ಹೈದರಾಬಾದ್: ವೈಎಸ್ ಆರ್ ಕಾಂಗ್ರೆಸ್ ಸ್ಥಾಪಕ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಒಂದು ವಾರದ ನಂತರ ರಾಜದ್ರೋಹದ ಆರೋಪದ ಮೇಲೆ ವೈಎಸ್ ಆರ್ ಕಾಂಗ್ರೆಸ್ ನ ಬಂಡಾಯ ಮುಖಂಡ, ನರಸಾಪುರಂ ಸಂಸದ ಕನುಮುರಿ ರಘುರಾಮ್ ಕೃಷ್ಣಂ ರಾಜು ಅವರನ್ನು ಆಂಧ್ರಪ್ರದೇಶದ ಸಿಐಡಿ ಶುಕ್ರವಾರ(ಮೇ 14) ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಹಂನಲ್ಲಿದ್ದ ಪ್ರಧಾನಿಗೆ ಕೋವಿಡ್ 2ನೇ ಅಲೆ ತಕ್ಕ ಪಾಠ ಕಲಿಸಿದೆ: ಡಾ. ಪುಷ್ಪಾ ಅಮರ್‌ನಾಥ್
ರಾಜ್ಯ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ಆರೋಪದ ಮೇಲೆ ಸಂಸದ ರಾಜು ಅವರನ್ನು ಹೈದರಾಬಾದ್ ನಿವಾಸದಲ್ಲಿ ಬಂಧಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.
ಸಂಸದ ಕನುಮುರಿ ರಘುರಾಮ್ ಕೃಷ್ಣಂ ರಾಜು ವಿರುದ್ಧ ಸೆಕ್ಷನ್ 124(ಎ) (ದೇಶದ್ರೋಹ), 153(ಎ) ವಿವಿಧ ಗುಂಪುಗಳ ನಡುವೆ ದ್ವೇಷ ಹರಡುವುದು ಮತ್ತು 505 ಸಾರ್ವಜನಿಕವಾಗಿ ಕಿಡಿಗೇಡಿತನ ಉಂಟು ಮಾಡುವ ಆರೋಪದಡಿ ದೂರು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಸಂಸದ ರಾಜು ಅವರು ನಿಶ್ಚಿತ ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣಗಳಲ್ಲಿ ತೊಡಗಿದ್ದಲ್ಲದೇ ಸರ್ಕಾರದ ವಿರುದ್ಧ ಅಸಮಾಧಾನವ್ಯಕ್ತಪಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಾರದ ವಿರುದ್ಧ ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿದ್ದರು ಎಂದು ರಾಜು ಅವರ ವಿರುದ್ಧ ಆರೋಪಿಸಲಾಗಿದೆ ಎಂದು ವರದಿ ಹೇಳಿದೆ.