ಅಮರಾವತಿ: ಪಾಪ ಹೀಗಾಗಬಾರದಾಗಿತ್ತು….! ಹತ್ತು ವರ್ಷದ ಆ ಬಾಲಕನಿಗೆ ತಾಯಿ ಅಸುನೀಗಿದ್ದಾಳೆ ಎಂಬ ಅರಿವು ಬಂದಿರಲೇ ಇಲ್ಲ. ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ದಿನಗಳ ಕಾಲ ಅಸುನೀಗಿದ ತಾಯಿಯ ಜತೆಗೆ ಆತ ನಿದ್ದೆ ಮಾಡಿದ್ದಾನೆ. ದುಃಖದ ವಿಚಾರವೆಂದರೆ ಅವರು ಕೆಲ ದಿನಗಳ ಹಿಂದಷ್ಟೇ ಪಿಎಚ್.ಡಿ ಪೂರ್ತಿಗೊಳಿಸಿದ್ದರು. ಮಾ.9ರಂದು ಅವರು ಕರ್ನಾಟಕದ ಬೆಳಗಾವಿಗೆ ಬಂದು ಅವರು ಪಿಎಚ್.ಡಿ ಪದವಿ ಸ್ವೀಕಾರ ಮಾಡಬೇಕಾಗಿತ್ತು.
ಇಂಥ ಒಂದು ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ರಾಜ್ಯಲಕ್ಷ್ಮೀ (41) ಎಂಬುವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆಕೆಯ ಹತ್ತು ವರ್ಷದ ಮಗ ಶ್ಯಾಮ್ ಕಿಶೋರ್ ಶಾಲೆಯೊಂದರಲ್ಲಿ ವಿದ್ಯಾರ್ಥಿ. ನಾಲ್ಕು ದಿನಗಳ ಹಿಂದೆ ಅವರು ಸಹಜವಾಗಿಯೇ ಅಸುನೀಗಿದ್ದರು.
ಅದನ್ನು ಅರಿಯದ ಮಗ ಶ್ಯಾಮ್‌ಕಿಶೋರ್ ಸತತ ನಾಲ್ಕು ದಿನಗಳ ಕಾಲ ತಾಯಿ ಮಲಗಿ ನಿದ್ದೆ ಮಾಡಿದ್ದಾಳೆ ಎಂದು ತಿಳಿದುಕೊಂಡು ತಪ್ಪದೆ ಯುನಿಫಾರ್ಮ್ ಧರಿಸಿ, ಶಾಲೆಗೆ ಹೋಗುತ್ತಿದ್ದ ಮತ್ತು ಮನೆಗೆ ಬಂದು ರಾತ್ರಿ ತಾಯಿಯ ಜತೆಗೆ ನಿದ್ದೆ ಮಾಡುತ್ತಿದ್ದ. ಶನಿವಾರ ಶ್ಯಾಮ್‌ಗೆ ತಾಯಿಯ ದೇಹ ವಾಸನೆ ಬರುತ್ತಿರುವುದನ್ನು ಗಮನಿಸಿ, ಆತಂಕದಿಂದ ಮಾವ (ತಾಯಿಯ ಸಹೋದರ) ದುರ್ಗಾಪ್ರಸಾದ್ ಎಂಬುವರಿಗೆ ಫೋನ್ ಮಾಡಿದ್ದ. ಚಿತ್ತೂರ್‌ನಲ್ಲಿ ವಾಸಿಸುತ್ತಿದ್ದ ಅವರು ಧಾವಿಸಿ ಬಂದಿದ್ದಾರೆ.
ಇದನ್ನೂ ಓದಿ:ಭಟ್ಕಳ: “ದಿ ಕಾಶ್ಮೀರಿ ಫೈಲ್ಸ್” ಪ್ರದರ್ಶನಕ್ಕಾಗಿ ಚಿತ್ರಮಂದಿರಕ್ಕೆ ಮುತ್ತಿಗೆ
ಈ ನಡುವೆ, ಅವರು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನವರೆಲ್ಲ ತಾಯಿಯ ಬಗ್ಗೆ ಕೇಳಿದಾಗ, ಆಕೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದಾನೆ ಶ್ಯಾಮ್. ಪೊಲೀಸರು ಬಂದು ಸ್ಥಳಕ್ಕೆ ಬಂದು ರಾಜ್ಯಲಕ್ಷ್ಮೀ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಅದರ ಪ್ರಕಾರ ಅವರು ಸಹಜವಾಗಿಯೇ ಅಸುನೀಗಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ತಿಳಿದ್ದಾರೆ. ಸಹೋದರನಿಗೆ ಫೋನ್ ಮಾಡಿದ್ದ ರಾಜ್ಯಲಕ್ಷ್ಮಿ ತನಗೆ ಕೊಂಚ ತಲೆನೋವು ಇದ್ದ ಬಗ್ಗೆ ಮತ್ತು ಬೆಳಗಾವಿಗೆ ತೆರಳಿ ಪಿಎಚ್.ಡಿ ಪದವಿ ಸ್ವೀಕರಿಸಿ ವಾಪಸಾದ ಬಳಿಕ ವೈದ್ಯರ ಸಲಹೆ ಪಡೆಯುವ ಬಗ್ಗೆ ಹೇಳಿಕೊಂಡಿದ್ದಾಗಿ ದುರ್ಗಾಪ್ರಸಾದ್ ಹೇಳಿದ್ದಾರೆ.