ಆನೇಕಲ್: ಆನೇಕಲ್ ಪುರಸಭೆ ಮೂರು ವಾರ್ಡ್ ಗಳ ಉಪಚುನಾವಣಾ ಮತ ಎಣಿಕೆ ಫಲಿತಾಂಶ ಮಂಗಳವಾರ ಹೊರ ಬಿದ್ದಿದ್ದು, ಎರಡು ವಾರ್ಡ್ ಗಳಲ್ಲಿ ಬಿಜೆಪಿ ಹಾಗೂ ಒಂದು ವಾರ್ಡ್‌ನಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಆನೇಕಲ್ ಪುರಸಭೆಯಲ್ಲಿ ಮೂರು ಸದಸ್ಯ ಸ್ಥಾನಗಳಾದ 14, 16 ಮತ್ತು 17ನೇ ವಾರ್ಡ್‌ಗಳಿಗೆ ಕಳೆದ 19ನೇ ತಾರೀಖೀನಂದು ಚುನಾವಣೆ ನಡೆದಿದ್ದು, ಮೂರು ವಾರ್ಡ್‌ಗಳ ಮತ ಎಣಿಕೆ ಕಾರ್ಯ ಆನೇಕಲ್ ತಾಲೂಕು ಕಚೇರಿಯಲ್ಲಿ ನಡೆಯಿತು.
ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಮೂರು ವಾರ್ಡ್ ಗಳ ಉಪಚುನಾವಣೆ ಪೈಕಿ 16ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಶೋಭಾ ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಚ್ಚರಿ ಪೈಪೋಟಿ ನೀಡಿ ಬಿಜೆಪಿ ಅಭ್ಯರ್ಥಿ ಶೋಭರಾಣಿ ಎದುರು ಕೇವಲ ಎರಡು ಮತಗಳ ಅಂತರದಲ್ಲಿ ಪರಾಜಿತಗೊಂಡರು.
ಪೊಲೀಸ್ ಬಂದೋಬಸ್ತ್: ಇನ್ನುಳಿದ ಎರಡು ವಾರ್ಡ್ ಗಳ ಪೈಕಿ 14ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ನೇತ್ರಾವತಿ ವಿರುದ್ಧ ಬಿಜೆಪಿ ಅಭ್ಯರ್ಥಿ ಶ್ಯಾಮಲಾ ಜಯ ಗಳಿಸಿದರೆ, 17ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಪ್ರಸಾದ್ ಗೆಲುವನ್ನು ಸಾಧಿಸಿದ್ದು, ಮತ ಎಣಿಕೆ ಕೇಂದ್ರ ಮುಂಭಾಗ ಮುಖಂಡರ ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಚುನಾವಣಾ ಮತ ಎಣಿಕೆಯ ನಿಮಿತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆಗೊಳಿಸಲಾಗಿತ್ತು.
ಬಿಜೆಪಿಯ ಶ್ಯಾಮಲಾ, ಶೋಭಾರಾಣಿಗೆ ಜಯ: 14ನೆಯ ವಾರ್ಡ್‌ನಲ್ಲಿ ಬಿಜೆಪಿಯ ಸಿ.ಆರ್. ಶ್ಯಾಮಲಾ ಅವರು 500 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ನೇತ್ರಾವತಿ(447)ಅವರಿಗಿಂತ 53 ಮತ ಹೆಚ್ಚಾಗಿ ಪಡೆದು ಜಯಶಾಲಿಯಾಗಿದ್ದಾರೆ. 16ನೇ ವಾರ್ಡ್‌ನಲ್ಲಿ ಬಿಜೆಪಿಯ ಶೋಭಾರಾಣಿ 208 ಮತ ಪಡೆದು ಜಯಶಾಲಿ ಯಾಗಿದ್ದರೇ, ಪಕ್ಷೇತರ ಅಭ್ಯರ್ಥಿ ಶೋಭಾ 206 ಮತ ಪಡೆದು ಪರಾಜಿತರಾಗಿದರು. ಕಾಂಗ್ರೆಸ್‌ನ ಆಶಾ 145 ಮತ ಪಡೆದಿ ದ್ದಾರೆ. 17ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯ ರ್ಥಿ ರಾಜೇಂದ್ರ ಪ್ರಸಾದ್ 701 ಮತ ಪಡೆದು ಜಯಶಾಲಿಯಾಗಿದ್ದರೇ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಶ್ರೀನಿವಾಸ್ 668 ಮತ ಪಡೆದು ಪರಾಜಿತರಾಗಿದ್ದಾರೆ. ಕೇವಲ 33 ಮತಗಳ ಅಂತರದಿಂದ ರಾಜೇಂದ್ರ ಪ್ರಸಾದ್ ಗೆಲುವು ಸಾಧಿಸಿದ್ದಾರೆ.
ಚುನಾವಣೆ ಬಳಿಕ ಗೆಲುವು ಸಾಧಿಸಿದ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಮನೆಮನೆಗೆ ತೆರಳಿ ಹಿರಿಯರಿಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದು ಕಂಡು ಬಂತು. ತಮಟೆ ವಾದ್ಯಗಳ ಮೂಲಕ ಪ್ರತಿ ಮನೆಗಳಿಗೆ ತೆರಳಿ ಮತದಾರರಿಂದ ಆಶೀರ್ವಾದ ಪಡೆದರು.
ಕಾಂಗ್ರೆಸ್‌ಗೆ ಕೈತಪ್ಪಿದ ಎರಡು ಸ್ಥಾನ: ಈ ಬಾರಿಯ ಪುರಸಭೆ ಉಪಚುನಾವಣೆಯಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹಾಗೂ ಆನೇಕಲ್ಲಿನ ಹಾಲಿ ಶಾಸಕ ಬಿ. ಶಿವಣ್ಣ ಕೂಡ ಪ್ರಚಾರ ನಡೆಸಿದ್ದರು. ಅವರು ಜಿಲ್ಲಾ ಕಾಂಗ್ರೆಸ್ ಸದಸ್ಯರು ಚುನಾವಣೆ ಲೆಕ್ಕಪತ್ರವನ್ನು ಸಲ್ಲಿಸುವುದು ವಿಳಂಬ ಮಾಡಿದ ಹಿನ್ನೆಲೆ, ಅವರನ್ನು ಅಮಾನತು ಮಾಡಲಾಗಿತ್ತು.
ಅದಾದ ಬಳಿಕ ಮೂರು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎರಡು ಸ್ಥಾನವನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿದೆ. ಸದ್ಯ ಆನೇಕಲ್ ಪುರಸಭೆ ಅಧ್ಯಕ್ಷಗಿರಿ ಯಲ್ಲಿರುವ ಎನ್ .ಎಸ್ ಪದ್ಮನಾಭ ಅವರಿಗೆ ಅಧಿಕಾರವನ್ನು ನಡೆಸಲು ಬೇಕಾದ ಸದಸ್ಯ ಬೆಂಬಲ ಇದೆ. ಆದರೆ, ಮುಂದಿನ ದಿನಗಳಲ್ಲಿ ಇನ್ನು ಯಾವ ರೀತಿಯಲ್ಲಿ ಹಾವು-ಏಣಿ ಆಟ ನಡೆಯಲಿದೆ ಎನ್ನುವುದರ ಬಗ್ಗೆ ಕಾದುನೋಡಬೇಕಿದೆ.
ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯಾಬಲ 15ಕ್ಕೆ ಇಳಿಕೆ
ಒಟ್ಟಾರೆ ಆನೇಕಲ್ ಪುರಸಭೆಯ 27 ವಾರ್ಡ್ ಗಳ ಪೈಕಿ 17 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ಚುನಾವಣಾ ಆಯೋಗಕ್ಕೆ ಲೆಕ್ಕವನ್ನು ಅವಧಿಯಲ್ಲಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ 3 ವಾರ್ಡ್‌ಗಳಿಗೆ ಉಪ ಚುನಾವಣೆ ನಡೆದಿತ್ತು. ಹಾಲಿ ಕಾಂಗ್ರೆಸ್‌ನ ಸಂಖ್ಯಾಬಲ 15ಕ್ಕೆ ಇಳಿದಿದ್ದು, ಬಿಜೆಪಿಯ ಬಲ 12ಕ್ಕೆ ಏರಿದೆ. ಪುರಸಭೆಯ ಆಡಳಿತ ಕಾಂಗ್ರೆಸ್ ವಶದಲ್ಲಿದ್ದು, ಪುರಸಭೆ ಅಧ್ಯಕ್ಷ ಎನ್ .ಎಸ್ ಪದ್ಮನಾಭ ನೇತೃತ್ವದಲ್ಲಿ ಮುಂದುವರಿಯಲಿದೆ.