ಕಲಬುರಗಿ: ವಿನಾಕಾರಣ ಬಂಧಿಸಲಾಗಿರುವ ಆಂದೋಲಾ ಸಿದ್ದಲಿಂಗ ಮಹಾಸ್ವಾಮೀಜಿಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಹಾಗೂ ಹಿಂದೂ ಧರ್ಮದ ಮುಖಂಡರ ತೇಜೋವಧೆ ನಿಲ್ಲಿಸುವಂತೆ ಆಗ್ರಹಿಸಿ ನಾಡಿನ ವಿವಿಧ ಮಠಾಧೀಶರು, ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಂಘಟನೆಗಳ ಕಾರ್ಯಕರ್ತರು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಆಂದೋಲಾದಲ್ಲಿ ಅಂಗಡಿಗಳ ತೆರವು ವಿಚಾರದಲ್ಲಿ ಎರಡು ಕೋಮಿನ ನಡುವೆ ಗಲಾಟೆಗಳು ನಡೆದಿವೆ. ಈ ಕುರಿತು
ಜೇವರ್ಗಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಆದರೆ ಸಿದ್ದಲಿಂಗ ಮಹಾಸ್ವಾಮಿಗಳು ಯಾವುದೇ ಗಲಾಟೆಯಲ್ಲಿ
ಪಾಲ್ಗೊಳ್ಳದೇ ಇದ್ದರೂ ರಾಜಕೀಯ ದುರುದ್ದೇಶದಿಂದ ಹಾಗೂ ರಾಜ್ಯ ಸರ್ಕಾರದ ನಿಯೋಜನೆಯಂತೆ ಹಿಂದು ಶಕ್ತಿಗಳ ದಮನಕ್ಕಾಗಿ ಶ್ರೀಗಳು ಕೊಲೆಗೆ ಪ್ರಚೋದನೆ ನೀಡಿದ್ದಾರೆಂದು ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ.
ಅಲ್ಲದೇ ಯಾವುದೇ ನೋಟಿಸ್ ನೀಡದೇ ಬಂಧಿಸಲಾಗಿದೆ. ಇದು ಹಿಂದುಗಳ ಹತ್ತಿಕ್ಕುವ ತಂತ್ರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರಮೋದ ಮುತಾಲಿಕ ಮಾತನಾಡಿ, ಆಂದೋಲಾ ಶ್ರೀಗಳನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ತನ್ನ ನಡೆಯನ್ನು ಮಗದೊಮ್ಮೆ ನಿರೂಪಿಸಿದೆ. ಹೀಗಾಗಿ ಹಿಂದುಗಳೆಲ್ಲ ಒಗ್ಗಟ್ಟಾಗಿ ಹಿಂದು ದಮನ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ ಎಂದು ಕರೆ ನೀಡಿದರು.
ಸಿದ್ದಲಿಂಗ ಮಹಾಸ್ವಾಮಿಗಳು ಹಿಂದು ಧರ್ಮದ ಪ್ರಭಾವಿ ಮಠಾಧೀಶರಾಗಿದ್ದು, ಪುರಾತನ ಮಠದ ಪೀಠಾಧಿಪತಿಗಳಾದ್ದಾರೆ. ಶ್ರೀಗಳ ಬಂಧನದಿಂದ ಅಪಾರ ಭಕ್ತ ಬಳಗಕ್ಕೆ ನೋವುಂಟಾಗಿದೆ. ಒಂದು ವೇಳೆ ಭಕ್ತರೆಲ್ಲ ರೊಚ್ಚಿಗೆದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ರೇವೂರ ಬಿ ಮಠದ ಶ್ರೀಕಂಠ ಶಿವಾಚಾರ್ಯರು, ಯಾದಗಿರಿಯ ಸೊಪ್ಪಿ ಬಸವೇಶ್ವರ ಮಠದ ಚನ್ನವೀರ ಸ್ವಾಮೀಜಿ, ಸೇಡಂನ ಗುರುಬಸವ ಸ್ವಾಮೀಜಿ, ವಿಶ್ವ ಹಿಂದು ಪರಿಷದ್‌ನ ಜಿಲ್ಲಾಧ್ಯಕ್ಷ ಸುಭಾಷ ಕಾಂಬಳೆ, ವಿಭಾಗ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಕಾರ್ಯದರ್ಶಿ ಅಂಬರೇಷ ಸುಲೇಗಾಂವ, ಹಿಂದು ಜನಗಾಜೃತಿ ಸೇವಾ ದಳದ ರಾಜ್ಯ ಉಪಾಧ್ಯಕ್ಷ ಶಶಿಕಾಂತ ಆರ್. ದೀಕ್ಷಿತ, ಪ್ರಮುಖರಾದ ರಾಜಗೋಪಾಲರೆಡ್ಡಿ, ನಾಮದೇವ ರಾಠೊಡ ಕರಹರಿ, ನಾಗನಹಳ್ಳಿ, ಇಂದಿರಾ ಶಕ್ತಿ ಹಾಗೂ ಮುಂತಾದವರಿದ್ದರು.