Advertisement

ಕೋಟೆನಾಡಿಗೊಲಿದ ಕೇಂದ್ರ ಸಚಿವ ಸ್ಥಾನ : ಮೊದಲ ಯತ್ನದಲ್ಲೇ ಸಂಸದ ನಾರಾಯಣಸ್ವಾಮಿಗೆ ಯಶಸ್ಸು

02:15 AM Jul 08, 2021 | Team Udayavani |

ಚಿತ್ರದುರ್ಗ: ಆನೇಕಲ್‌ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿ ಹಿಂದೆ ರಾಜ್ಯ ಬಿಜೆಪಿ ಸರಕಾರದಲ್ಲಿ ಸಚಿವರೂ ಆಗಿದ್ದ ಚಿತ್ರದುರ್ಗ ಸಂಸದ ಆನೇಕಲ್‌ ನಾರಾಯಣಸ್ವಾಮಿ ಅವರಿಗೆ ಈಗ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ.

Advertisement

ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದರು. ಈಗ ಯೋಗಾಯೋಗ ಎಂಬಂತೆ ಪ್ರಧಾನಿ ಮೋದಿ ಸಂಪುಟದಲ್ಲಿ ಮೊದಲ ಬಾರಿ ಸಚಿವರಾಗುವ ಮೂಲಕ ರಾಜಕೀಯದ ಮತ್ತೂಂದು ಮೆಟ್ಟಿಲು ಏರಿದ್ದಾರೆ.

ಸತತ ನಾಲ್ಕು ಅವಧಿಗೆ ಆನೇಕಲ್‌ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ, 2010ರಲ್ಲಿ ರಾಜ್ಯ ಸಂಪುಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಂಧೀಖಾನೆ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ನಾರಾಯಣಸ್ವಾಮಿ ಅವರಿಗಿದೆ. ಅನಂತರದ ರಾಜಕೀಯ ಬೆಳವಣಿಗೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಬಿ.ಎನ್‌. ಚಂದ್ರಪ್ಪ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದರು. ಬುಧವಾರ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಅವರು, ದಲಿತ ಪರ ಕಾಳಜಿ ಇರುವವರು. ಚಿತ್ರದುರ್ಗ ಸಂಸದರಾದ ನಂತರ ಸಿಎಸ್‌ಆರ್‌ ನಿಧಿ ಬಳಕೆ, ಭದ್ರಾ ಜಲಾಶಯದ ನೀರು ವಿವಿ ಸಾಗರಕ್ಕೆ ಹರಿಯುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ.

ಜಿಲ್ಲೆಯ ಮೊದಲ ಕೇಂದ್ರ ಸಚಿವ
ವಿಭಜಿತ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಕೇಂದ್ರ ಸಚಿವರಾಗಿ ಎ.ನಾರಾಯಣಸ್ವಾಮಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಮೊದಲ ಬಾರಿಗೆ ಸಂಸದರಾಗಿ, ಮೊದಲ ಅವಧಿಯಲ್ಲೇ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದ ಮೊದಲ ಸಂಸತ್‌ ಸದಸ್ಯರಾಗಿರುವುದು ವಿಶೇಷ. ಈ ಹಿಂದೆ ಚಿತ್ರದುರ್ಗ ದಾವಣಗೆರೆ ಅಖಂಡ ಜಿಲ್ಲೆಯಾಗಿದ್ದಾಗ ಕೊಂಡಜ್ಜಿ ಬಸಪ್ಪನವರು ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದರು. ಅನಂತರ ಚಿತ್ರದುರ್ಗ, ದಾವಣಗೆರೆ ವಿಭಜನೆಯಾಗಿ ಪ್ರತ್ಯೇಕ ಜಿಲ್ಲೆಗಳಾದವು. ಈ ವೇಳೆ ದಾವಣಗೆರೆ ಸಂಸದರಾಗಿ ಆಯ್ಕೆಯಾದ ಜಿ.ಎಂ. ಸಿದ್ದೇಶ್ವರ 2014ರಲ್ಲಿ ಕೇಂದ್ರ ಸಚಿವರಾದರು.

Advertisement

Udayavani is now on Telegram. Click here to join our channel and stay updated with the latest news.

Next