ಹೈದರಾಬಾದ್: ಹಲವು ವಲಯಗಳಿಂದ ಭಾರೀ ವಿರೋಧ ವ್ಯಕ್ತವಾದ ಬಳಿಕ ವಿವಾದಿತ ಮೂರು ರಾಜಧಾನಿಗಳ ಮಸೂದೆಯನ್ನು ಆಂಧ್ರಪ್ರದೇಶ ಸರ್ಕಾರ ವಾಪಸ್ ಪಡೆದಿರುವುದಾಗಿ ಸೋಮವಾರ(ನವೆಂಬರ್ 22) ತಿಳಿಸಿದೆ.
ಇದನ್ನೂ ಓದಿ:ಚಿತ್ರರಂಗದಲ್ಲಿ 30 ವರ್ಷ: ನನ್ನ ಹಸಿವು ತಣಿಯುವುದಿಲ್ಲ; ಅಜಯ್ ದೇವಗನ್
ಪ್ರಸ್ತಾವಿತ ಮೂರು ರಾಜಧಾನಿಗಳ ಕಾಯ್ದೆ ವಿರುದ್ಧ ಕಳೆದ ಎರಡು ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಪ್ರಸ್ತಾಪಿತ ಮಸೂದೆಯಲ್ಲಿ ಕಾರ್ಯಕಾರಿ ರಾಜಧಾನಿ, ವೈಜಾಗ್, ಶಾಸಕಾಂಗ ರಾಜಧಾನಿ ಅಮರಾವತಿ ಮತ್ತು ನ್ಯಾಯಾಂಗ ರಾಜಧಾನಿ ಕರ್ನೂಲ್ ಎಂದು ಉಲ್ಲೇಖಿಸಲಾಗಿತ್ತು.
ಮೂರು ರಾಜಧಾನಿ ಮಸೂದೆ ವಿರುದ್ಧ ತೀವ್ರ ಪ್ರತಿಭಟನೆ ಎದುರಿಸಿದ ಬಳಿಕ ಸೋಮವಾರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಸೂದೆಯನ್ನು ವಾಪಸ್ ಪಡೆದಿರುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ್ದರು ಎಂದು ವರದಿ ಹೇಳಿದೆ.
ಆಂಧ್ರಪ್ರದೇಶದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕಾಗಿ ಹೆಚ್ಚು ರಾಜಧಾನಿಗಳ ಅಗತ್ಯವಿದೆ ಎಂಬುದನ್ನು ನಾವು ನಂಬಿದ್ದೇವು. ಆದರೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮಸೂದೆಯನ್ನು ವಾಪಸ್ ಪಡೆಯುತ್ತಿದ್ದೇವೆ. ನಾವು ಶೀಘ್ರವೇ ನೂತನ ಮಸೂದೆಯನ್ನು ಮಂಡಿಸಲಿದ್ದೇವೆ ಎಂದು ಸಿಎಂ ರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದರು.