ಚಿತ್ತೂರ್(ಆಂಧ್ರಪ್ರದೇಶ): ಲಾಕ್ ಡೌನ್ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕ 28ವರ್ಷದ ಯುವಕ ಬೆಂಗಳೂರಿನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಚಿತ್ತೂರು ಪ್ರದೇಶ ತಲುಪುತ್ತಿದ್ದಂತೆಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಈತ ಚಿತ್ತೂರ್ ಜಿಲ್ಲೆಯ ಮಿಟ್ಟಾಪಲ್ಲೆ ಗ್ರಾಮದಲ್ಲಿರುವ ಮನೆ ಸಮೀಪ ಸಾಗುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತವೆಂದರೆ ಈ ಯುವಕ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರಬಹುದು ಎಂಬ ಹೆದರಿಕೆಯಿಂದ ಯಾರೊಬ್ಬರೂ ಆತನ ಹತ್ತಿರಕ್ಕೆ ಸುಳಿಯಲಿಲ್ಲ. ಅಷ್ಟೇ ಅಲ್ಲ ಮಿಟ್ಟಾಪಲ್ಲೆ ಗ್ರಾಮಸ್ಥರು ಕೂಡಾ ಆತನ ಶವವನ್ನು ಮನೆಗೆ ತರಲು ಅವಕಾಶ ನೀಡಲಿಲ್ಲ ಎಂದು ವರದಿ ವಿವರಿಸಿದೆ.
ಮೃತ ಯುವಕನನ್ನು ಹರಿಪ್ರಸಾದ್ (28ವರ್ಷ) ಎಂದು ಗುರುತಿಸಲಾಗಿದೆ. ಈತ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಿದ ಈತನ ಗೆಳೆಯರು ಹಾಗೂ ಕುಟುಂಬದ ಸದಸ್ಯರು ಶವವನ್ನು ಮುಟ್ಟಲೂ ಹೆದರಿ ದೂರ ನಿಂತಿದ್ದರು ಎಂದು ವರದಿ ಹೇಳಿದೆ.
ಕೊನೆಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಶವವದಿಂದ ಸ್ಯಾಂಪಲ್ಸ್ ತೆಗೆದು ಆರೋಗ್ಯ ಇಲಾಖೆ ಅಧಿಕಾರಿಗಳು ಪರೀಕ್ಷೆ ನಡೆಸಿ ಕೋವಿಡ್ 19 ನೆಗೆಟಿವ್ ಎಂದು ಘೋಷಿಸಿದ್ದರು.
ಹರಿಪ್ರಸಾದ್ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ. ಈತ ಟಿವಿ ರೋಗಿಯಾಗಿದ್ದ. ಅತಿಯಾದ ಬಿಸಿಲಿನಲ್ಲಿ ದೀರ್ಘ ವಾಗಿ ನಡೆದ ಪರಿಣಾಮ ಡಿಹೈಡ್ರೇಶನ್ ನಿಂದ ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಪೊಲೀಸರ ನೆರವಿನೊಂದಿಗೆ ಕುಟುಂಬದ ಸದಸ್ಯರು ಅಂತಿಮ ಸಂಸ್ಕಾರ ನೆರವೇರಿಸಿದರು.