Advertisement

ದೇಗುಲಗಳಲ್ಲಿ ಸಂಭ್ರಮವಿಲ್ಲ; ಜ.1ರಂದು ಹೊಸ ವರ್ಷ ಆಚರಿಸದಂತೆ ಆದೇಶ

12:51 PM Dec 25, 2017 | Team Udayavani |

ಅಮರಾವತಿ: ಪ್ರತಿ ವರ್ಷ ಜನವರಿ 1 ಬಂತೆಂದರೆ ಆಂಧ್ರಪ್ರದೇಶದ ಬಹುತೇಕ ಎಲ್ಲ ದೇವಾಲಯಗಳೂ ಹೂವು, ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುತ್ತವೆ. ಭಕ್ತರೂ ದೇವಾಲಯಗಳಿಗೆ ಧಾವಿಸಿ, ವಿಶೇಷ ಪೂಜೆ, ಪ್ರಾರ್ಥನೆಗಳಲ್ಲಿ ತೊಡಗಿರುತ್ತಾರೆ. ಆದರೆ, ಇಂಥ ಸಂಭ್ರಮ ಈ ಬಾರಿಯ ಹೊಸ ವರ್ಷದಂದು ಇರುವುದಿಲ್ಲ. ಏಕೆ ಗೊತ್ತಾ? ಯಾವ ದೇವಾಲಯವೂ ಜ.1ರಂದು ಹೊಸ ವರ್ಷ ಆಚರಣೆ ಮಾಡಬಾರದು, ದೇಗುಲಗಳಲ್ಲಿ ದೀಪಾಲಂಕಾರ, ಹೂವಿನ ಅಲಂಕಾರ ಮಾಡಬಾರದು, ವಿಶೇಷ ಪೂಜೆ,  ದರ್ಶನಗಳನ್ನು ಹಮ್ಮಿಕೊಳ್ಳಬಾರದು ಎಂದು ಆಂಧ್ರದ ಎಲ್ಲ ದೇವಸ್ಥಾನಗಳಿಗೂ ಮುಜರಾಯಿ ಇಲಾಖೆ ಸುತ್ತೋಲೆ ರವಾನಿಸಿದೆ.

Advertisement

ಜ.1ರಂದು ಹೊಸ ವರ್ಷ ಆಚರಿಸುವುದು ಭಾರತೀಯ ವೇದ ಕಾಲದ ಸಂಸ್ಕೃತಿಯಲ್ಲ. ಶುಭಾಶಯ ವಿನಿಮಯ ಮಾಡಿಕೊಳ್ಳುವುದು, ಹಬ್ಬದಂತೆ ಹೊಸ ವರ್ಷ ಆಚರಿಸುವುದು ಭಾರತೀಯ ವೈದಿಕ ಸಂಸ್ಕೃತಿಯಲ್ಲ. ಯುಗಾದಿ ಆಚರಿಸುವುದಷ್ಟೇ ಭಾರತದ ಸಂಸ್ಕೃತಿ. ಹೀಗಾಗಿ, ಜ.1ರಂದು ಯಾವುದೇ ದೇವಾಲಯಗಳನ್ನು ಹೂವು, ದೀಪಗಳಿಂದ ಅಲಂಕರಿಸಬಾರದು. ಹಬ್ಬದ ವಾತಾವರಣ ಸೃಷ್ಟಿಸಬಾರದು ಎಂದು ರಾಜ್ಯ ಮುಜರಾಯಿ ಇಲಾಖೆಯಡಿ ಬರುವ ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್‌ನ ಸುತ್ತೋಲೆ ತಿಳಿಸಿದೆ.

ತಿಮ್ಮಪ್ಪನಿಗೆ ಅನ್ವಯವಾಗಲ್ಲ:
ಇತರೆ ದೇವಸ್ಥಾನಗಳಿಗೆ ಹೋಲಿಸಿದರೆ ಆಂಧ್ರದ ಅತಿದೊಡ್ಡ ದೇಗುಲವಾದ ತಿರುಮಲದಲ್ಲಂತೂ ಹೊಸ ವರ್ಷದ ದಿನ ಜನಸಂದಣಿ ಅಧಿಕವಾಗಿರುತ್ತದೆ. ಅಲ್ಲದೆ, ಇಲ್ಲಿ ವರ್ಷದ ಪ್ರತಿ ದಿನವೂ ಹೂವು, ದೀಪಗಳ ಅಲಂಕಾರ ಇದ್ದಿದ್ದೇ. ಮುಜರಾಯಿ ಇಲಾಖೆ ಹೊರಡಿಸಿರುವ ಆದೇಶವು ತಿಮ್ಮಪ್ಪನ ದೇಗುಲಕ್ಕೆ ಅನ್ವಯವಾಗುವುದಿಲ್ಲ. ತಿರುಮಲವು ಸ್ವಾಯತ್ತ ಸಂಸ್ಥೆಯಾಗಿರುವ ಕಾರಣ, ನಿಯಮ ಇಲ್ಲಿಗೆ ಅನ್ವಯಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next