ಚೆನ್ನೈ: ಆಂಧ್ರಪ್ರದೇಶ ಪ್ರವಾಸೋದ್ಯಮ ಸಚಿವೆ, ನಟಿ ಆರ್‌ಕೆ ರೋಜಾ ಅವರು ಚಂದ್ರಬಾಬು ನಾಯ್ಡು ಅವರನ್ನು ಬೆಂಬಲಿಸಿದ್ದಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಎಪ್ರಿಲ್ 28 ರಂದು ವಿಜಯವಾಡದಲ್ಲಿ ನಡೆದ ದಿಗ್ಗಜ ನಟ ಮತ್ತು ರಾಜಕಾರಣಿ ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಅವರ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಭಾಗವಹಿಸಿದ್ದರು.
ಎನ್‌ಟಿಆರ್ ಅವರ ಪುತ್ರ ನಂದಮೂರಿ ಬಾಲಕೃಷ್ಣ ಕಾರ್ಯಕ್ರಮ ಆಯೋಜಿಸಿದ್ದರು. ಎನ್ ಟಿಆರ್ ಅವರ ಅಳಿಯ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಟಿಡಿಪಿ ಅಧ್ಯಕ್ಷ ನಾಯ್ಡು ಅವರನ್ನು ಶ್ಲಾಘಿಸಿದ ರಜನಿಕಾಂತ್ ‘ದೂರದೃಷ್ಟಿಯ ರಾಜಕೀಯ ನಾಯಕ ನಾಯ್ಡು ಅವರಿಂದಾಗಿ ಹೈದರಾಬಾದ್ ಹೈಟೆಕ್ ಸಿಟಿಯಾಗಿ ಹೊರಹೊಮ್ಮಿದೆ ಎಂದು ಹೈದರಾಬಾದನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ್ದರು.
ಬಾಪಟ್ಲಾ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೋಜಾ, ”ಚಂದ್ರಬಾಬು ನಾಯ್ಡು ಬಗ್ಗೆ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ ಭಾಷಣ ನಗೆಪಾಟಲಿಗೀಡಾಗಿದೆ. ನಾಯ್ಡು ಅವರ ಆಳ್ವಿಕೆ 2003 ರಲ್ಲಿ ಕೊನೆಗೊಂಡಿತು. ಅವರ ಪ್ರಕಾರ, 20 ವರ್ಷಗಳ ಕಾಲ ಆಂಧ್ರಪ್ರದೇಶವನ್ನು ಆಳಲು ಸಾಧ್ಯವಾಗದ ವ್ಯಕ್ತಿ ಅದರ ಅಭಿವೃದ್ಧಿಗೆ ಹೇಗೆ ಹೊಣೆಗಾರನಾಗಬಹುದು?” ಎಂದು ಪ್ರಶ್ನಿಸಿದ್ದಾರೆ.
”ಎನ್‌ಟಿಆರ್ ಅವರು ನಾಯ್ಡು ಮೇಲೆ ಸ್ವರ್ಗದಿಂದ ಆಶೀರ್ವಾದ ಮಾಡುತ್ತಿದ್ದಾರೆ” ಎಂದು ರಜನಿಕಾಂತ್ ಹೇಳಿದ್ದಕ್ಕೆ ಟೀಕಿಸಿದ ರೋಜಾ, ”ಟಿಡಿಪಿ ಅಧ್ಯಕ್ಷ ಎನ್‌ಟಿಆರ್‌ಗೆ ಬೆನ್ನಿಗೆ ಚೂರಿ ಹಾಕಿದ್ದು ಎಲ್ಲರಿಗೂ ಗೊತ್ತು. ಹಾಗಾದರೆ, ದಿವಂಗತ ರಾಜಕಾರಣಿ ನಾಯ್ಡು ಅವರನ್ನು ಹೇಗೆ ಆಶೀರ್ವದಿಸಬಹುದು?” ಎಂದು ಪ್ರಶ್ನಿಸಿದರು.
ಎನ್‌ಟಿಆರ್ ಕೊನೆಯದಾಗಿ ಹೇಳಿದ ಒಂದು ಹೇಳಿಕೆಯನ್ನು ಸಹ ಅವರು ಉಲ್ಲೇಖಿಸಿ, ”ತಮ್ಮ ಅಳಿಯ ಕಳ್ಳ ಮತ್ತು ಯಾರೂ ಅವನನ್ನು ನಂಬಬಾರದು” ಎಂದಿದ್ದರು. ಈ ಹೇಳಿಕೆಯ ಬಗ್ಗೆ ರಜನಿಕಾಂತ್ ಅವರಿಗೆ ತಿಳಿದಿಲ್ಲದಿದ್ದರೆ, ಅದರ ಸಿಡಿಯನ್ನು ಅವರಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ.