ ಎದುರಿಸುತ್ತಿದ್ದಾರೆ. ರಕ್ತಹೀನತೆ ಕುರಿತು ಜಾಗೃತಿಯಿಲ್ಲ. ಇದರಿಂದ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಂಬಂಧಿತ ಆರೋಗ್ಯ ಸಮಸ್ಯೆ, ದೇಹದಲ್ಲಿ ರಕ್ತದ ನಷ್ಟದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಕಬ್ಬಿಣಾಂಶ ಕೊರತೆಯಿಂದ ಮಹಿಳೆಯರಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದರು.
ರಕ್ತ ಹೀನತೆ ಮತ್ತು ಪೌಷ್ಟಿಕತೆ ಕುರಿತು ಅರಿವು ಮೂಡಿಸಬೇಕು. ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬ ಹಾಗೂ ಸದೃಢ ಸಮಾಜ ನಿರ್ಮಿಸಲು ಸಾಧ್ಯ. ಮಹಿಳೆಯರು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು.
ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ| ಎಸ್.ಕೆ. ಮೇಟಿ ಮಾತನಾಡಿ, ಮಹಿಳೆಯರಲ್ಲಿ ಪೋಷಕಾಂಶಗಳ ಕೊರತೆ ನೀಗಿದಾಗ ಮಾತ್ರ ದೇಶದಲ್ಲಿ ಬಡತನ ನಿರ್ಮೂಲನೆಯಾಗಿದೆ ಎನ್ನಬಹುದು. ಮಣ್ಣಿನ ಗುಣ, ಬೆಳೆ ಗುಣ ಹಾಗೂ ಮನುಷ್ಯ ಗುಣಗಳು ಒಗ್ಗೂಡಿದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಂಸ್ಥೆ ಪ್ರಧಾನ ಪರಿವೀಕ್ಷಕ ಆನಂದ ಲೋಬೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರಟಗಿ ಸ್ವಯಂ ಸೇವಾ ಸಂಸ್ಥೆಯ ಶಿಲ್ಪಾ ಬೀರಾದಾರ ಕಾರ್ಯಕ್ರಮದ ಕುರಿತು ಅಭಿಪ್ರಾಯ ಹಂಚಿಕೊಂಡರು.
ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ವಿವಿಧ ಮಹಿಳಾ ಸ್ವ-ಸಹಾಯ ಗುಂಪುಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನ ಹಾಗೂ ಮುಖ್ಯಸ್ಥ ಡಾ| ರವಿ ಎಂ.ವಿ.ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ವಿಭಾಗದ ವಿಜ್ಞಾನಿ ಡಾ| ಅನುಪಮಾ ಸಿ. ವಂದಿಸಿದರು. ತೋಟಗಾರಿಕಾ ವಿಭಾಗದ ವಿಜ್ಞಾನಿ ಹೇಮಲತಾ ಕೆ.ಜೆ. ನಿರೂಪಿಸಿದರು.